ಹೈದರಾಬಾದ್: ರ‍್ಯಾಗಿಂಗ್ ಮಾಡಿದ್ದಕ್ಕೆ ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳ ಬದುಕು ದಾರುಣ ಅಂತ್ಯವಾದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಡಿ ಪ್ರೀತಿ (26) ಮೃತ ವಿದ್ಯಾರ್ಥಿನಿ.
ಘಟನೆ ಹಿನ್ನೆಲೆ: ಕಾಕತೀಯ ವೈದ್ಯಕೀಯ ಕಾಲೇಜಿನಲ್ಲಿ ಮೊಹಮ್ಮದ್ ಅಲಿ ಸೈಫ್ ಎನ್ನುವ ಸೀನಿಯರ್ ವಿದ್ಯಾರ್ಥಿ ಪ್ರೀತಿ ಅವರಿಗೆ ರ‍್ಯಾಗಿಂಗ್ ಹಾಗೂ ಕಿರುಕುಳ ನೀಡಿದ್ದ. ಇದೇ ಕಾರಣದಿಂದ ಮನನೊಂದಿದ್ದ ಪ್ರೀತಿ ಬುಧವಾರ ( ಫೆ. 22 ರಂದು) ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುವ ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಪ್ರೀತಿ ಭಾನುವಾರ ರಾತ್ರಿ ( ಫೆ. 26 ರಂದು) ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಈ ಸಂಬಂಧ ಪ್ರೀತಿಯ ತಂದೆ ನೀಡಿದ ದೂರಿನ ಮೇರೆಗೆ ಎರಡನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಮೊಹಮ್ಮದ್ ಅಲಿ ಸೈಫ್ ನನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ರ‍್ಯಾಗಿಂಗ್ ಮಾಡಿದ ಆರೋಪದಡಿಯಲ್ಲಿ ಬಂಧಿಸಲಾಗಿದೆ.
ಈ ಹಿಂದೆ ಮೊಹಮ್ಮದ್ ಅಲಿ ಸೈಫ್ ವಿರುದ್ದ ಕಾಲೇಜು ಹಾಗೂ ಆಸ್ಪತ್ರೆಗೆ ದೂರು ನೀಡಿದ್ದರೂ, ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿ ತಿಳಿಸಿದೆ.