ಹೈದರಾಬಾದ್: ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಅನ್ನು ಅಣ್ಣನೇ ಬರ್ಬರವಾಗಿ ಹ*ತ್ಯೆಗೈದ ಘಟನೆ ತೆಲಂಗಾಣದ ರಾಯ್ ಪೋಲೆ ಗ್ರಾಮದ ಸಮೀಪದ ಇಬ್ರಾಹಿಂಪಟ್ಟಣಂ ಮಂಡಲ್ ಪ್ರದೇಶದಲ್ಲಿ ನಡೆದಿದ್ದು, ಇದೊಂದು ಮರ್ಯಾದಾ ಹ*ತ್ಯಾ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸ್ ಕಾನ್ಸ್ ಟೇಬಲ್ ನಾಗಮಣಿ ಹಯಾತ್ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಕೆ ಶ್ರೀಕಾಂತ್ ಎಂಬವರನ್ನು ವಿವಾಹವಾಗಿದ್ದರು. ಆದರೆ ನಾಗಮಣಿ ಮನೆಯವರು ಅನ್ಯ ಜಾತಿಯ ಶ್ರೀಕಾಂತ್ ಜತೆಗಿನ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ವರದಿ ವಿವರಿಸಿದೆ.
ರಾಯ್ ಪೋಲೆಯಿಂದ ಮುನ್ನೆಗುಡಾಕ್ಕೆ ನಾಗಮಣಿ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ, ಆಕೆಯ ಸಹೋದರ ಪರಮೇಶ್, ತನ್ನ ಕಾರಿನಿಂದ ಡಿಕ್ಕಿ ಹೊಡೆದು ಬಿಟ್ಟಿದ್ದ. ಇದರಿಂದ ನಾಗಮಣಿ ರಸ್ತೆ ಮೇಲೆ ಉರುಳಿ ಬಿದ್ದಿದ್ದು, ಆಗ ಮಚ್ಚಿನಿಂದ ದಾಳಿ ನಡೆಸಿದ್ದ. ಮಾರಣಾಂತಿಕ ಗಾಯದಿಂದ ನಾಗಮಣಿ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನ್ನ ಸಹೋದರಿಯ ಲವ್ ಮ್ಯಾರೇಜ್ ನಿಂದ ಆತ ಆಕ್ರೋಶಕ್ಕೊಳಗಾಗಿ ಕೊಂದಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ನಾಗಮಣಿ 2020ರ ಬ್ಯಾಚ್ ನ ಪೊಲೀಸ್ ಕಾನ್ಸ್ ಟೇಬಲ್. ಆಕೆ ಮನೆಯವರ ಇಷ್ಟದ ವಿರುದ್ಧವಾಗಿ ಶ್ರೀಕಾಂತ್ ನನ್ನು ವಿವಾಹವಾಗಿದ್ದು, ಇದು ಕುಟುಂಬದೊಳಗೆ ಘರ್ಷಣೆ ಕಾರಣವಾಗಿತ್ತು. ಆರೋಪಿ ಪರಾರಿಯಾಗಿದ್ದು, ಶೀಘ್ರವೇ ಆತನ ಪತ್ತೆಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.