ತೆಲಂಗಾಣ: ನೆಚ್ಚಿನ ವಾಹನವನ್ನು ಖರೀದಿಸಲು ಬ್ಯಾಂಕ್ ನಲ್ಲಿ ಸಾಲ ಮಾಡಿ ಅಥವಾ ಡೌನ್ ಪೇಮೆಂಟ್ ಮಾಡುತ್ತೇವೆ. ಆದರೆ ಇಲ್ಲೊಬ್ಬ ಯುವಕ ತನ್ನ ಕನಸಿನ ಬೈಕ್ ಖರೀದಿಸಲು 2.85 ಲಕ್ಷ ರೂ. ಪಾವತಿಸಿದ ವಿಧಾನ ವೈರಲ್ ಆಗಿದೆ.
ತೆಲಂಗಾಣ ಮಂಚೇರಿಯಲ್ ಜಿಲ್ಲೆಯ ರಾಮಕೃಷ್ಣಾಪುರದ ತಾರಕರಾಮ ಕಾಲೋನಿಯ ಪಾಲಿಟೆಕ್ನಿಕ್ ವಿದ್ಯಾರ್ಥಿ ವೆಂಕಟೇಶ್ ಎನ್ನುವ ಯುವಕ ಕೆಟಿಎಂ ಸ್ಪೋರ್ಟ್ಸ್ ಬೈಕ್ ಖರೀದಿಸಿದ್ದಾನೆ. ಈತ ಹಣ ಪಾವತಿಸಿದ್ದು ಕ್ಯಾಶ್ ರೂಪದಲ್ಲಾದರೂ ಅದು ಕಂತೆ ಕಂತೆ ನೋಟುಗಳಿಂದಲ್ಲ. ಒಂದು ರೂಪಾಯಿ ನಾಣ್ಯಗಳವುಳ್ಳ ಚಿಲ್ಲರೆ ರೂಪದಲ್ಲಿ ಕೊಟ್ಟು!
ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ವೆಂಕಟೇಶ್ ಬಾಲ್ಯದಿಂದಲೇ 40 ರೂ.ವನ್ನು ಒಟ್ಟು ಮಾಡಿದ್ದಾನೆ. ಒಟ್ಟು 10 ಕೆಜಿಯಷ್ಟು 112 ಬ್ಯಾಗ್ ಗಳಲ್ಲಿ ಸುಮಾರು 2.85 ಲಕ್ಷ ರೂ.ವನ್ನು ಜೋಡಿಸಿ ಕೆಟಿಎಂ ಸ್ಪೋರ್ಟ್ಸ್ ಬೈಕ್ ಖರೀದಿಸಲು ಶೋ ರೂಮ್ ಗೆ ಹೋಗಿದ್ದಾನೆ. ವಾಹನವೊಂದರಲ್ಲಿ ಚಿಲ್ಲರೆ ತುಂಬಿದ ಬ್ಯಾಗ್ ಗಳನ್ನು ಈತ ತಂದಿದ್ದಾನೆ. ಯೂಟ್ಯೂಬ್ ಚಾನೆಲ್ ಗಾಗಿ ವಿಡಿಯೋ ಮಾಡಿಕೊಂಡೇ ಬೈಕ್ ಶೋ ರೂಮ್ ಗೆ ಹೋದ ವೆಂಕಟೇಶ್ ಅವರ 1 ರೂ. ಚಿಲ್ಲರೆ ಬ್ಯಾಗ್ ಗಳ ಹಣವನ್ನು ನೋಡಿ ಮೊದಲು ಅಲ್ಲಿನ ಸಿಬ್ಬಂದಿಗಳು ಅಷ್ಟೊಂದು ಹಣವನ್ನು ಚಿಲ್ಲರೆ ರೂಪದಲ್ಲಿ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.
ಬಳಿಕ ಬೈಕ್ ಮೇಲಿನ ವೆಂಕಟೇಶ್ ಅವರ ಆಸಕ್ತಿಯನ್ನು ನೋಡಿ ಹಣ ತೆಗೆದುಕೊಂಡಿದ್ದಾರೆ. ಒಂದೂವರೆ ದಿನ ಶೋ ರೂಮ್ ನ ಸಿಬ್ಬಂದಿಗಳು ಹಣ ಲೆಕ್ಕ ಮಾಡಿದ ಬಳಿಕ ವೆಂಕಟೇಶ್ ಅವರಿಗೆ ಬೈಕಿನ ಕೀಯನ್ನು ಕೊಟ್ಟಿದ್ದಾರೆ.
ಬೈಕ್ ಖರೀದಿಸಲು ಹೋದ ವೆಂಕಟೇಶ್ ಅವರ ಸಾಹಸ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.