ತೆಲಂಗಾಣದ ಜನಪ್ರಿಯ ಯೋಜನೆ ರೈತ ಬಂಧು ಯೋಜನೆಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಚುನಾವಣ ಆಯೋಗ ಸೂಚನೆ ನೀಡಿದ್ದು, ಬಹಳ ಸುದ್ದಿಯಾಗಿದೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯೋಜನೆ ಮುಂದುವರಿಸಬೇಡಿ ಎಂಬುದು ಆಯೋಗದ ಆದೇಶ. ಯೋಜನೆ ಸ್ಥಗಿತವಾಗಿದ್ದಕ್ಕೆ ಬಿಆರ್‌ಎಸ್, ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. ಏನಿದು ರೈತ ಬಂಧು ಯೋಜನೆ? ಇಲ್ಲಿದೆ ಮಾಹಿತಿ…
ರೈತ ಬಂಧು ಯೋಜನೆ
2018ರಲ್ಲಿ ತೆಲಂಗಾಣದ ಸರಕಾರ ಈ ಯೋಜನೆ ಜಾರಿಗೆ ತಂದಿದೆ. ಹಿಂಗಾರು ಅವಧಿಯಲ್ಲಿ ರೈತರಿಗೆ ಪ್ರತೀ ಎಕರೆಗೆ 5 ಸಾವಿರ ರೂ. ಸಹಾಯ ಧನ ನೀಡುವ ಯೋಜನೆ ಇದಾಗಿದೆ. ಇದನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ರವಾನಿಸಲಾಗು ತ್ತದೆ. ಮುಂಗಾರು ಅವಧಿಯಲ್ಲೂ ಎಕರೆಗೆ 5 ಸಾವಿರ ರೂ. ನೀಡಲಾಗುತ್ತದೆ. ಅಂದರೆ ವರ್ಷಕ್ಕೆ 2 ಬಾರಿ ಸಹಾಯಧನ ಸಿಗುತ್ತದೆ.
ಚುನಾವಣ ಆಯೋಗ ಸ್ಥಗಿತ ಮಾಡಿದ್ದು ಏಕೆ?
ಆರಂಭದಲ್ಲಿ ಚುನಾವಣ ಆಯೋಗ ಈ ಹಣ ವರ್ಗಾವಣೆಗೆ ಅನುಮತಿ ನೀಡಿತ್ತು. ಹಿಂಗಾರು ಬಿತ್ತನೆ ಮಾಡುವ ರೈತರಿಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿತ್ತು. ಆದರೆ, ಕಾಂಗ್ರೆಸ್, ಬಿಜಿಪಿ ಈ ಸಂಬಂಧ ಚುನಾವಣ ಆಯೋಗಕ್ಕೆ ದೂರು ನೀಡಿ, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ಆರೋಪಿಸಿ ದ್ದವು. ಜತೆಗೆ ತೆಲಂಗಾಣದ ವಿತ್ತ ಸಚಿವ ಹರೀಶ್ ರಾವ್ ಅವರು, ರೈತ ಬಂಧು ವಿಷಯ ವನ್ನು ಪ್ರಚಾರ ವೇಳೆ ಪ್ರಸ್ತಾಪಿಸಿದ್ದರು. ಹೀಗಾಗಿ, ಆಯೋಗವು ಯೋಜನೆ ಸ್ಥಗಿತಕ್ಕೆ ಸೂಚನೆ ನೀಡಿದೆ. ಆರಂಭದಲ್ಲೇ ಚುನಾವಣ ಆಯೋಗ ಈ ವಿಷಯವನ್ನು ಪ್ರಚಾರದಲ್ಲಿ ಪ್ರಸ್ತಾಪಿಸದಂತೆ ಷರತ್ತು ಹಾಕಿತ್ತು.
ಮುಂದೇನು?
ಸದ್ಯ ತೆಲಂಗಾಣ ಸರಕಾರ ಯೋಜನೆಯನ್ನು ಸ್ಥಗಿತ ಮಾಡಿದೆ. ಆದರೆ ಮುಂದೆ ನಮ್ಮದೇ ಸರಕಾರ ಬರಲಿದ್ದು, ಈ ಹಣವನ್ನು ಆಗ ಹಾಕುತ್ತೇವೆ ಎಂದು ಸಿಎಂ ಚಂದ್ರಶೇಖರ ರಾವ್ ಹೇಳಿದ್ದಾರೆ. ಅಂದರೆ ಡಿ.3ರ ಬಳಿಕ ಹಣ ಹಾಕಲಾಗುತ್ತದೆ ಎಂದಿದ್ದಾರೆ. ಜತೆಗೆ ಕಾಂಗ್ರೆಸ್ ವಿರುದ್ಧವೂ ಚಂದ್ರಶೇಖರ ರಾವ್ ಅವರು ಕಿಡಿಕಾರಿದ್ದಾರೆ.