ಬೆಂಗಳೂರು: ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ರೈತರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ರೈತ ಚೈತನ್ಯ ಹಾಗೂ ತೆಲಂಗಾಣ ಮಾದರಿಯಲ್ಲಿ ರೈತ ಬಂಧು ಯೋಜನೆಯನ್ನು ಅನುಷ್ಠಾನಕ್ಕೆ ತರ ಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಬಿಡದಿಯ ತಮ್ಮ ತೋಟದಲ್ಲಿ ಹಮ್ಮಿ ಕೊಂಡಿದ್ದ ರೈತ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಸುಮಾರು 78 ವಿಧಾನಸಭೆ ಕ್ಷೇತ್ರಗಳ ರೈತರ ಜತೆ ಆನ್‌ಲೈನ್ ಸಂವಾದ ನಡೆಸಿದ ಅವರು ಈ ಘೋಷಣೆ ಮಾಡಿದರು.
ರೈತರಿಗೆ ತಾಂತ್ರಿಕ ಶಕ್ತಿ ನೀಡುವುದರ ಜತೆಗೆ, ಆಯಾ ಭಾಗದಲ್ಲಿ ಬೆಳೆಯುವ ಬೆಳೆಗೆ ಜಾಗತಿಕ ಮಾರುಕಟ್ಟೆಯನ್ನು ಸೃಷ್ಟಿಸಲಾಗುವುದು. ರಾಜ್ಯದ ಪ್ರತೀ ಕೃಷಿ ಉತ್ಪನ್ನಕ್ಕೆ ಅತ್ಯು ತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದರ ಜತೆಗೆ ರೈತರು ಶಾಶ್ವತವಾಗಿ ಸಾಲಗಾರರು ಆಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಅಲ್ಲದೆ, ಕೃಷಿ ವಿಶ್ವ ವಿದ್ಯಾ ನಿಲಯಗಳಿಗೆ ಕಾಯಕಲ್ಪ ಮಾಡುವುದರ ಜತೆಗೆ, ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಲಾಗುವುದು. ಮುಖ್ಯವಾಗಿ ಸಂಶೋಧನೆಗೆ ಹೆಚ್ಚು ಆದ್ಯತೆ ಕೊಡಲಾಗುವುದು ಎಂದರು.
ಸಂಕ್ರಾಂತಿ ನಿಮಿತ್ತ ಮೂರು ದಿನಗಳ ಕಾಲ ಸ್ಥಗಿತಗೊಂಡಿದ್ದ ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಮಂಗಳವಾರದಿಂದ ಪುನರಾ ರಂಭಗೊಳ್ಳಲಿದೆ.