Advertisement

ತೆಲಸಂಗ: ಪ್ರಯಾಣಿಕರ ದಾರಿ ತಪ್ಪಿಸುವ ಮಾರ್ಗಸೂಚಿ ಫಲಕಗಳು

05:17 PM Jun 10, 2024 | Team Udayavani |

ಉದಯವಾಣಿ ಸಮಾಚಾರ
ತೆಲಸಂಗ: ರಸ್ತೆಗಳ ಬದಿಗಳಲ್ಲಿ ಅಳವಡಿಸುವ ಗ್ರಾಮಗಳ ಮಾರ್ಗಸೂಚಿ ಫಲಕಗಳು ಮಾರ್ಗಸೂಚಿಯಾಗಿರಬೇಕು. ಆದರೆ ಅಥಣಿ ತಾಲೂಕಿನ ಕಕಮರಿಯಿಂದ ತೆಲಸಂಗ ಸಾವಳಗಿವರೆಗೆ ಅಭಿವೃದ್ಧಿ ಪಡಿಸಿರುವ ಕರ್ನಾಟಕ ಎಸ್‌.ಎಚ್‌ 260 ರಸ್ತೆ ಬದಿಯಲ್ಲಿ ಅಳವಡಿಸಿರುವ ಗ್ರಾಮಗಳ ಕಿ.ಮೀ ಮಾರ್ಗಸೂಚಿ ಫಲಕಗಳು ಪ್ರಯಾಣಿಕರಿಗೆ ದಾರಿ ತಪ್ಪಿಸುತ್ತಿವೆ.

Advertisement

ಫಲಕಗಳಲ್ಲಿ ಕಿ.ಮೀ. ಲೋಪದೋಷಗಳಾಗಿವೆ. ಹಾಲಳ್ಳಿ ಮಾರ್ಗದಿಂದ ತೆಲಸಂಗ ಕ್ರಾಸ್‌ ರಸ್ತೆ ದಾಟುವ ಮುನ್ನ ಹಾಕಿರುವ ಫಲಕದಲ್ಲಿ ತೆಲಸಂಗ 2 ಕಿ.ಮೀ. ಬರೆಯುವ ಬದಲು 3 ಕಿ.ಮೀ ಅಂತ ಬರೆಯಲಾಗಿದೆ. ಆಶ್ಚರ್ಯವೆಂದರೆ ನಾಲ್ಕು ಹೆಜ್ಜೆ ಅಂತರದಲ್ಲಿಯೇ ರಸ್ತೆ ಕ್ರಾಸ್‌ ಮಾಡಿದ ನಂತರ ಇನ್ನೊಂದು ಫಲಕದಲ್ಲಿ ತೆಲಸಂಗ 4 ಕಿ.ಮೀ ಅಂತ ಫಲಕದಲ್ಲಿದೆ. ಅಲ್ಲದೇ ಈ ನೂತನ ಫಲಕದ ಪಕ್ಕದಲ್ಲೇ ಹಳೇ ಕಲ್ಲಿನ ಫಲಕದಲ್ಲಿ ತೆಲಸಂಗ 2 ಕಿ.ಮೀ ಅಂತ ಸ್ಪಷ್ಟವಾಗಿ ಬರೆದಿದ್ದರೂ 3 ಕಿ.ಮೀ, 4
ಕಿ.ಮೀ ಅಂತ ತಪ್ಪಾದ ಫಲಕ ಹಾಕಿ ಗೊಂದಲ ಸೃಷ್ಟಿಸಲಾಗಿದೆ.

ತೆಲಸಂಗ ಗ್ರಾಮದ ಅಂಬೇಡ್ಕರ್‌ ವೃತ್ತದಲ್ಲೂ ತಪ್ಪು ಫಲಕ ಹಾಕಲಾಗಿದೆ. 4 ಕಿ.ಮೀ ಅಂತರದ ಕನ್ನಾಳ ಗ್ರಾಮಕ್ಕೆ 6.5 ಕಿ.ಮೀ ಅಂತ, 10 ಕಿ.ಮೀ ಅಂತರದ ಕಕಮರಿ ಗ್ರಾಮಕ್ಕೆ 13 ಕಿ.ಮೀ ಅಂತ  ಹಾಕಲಾಗಿದೆ. ಫಲಕ ಹಾಕಿ 8 ತಿಂಗಳ ಕಳೆದರೂ ಫಲಕ ತಪ್ಪೆಂದು ಗೊತ್ತಾಗದ ಅಧಿಕಾರಿಗಳ

ವರ್ತನೆಗೆ ಜನ ಬೇಸತ್ತಿದ್ದಾರೆ. ಕಕಮರಿಯಿಂದ ತೆಲಸಂಗ ಮಾರ್ಗಕ್ಕೆ ಕಕಮರಿಯಲ್ಲಿ ಅಳವಡಿಸಿರುವ ಫಲಕದಲ್ಲಿ ತೆಲಸಂಗ 10 ಕಿ.ಮೀ ಅಂತ ಸರಿಯಾಗಿಯೇ ಇದೆ. ಈ ಫಲಕದೊಂದಿಗೆ ಅಳವಡಿಸಿರುವ ಇನ್ನುಳಿದ ಫಲಕಗಳಲ್ಲಿ ತಪ್ಪಾಗಿ ನಮೂದಿಸಿ ಅಳವಡಿಸಿರುವ ಫಲಕಗಳಿಂದ ದೂರದ ಪ್ರಯಾಣಿಕರು ಲೋಕೋಪಯೋಗಿ ಇಲಾಖೆಗೆ ಹಿಡಿಶಾಪ ಹಾಕುವಂತಾಗಿದೆ.

ಕುಸಿದ ರಸ್ತೆ: ತೆಲಸಂಗ ಕ್ರಾಸ್‌ದಿಂದ ಹಾಲಳ್ಳಿ ಮಾರ್ಗವಾಗಿ ಹೋಗುವ ಪೋಳ ಅವರ ತೋಟದ ಬಳಿ ಈ ನೂತನ ರಸ್ತೆ ಕುಸಿದಿದೆ. ಇದರಿಂದ ಜೋರಾಗಿ ಬಂದ್‌, ಬೈಕ್‌, ಕಾರ್‌ ಸೇರಿದಂತೆ ವಿವಿಧ ವಾಹನಗಳು ದಿಢೀರ್‌ ವೇಗದಲ್ಲಿ ಜಂಪ್‌ ಆಗಿ ಚಾಲಕನ ನಿಯಂತ್ರಣ ತಪ್ಪುತ್ತಿವೆ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ.

Advertisement

ಅಧಿಕಾರಿಗಳ ವಿರುದ್ಧ ಆಕ್ರೋಶ
ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಪ್ಯಾಕೇಜ್‌ ಸಂಖ್ಯೆ 508, ಅಥಣಿ ತಾಲೂಕಿನ ರಾಜ್ಯ ಗಡಿ-ಕಕಮರಿ-ತೆಲಸಂಗ-ಸಾವಳಗಿ ರಸ್ತೆ ಸುಧಾರಣೆ ಗುತ್ತಿಗೆ ಮೊತ್ತ 2323.00 ಲಕ್ಷ ರೂ.ಗಳು, ಅಭಿವೃದ್ಧಿ ಪಡಿಸಿರುವ ರಸ್ತೆ ಉದ್ದ 16.00 ಕಿ.ಮೀ. ಕಾಮಗಾರಿ ಪ್ರಾರಂಭ 04-07-2022, ಮುಕ್ತಾಯ 03-01-2024, ಗುತ್ತಿಗೆ ಅವಧಿ 18 ತಿಂಗಳು. ಅವಧಿ ಮುಗಿದು 6 ತಿಂಗಳು ಕಳೆದರೂ ತಪ್ಪಾದ ಫಲಕ ಸರಿಪಡಿಸಿಲ್ಲ. ಕುಸಿದ ರಸ್ತೆಗೆ ಡಾಂಬರ್‌ ಹಾಕಿಲ್ಲ. ಬೀದಿದೀಪ ಉರಿಯುತ್ತಿಲ್ಲ. ಇದರಿಂದ ಅ ಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಪ್ಪು ಫಲಕಗಳಿದ್ದರೆ ಖಂಡಿತ ಅವುಗಳನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಕುಸಿದ ರಸ್ತೆ ಬಗ್ಗೆ ನಮ್ಮ ಎಂಜಿನಿಯರ್‌ ಕಳಿಸಿ ಅದನ್ನು ಸರಿಪಡಿಸುವ ಕೆಲಸವನ್ನು ಶೀಘ್ರ ಮಾಡಲಾಗುವುದು.
*ಜಯಾನಂದ ಹಿರೇಮಠ,
ಎಇಇ, ಪಿಡಬ್ಲ್ಯುಡಿ ಅಥಣಿ.

ಬರುವ ಒಂದೆರೆಡು ವಾರಗಳಲ್ಲಿ ತಪ್ಪುಗಳಾಗಿರುವ ಎಲ್ಲ ನಾಮಫಲಕ ತೆರವುಗೊಳಿಸಿ ಗ್ರಾಮಗಳ ಅಂತರದ ಸರಿಯಾದ ಕಿ.ಮೀ ಮಾರ್ಗಸೂಚಿ ಫಲಕ ಅಳವಡಿಸುವ ಕಾರ್ಯ ಪೂರ್ಣಗೊಳ್ಳಬೇಕು. ಬೀದಿದೀಪ ಉರಿಯಬೇಕು. ಕುಸಿದ ರಸ್ತೆ ಸರಿಪಡಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ.
*ಬುರಾನ ಅರಟಾಳ, ಯುವ ಮುಖಂಡ, ತೆಲಸಂಗ.

■ ಜಗದೀಶ ತೆಲಸಂಗ

Advertisement

Udayavani is now on Telegram. Click here to join our channel and stay updated with the latest news.

Next