ಹೈದರಾಬಾದ್: ಹದಿನೇಳು ಮಹಿಳೆಯರನ್ನು ಹತ್ಯೆಗೈದಿದ್ದ ಸರಣಿ ಹಂತಕ ಯೆರುಕಾಲಿ ಶ್ರೀನು (47ವರ್ಷ) ಎಂಬಾತನಿಗೆ ತೆಲಂಗಾಣದ ಜೋಗುಳಾಂಬ-ಗದ್ವಾಲ್ ಜಿಲ್ಲಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅಕ್ರಮ ಆಸ್ತಿ ಗಳಿಕೆ: ಹರಿಯಾಣ ಮಾಜಿ ಸಿಎಂ ಚೌಟಾಲಾಗೆ 4 ವರ್ಷಗಳ ಜೈಲು
ಶೇಂದಿ ಅಂಗಡಿಯಲ್ಲಿ ಮಹಿಳೆಯರ ಸ್ನೇಹ ಬೆಳೆಸಿ ನಂತರ ಅವರನ್ನು ಗುರಿಯಾಗಿರಿಸಿಕೊಂಡು ಶ್ರೀನು ಹತ್ಯೆಗೈಯುತ್ತಿದ್ದ. ಇದರಲ್ಲಿ ಚಿಟ್ಟಿ ಅಲಿವೇಲಮ್ಮ(53) ಕೊಲೆ ಪ್ರಕರಣದಲ್ಲಿ ಶ್ರೀನು ದೋಷಿ ಎಂದು ಮೂರನೇ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಘೋಷಿಸಿದ್ದು, ಗುರುವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದರು. ಇನ್ನೂ 16 ಪ್ರಕರಣಗಳಲ್ಲಿ ಶಿಕ್ಷೆ ಬಾಕಿ ಉಳಿದಿದೆ.
2019ರಲ್ಲಿ ಅಲಿವೇಲಮ್ಮ ಕೊಲೆ ಪ್ರಕರಣದಲ್ಲಿ ಸರಣಿ ಹಂತಕನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಶ್ರೀನು ಕಳೆದ ಒಂದು ದಶಕದಲ್ಲಿ ಇತರ 16 ಮಹಿಳೆಯರನ್ನು ಹತ್ಯೆಗೈದಿರುವ ಅಂಶ ಬಾಯ್ಬಿಟ್ಟಿದ್ದ. ಮಹಿಳೆಯರಿಂದ ದೋಚಿದ್ದ ವಸ್ತುಗಳನ್ನು ದಾಸ್ತಾನು ಮಾಡಿಟ್ಟಿ ಆರೋಪದಲ್ಲಿ ಶ್ರೀನು ಪತ್ನಿ ಸಾಲಮ್ಮಳನ್ನೂ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ಶ್ರೀನು ಶೇಂದಿ ಅಂಗಡಿಗೆ ಬರುವ ಮಹಿಳೆಯರ ಜತೆ ಸ್ನೇಹ ಬೆಳೆಸಿ ನಂತರ ಪಿಕ್ ನಿಕ್ ಹೆಸರಿನಲ್ಲಿ ಮಹಿಳೆಯರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಅವರ ಜತೆ ಕುಡಿದ ನಂತರ ಹತ್ಯೆಗೈಯುತ್ತಿದ್ದ. ಆ ನಂತರ ಮಹಿಳೆಯರ ಬಳಿ ಇದ್ದ ಚಿನ್ನ, ಬೆಳ್ಳಿಯ ಆಭರಣಗಳನ್ನು ದೋಚುತ್ತಿದ್ದ ಎಂದು ವರದಿ ತಿಳಿಸಿದೆ.