ಹೈದರಾಬಾದ್: ದೇಶದಲ್ಲೇ ಅತ್ಯಂತ ದೊಡ್ಡದಾದ ಹನುಮಂತ ದೇಗುಲವನ್ನು ನಿರ್ಮಾಣ ಮಾಡಲು ತೆಲಂಗಾಣದ ಕೆ.ಸಿ.ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರ ಮುಂದಾಗಿದೆ. ಇದಕ್ಕಾಗಿಯೇ ಒಂದು ಸಾವಿರ ಕೋಟಿ ರೂ. ವೆಚ್ಚ ಮಾಡಲು ಅದು ನಿರ್ಧರಿಸಿದೆ.
ಈಗಾಗಲೇ ಇರುವ ಕೊಂಡಗಟ್ಟು ಹನುಮಂತ ದೇವಾಲಯಲನ್ನು ಜೀರ್ಣೋದ್ಧಾರ ಮಾಡುವ ಮೂಲಕ ಈ ದೊಡ್ಡ ದೇಗುಲ ನಿರ್ಮಿಸಲು ಚಿಂತನೆ ರೂಪಿಸಲಾಗಿದೆ. ಇದಕ್ಕಾಗಿ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸಿಎಂ ಕೆ.ಸಿ.ಚಂದ್ರಶೇಖರ ರಾವ್ ಸೂಚಿಸಿದ್ದಾರೆ.
ಹೈದರಾಬಾದ್‌ನಿಂದ 200 ಕಿ.ಮೀ. ದೂರದಲ್ಲಿರುವ ಜಗತಿಯಲ್‌ನಲ್ಲಿ ಕೊಂಡಗಟ್ಟು ದೇಗುಲವಿದೆ. ಈ ದೇಗುಲಕ್ಕೆ ಭೇಟಿ ನೀಡಿದರೆ, ರೋಗ-ರುಜಿನಗಳು ದೂರಾಗುತ್ತವಲ್ಲದೇ, ಮಕ್ಕಳಿಲ್ಲದವರಿಗೆ ಸಂತಾನಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬುದು ಜನರ ನಂಬಿಕೆ. ಪ್ರತಿ ಮಂಗಳವಾರ-ಶನಿವಾರ 20 ಸಾವಿರಕ್ಕೂ ಅಧಿಕ ಮಂದಿ ಈ ದೇಗುಲಕ್ಕೆ ಭೇಟಿ ನೀಡಿದರೆ, ಸಾಮಾನ್ಯ ದಿನಗಳಲ್ಲಿ ಮೂರು ಸಾವಿರ ಮಂದಿ ಬರುತ್ತಿದ್ದಾರೆ. ಹನುಮ ಜಯಂತಿಯಂದು 10 ಲಕ್ಷಕ್ಕೂ ಅಧಿಕ ಭಕ್ತಾದಿಗಳು ದೇವರ ದರ್ಶನಕ್ಕೆಂದು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಗುಲದ ಜೀರ್ಣೋದ್ಧಾರ ಹಾಗೂ ಸೌಲಭ್ಯಗಳನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿರುವುದಾಗಿ ಸರ್ಕಾರ ತಿಳಿಸಿದೆ. ಇದಕ್ಕಾಗಿ ದೇಗುಲಕ್ಕೆ ಭೇಟಿ ನೀಡಿದ್ದ ವೇಳೆ ಕೆಸಿಆರ್ ಯೋಜನೆ ಘೋಷಿಸಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ 500 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವುದಾಗಿಯೂ ಹೇಳಿದ್ದಾರೆ.
ವಿಚಿತ್ರವೆಂದರೆ, ಇತ್ತೀಚೆಗಷ್ಟೇ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಅವರು, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 100 ವಿಧಾನಸಭಾ ಕ್ಷೇತ್ರಗಳಲ್ಲಿ ರಾಮನ ದೇಗುಲ ನಿರ್ಮಿಸುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಜೀರ್ಣೋದ್ಧಾರ ನಿರ್ಧಾರ ಹೊರಬಿದ್ದಿದೆ.