ಹೈದರಬಾದ್: ಪೊಲೀಸ್ ಸಹಾಯವಾಣಿ ನಂಬರ್ (100)ಗೆ ನಿರಂತರವಾಗಿ ಕರೆ ಮಾಡಿದ ವ್ಯಕ್ತಿಯೊಬ್ಬರನ್ನು ತೆಲಂಗಾಣದ ನಲ್ಗೊಂಡಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಠಾಣೆ ಮುಂದೆಯೇ ದುರಂತ: ರಸ್ತೆ ದಾಟುತ್ತಿದ್ದ ಪಾದಚಾರಿಗಳ ಮೇಲೆ ಹರಿದ ಲಾರಿ; ಬಾಲಕಿ ಸಾವು
ತನ್ನ ಇಷ್ಟದ ಮಟನ್ ಕರಿ ಅಡುಗೆ ತಯಾರಿಸದ ಪತ್ನಿ ಮೇಲೆ ಕೋಪಗೊಂಡ ಪತಿ ನವೀನ್, ಪೊಲೀಸ್ ಠಾಣೆಯ ಸಹಾಯವಾಣಿಗೆ ಶುಕ್ರವಾರ(ಫೆ19) ಕರೆ ಮಾಡಿದ್ದ. ಆರಂಭದಲ್ಲಿ ನವೀನ್ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ, ಪತ್ನಿ ಮಟನ್ ಕರಿ ಮಾಡದಿರುವ ಬಗ್ಗೆ ದೂರು ಹೇಳಿದ್ದ. ಈ ಸಂದರ್ಭದಲ್ಲಿ ಆತ ಕುಡಿದು ಕರೆ ಮಾಡಿರಬಹುದು ಎಂದು ನಿರ್ಲಕ್ಷಿಸಿದ್ದರು ಎಂದು ವರದಿ ಹೇಳಿದೆ.
ಯಾವುದೇ ಹೆಚ್ಚಿನ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ನವೀನ್ ನಂತರ ಸತತವಾಗಿ ಆರು ಬಾರಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದ. ಕೂಡಲೇ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ಮುಟ್ಟಿಸಿದ್ದರು.
ನಂತರ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನ ನವೀನ್ ಮನೆಗೆ ಕಳುಹಿಸಲಾಗಿತ್ತು. ಆದರೆ ಮನೆಯಲ್ಲಿ ನವೀನ್ ಕುಡಿದು ಮಲಗಿದ್ದ, ಪೊಲೀಸರು ಆತನನ್ನು ಮನೆಯಲ್ಲೇ ಬಿಟ್ಟು ಹೊರಟಿದ್ದರು. ಇಷ್ಟಾದ ಮೇಲೂ ಪ್ರಕರಣ ಇಲ್ಲಿಗೆ ನಿಂತಿಲ್ಲ, ಶನಿವಾರ ಬೆಳಗ್ಗೆ ಕನಗಲ್ ಮಂಡಲ್ ನ ಚೆರ್ಲಾ ಗೌರಾರಾಮ್ ಗ್ರಾಮದಲ್ಲಿರುವ ಮನೆಗೆ ಪೊಲೀಸರು ಬಂದು ನವೀನ್ ನನ್ನು ವಶಕ್ಕೆ ಪಡೆದಿದ್ದರು.