ಬೆಂಗಳೂರು: ಇತ್ತೀಚೆಗೆ ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ್ದ ದೂರವಾಣಿ ಕದ್ದಾಲಿಕೆ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಕಾರವಾರದ ಕೈಗಾದಲ್ಲಿ ಗುಪ್ತದಳ ಸ್ಥಾಪಿಸಿದ್ದು, ಅಲ್ಲಿ ಎಲ್ಲಾ ವಿಪಕ್ಷ ನಾಯಕರ ದೂರವಾಣಿ ಕದ್ದಾಲಿಸಲಾಗುತ್ತಿದೆ ಎಂದು ಜೆಡಿಎಸ್ ಮುಖಂಡ ರಮೇಶ್ ಬಾಬು ಗಂಭೀರವಾಗಿ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಿಷ್ಟು:
ರಾಜ್ಯದಲ್ಲಿ ಎರಡು ಕಡೆ ದೂರವಾಣಿ ಕದ್ದಾಲಿಕೆ ನಡೆಯುತ್ತಿದೆ. ಕಾರವಾರದ ಕೈಗಾ ಅಣುಸ್ಥಾವರದಲ್ಲಿ ಗುಪ್ತದಳ ಸ್ಥಾಪಿಸಿ ಮೊಬೈಲ್ ಗೆ ಕದ್ದಾಲಿಕೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಪೊಲೀಸರೂ ಕೂಡಾ ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದಾರೆ. ಇದಕ್ಕೆ ಐಜಿಪಿ ಹಂತದ ಅಧಿಕಾರಿಯನ್ನು ನೇಮಕ ಮಾಡಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೂರವಾಣಿಯನ್ನು ಕದ್ದಾಲಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ವಿಪಕ್ಷಗಳನ್ನು ಹಣಿಯಲು ದೂರವಾಣಿ ಕದ್ದಾಲಿಸಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರಕಾರ ಎರಡೂ ಕಡೆಯಿಂದಲೂ ದೂರವಾಣಿ ಕದ್ದಾಲಿಸುತ್ತಿದೆ. ಜೆಡಿಎಸ್ ಮುಖಂಡರ ಮೊಬೈಲ್ ಗೆ ಗುಪ್ತದಳ ಕರೆ ಮಾಡಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಅದು ಗುಪ್ತದಳ ಇಲಾಖೆಯದ್ದು ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ದೂರವಾಣಿ ಕದ್ದಾಲಿಕೆ ನಡೆಯುತ್ತಿರುವ ಬಗ್ಗೆ ದೂರು ನೀಡಲಾಗಿದೆ ಎಂದು ರಮೇಶ್ ಬಾಬು ತಿಳಿಸಿದ್ದಾರೆ.