ಹೈದರಾಬಾದ್: ತೆಲಂಗಾಣದ ಬಿಆರ್‌ಎಸ್ ಶಾಸಕರ ಖರೀದಿಗೆ ಯತ್ನಿಸಲಾಗಿತ್ತೆಂಬ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ) ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ನೀಡಿದ್ದ ನೋಟಿಸ್‌ಗೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಭಾರತ ರಾಷ್ಟ್ರ ಸಮಿತಿ (ಈ ಹಿಂದಿನ ತೆಲಂಗಾಣ ರಾಷ್ಟ್ರ ಸಮಿತಿ) ಪಕ್ಷದ ಶಾಸಕರ ಖರೀದಿಗೆ ಯತ್ನಿಸಲಾಗಿತ್ತೆಂಬ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಿ.ಎಲ್. ಸಂತೋಷ್ ಅವರಿಗೆ ಎಸ್‌ಐಟಿ ಗುರುವಾರ ಎರಡನೇ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ಸಂಬಂಧ ಬಿ. ಎಲ್. ಸಂತೋಷ್ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಮೊದಲೇ ನಿರ್ಧರಿಸಲಾದ ಕೆಲ ಸಭೆಗಳ ಕಾರಣದಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಎಸ್‌ಐಟಿ ಅಧಿಕಾರಿಗಳು ಮತ್ತು ತೆಲಂಗಾಣ ಸರ್ಕಾರ ದುರುದ್ದೇಶದಿಂದಲೇ ಕಕ್ಷಿದಾರರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಂತೋಷ್ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಯಾವ ಆಧಾರದ ಮೇಲೆ ಸಮನ್ಸ್ ನೀಡಲಾಗಿದೆ ಎಂಬುದನ್ನು ತಿಳಿಸದ ಕಾರಣ ನೋಟಿಸ್ ರದ್ದುಗೊಳಿಸುವಂತೆ ಬಿ.ಎಲ್. ಸಂತೋಷ್ ಪರ ವಕೀಲರು ಮನವಿ ಮಾಡಿದ ನಂತರ ನ್ಯಾಯಾಲಯ ಎಸ್‌ಐಟಿ ನೋಟಿಸ್‌ಗೆ ತಡೆಯಾಜ್ಞೆ ನೀಡಿದೆ.
ಅಗತ್ಯ ವಿಚಾರಗಳ ಕೊರತೆಯನ್ನು ಉಲ್ಲೇಖೀಸಿ ನ್ಯಾಯಾಲಯವು ನೋಟಿಸ್‌ಗೆ ತಡೆಯಾಜ್ಞೆ ನೀಡಿತು. ಸೆಕ್ಷನ್ 51-ಎ ಅಡಿಯಲ್ಲಿ ನೋಟಿಸ್‌ಗೆ ಯಾವ ಸಾಕ್ಷ್ಯ ಅಥವಾ ಅನುಮಾನ ಅಥವಾ ಯಾವ ಆಧಾರದ ಮೇಲೆ ವ್ಯಕ್ತಿಯನ್ನು ಕರೆಸಲಾಗುತ್ತಿದೆ ಎಂಬುದನ್ನು ತಿಳಿಸಬೇಕು ಎಂದು ಮಧ್ಯಂತರ ಆದೇಶದಲ್ಲಿ ನ್ಯಾಯಾಲಯ ಎಸ್‌ಐಟಿಗೆ ಸೂಚನೆ ನೀಡಿ, ವಿಚಾರಣೆಯನ್ನು ಡಿ.5 ಮುಂದೂಡಿದೆ.
ಪ್ರಕರಣವನ್ನು ತ್ವರಿತ ವಿಚಾರಣೆ ನಡೆಸಬೇಕೆಂದು ಬಿ.ಎಲ್. ಸಂತೋಷ್ ಪರ ಹಿರಿಯ ವಕೀಲ ಪ್ರಕಾಶ್ ರೆಡ್ಡಿ ಅವರು ಮೇಲ್ಮನವಿ ಸಲ್ಲಿಸಿದ್ದರು.