ಮುಂಬಯಿ: ಇನ್ನೇನು ಕೆಲವೇ ದಿನಗಳಲ್ಲಿ ಚಳಿಗಾಲ ದೇಶವನ್ನು ಪ್ರವೇಶಿಸಲಿದೆ. ಈ ಸಂದರ್ಭದಲ್ಲಿ ನಿರ್ಗತಿಕರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೂಕ್ತ ವಸತಿ ನೀಡುತ್ತಿಲ್ಲವೆಂಬ ಆರೋಪ ತಪ್ಪಿಸಿಕೊಳ್ಳಲು ಹೊಸ ಯೋಜನೆಯನ್ನು ರೂಪಿಸಲಾಗಿದೆ. ರೈಲ್ವೆ ಬಳಕೆ ಮಾಡದ ಹಳೆಯ ಬೋಗಿಗಳನ್ನು ಅವರಿಗೆ ವಸತಿ ನೀಡಲು ಬಳಕೆ ಮಾಡುವ ಬಗ್ಗೆ ಕೇಂದ್ರ ಸರಕಾರ ವಿವಿಧ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದೆ. ಈ ಪೈಕಿ ತೆಲಂಗಾಣ ಹತ್ತು ರೈಲು ಬೋಗಿಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಅದಕ್ಕೆ ವಿದ್ಯುತ್ ಮತ್ತು ಇತರ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ. ಅವುಗಳನ್ನೇ ಮನೆಯನ್ನಾಗಿ ಬದಲಾಯಿ ಸುವ ಬಗ್ಗೆ ಪ್ರಾಯೋಗಿಕ ಕಾಮಗಾರಿಯನ್ನೂ ಆರಂಭಿಸಿದೆ ಎಂದು ನಗರಾಭಿವೃದ್ಧಿ ಸಚಿವಾಲಯ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕಿ ಎಲ್. ವಂದನಾ ಕುಮಾರ್, “5ರಿಂದ 10 ಬೋಗಿಗಳನ್ನು ಮನೆಯನ್ನಾಗಿ ಅಭಿವೃದ್ಧಿಪಡಿಸಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಇದಕ್ಕಾಗಿ ಭೂ ಪ್ರದೇಶವನ್ನೂ ಹುಡುಕುತ್ತಿದ್ದೇವೆ’ ಎಂದಿದ್ದಾರೆ.
ಇದೊಂದು ತಾತ್ಕಾಲಿಕ ಕ್ರಮ ಎಂದಿರುವ ಕೇಂದ್ರ, ಎಲ್ಲಾ ವಸತಿಹೀನರಿಗೆ ಸೂಕ್ತ ನೆಲೆಯೊಂದು ಸಿಗುವವರೆಗೆ ಈ ಕ್ರಮ ಚಾಲ್ತಿಯಲ್ಲಿ ಇಡಬಹುದು ಎಂದು ಹೇಳಿದೆ.
ಕೇಂದ್ರ ಸರಕಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಸುಮಾರು 10 ಲಕ್ಷ ವಸತಿ ಹೀನರು ಇದ್ದಾರೆ. ಆದರೆ, ಸರ್ಕಾರೇತರ ಸಂಸ್ಥೆಗಳ ಪ್ರಕಾರ, ಇಂಥ ನಿರ್ಗತಿಕರ ಸಂಖ್ಯೆ 30 ಲಕ್ಷ ಎಂದಿದೆ. ಅಂಕಿ-ಅಂಶಗಳ ವ್ಯತ್ಯಾಸವಿದ್ದರೂ ಕೇಂದ್ರದ ಈ ಆಲೋಚನೆಯಿಂದ ಕೆಲವು ನಿರ್ಗತಿಕರಿಗಾ ದರೂ ಇದರ ಲಾಭ ಸಿಗಬಹುದೆಂದು ನಿರೀಕ್ಷಿಸಲಾಗಿದೆ. ಪ್ರತಿ ವರ್ಷ ಚಳಿ, ಬಿಸಿಲಿಗೆ ಮೈಯ್ಯೊಡ್ಡುವ ಮೂಲಕ ನೂರಾರು ವಸತಿ ಹೀನರು ಸಾವನ್ನಪುತ್ತಿದ್ದು ಕಳೆದ ವರ್ಷ ನಗರಗಳಲ್ಲಿರುವ ನಿರ್ಗತಿಕರಿಗೆ ಸೂರು ಕಲ್ಪಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.