ಬೆಂಗಳೂರು: ನೆರೆಯ ತೆಲಂಗಾಣಕ್ಕೆ ಕುಡಿಯುವ ನೀರು ಪೂರೈ ಸಲು ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಿಂದ 7 ಟಿಎಂಸಿ ನೀರು ಬಿಡಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಉತ್ತಮ ಕುಮಾರ್ ರೆಡ್ಡಿ ನೇತೃತ್ವದ
ನಿಯೋಗಕ್ಕೆ ಸಿಎಂ ಸಿದ್ದರಾಮಯ್ಯ ಈ ಭರವಸೆ ನೀಡಿದ್ದಾರೆ.
ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಉತ್ತಮಕುಮಾರ್ ರೆಡ್ಡಿ ನೇತೃತ್ವದ ನಿಯೋಗ, ತೆಲಂಗಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಹಾಗಾಗಿ ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಿಂದ ನಾಗಾರ್ಜುನ ಡ್ಯಾಂಗೆ 15
ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡಿತು. ಆದರೆ, ಮುಖ್ಯಮಂತ್ರಿಯವರು ಸದ್ಯ 7 ಟಿಎಂಸಿ ನೀರು ಬಿಡುವುದಾಗಿ ಭರವಸೆ ನೀಡಿದರು. ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತಮ ಕುಮಾರ್ ರೆಡ್ಡಿ, ನಾವು 15 ಟಿಎಂಸಿ ನೀರು ಬಿಡುವಂತೆ ಬೇಡಿಕೆ ಇಟ್ಟಿದ್ದೆವು. ಆದರೆ, ಕರ್ನಾಟಕದಲ್ಲಿ ಸತತ ಏಳು ವರ್ಷಗಳಿಂದ ಬರಗಾಲವಿದೆ. ನಮಗೂ ಕುಡಿಯುವ ನೀರಿನ ಸಮಸ್ಯೆಯಿದೆ. ಮಾನವೀಯತೆ ಆಧಾರದಲ್ಲಿ 7 ಟಿಎಂಸಿ ನೀರು ಬಿಡುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದರು.
ರಾಜೋಳಿಬಂಡಾ ಯೋಜನೆ ತ್ವರಿತಗೊಳಿಸಿ: ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದ ಗಡಿಭಾಗಗಳಿಗೆ ಹೊಂದಿಕೊಂಡಿರುವ ರಾಜೋಳಿ ಬಂಡಾ ತಿರುವು ಯೋಜನೆ ಕಳೆದ ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ಯೋಜನೆಗೆ ಅಗತ್ಯವಾದ ಹಣವನ್ನು ತೆಲಂಗಾಣವು ಕರ್ನಾಟಕಕ್ಕೆ ನೀಡಿದೆ. ಯೋಜನೆ ಪೂರ್ಣಗೊಂಡರೆ ತೆಲಂಗಾಣದ ಸುಮಾರು 78 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಆದರೆ, ಆಂಧ್ರಪ್ರದೇಶ ಈ ಯೋಜನೆಯನ್ನು ವಿರೋಧಿಸುತ್ತಿದೆ. ಕರ್ನಾಟಕ ಸರ್ಕಾರ ಈ ವಿರೋಧವನ್ನು ಲೆಕ್ಕಿಸದೆ ಯೋಜನೆ ಪೂರ್ಣಗೊಳಿಸಲು ಹಾಗೂ ನಾಲೆಗಳನ್ನು ಆಧುನೀಕರಿಸಲು ಮುಂದಾಗಬೇಕು. ಅಗತ್ಯವಾದರೆ ಪೊಲೀಸರ ರಕ್ಷಣೆ ಪಡೆಯಬೇಕು ಎಂದು ಉತ್ತಮ…ಕುಮಾರ್ ರೆಡ್ಡಿ ಇದೇ ವೇಳೆ ಸಲಹೆ ನೀಡಿದರು.
ಭೇಟಿ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ತೆಲಂಗಾಣ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸತೀಶ್ ಜಾರಕಿಹೊಳಿ ಇದ್ದರು. ನಿಯೋಗದಲ್ಲಿ ಉತ್ತಮಕುಮಾರ್ ರೆಡ್ಡಿ, ತೆಲಂಗಾಣದ ವಿರೋಧ ಪಕ್ಷದ ನಾಯಕ ಜಾನಾರೆಡ್ಡಿ, ಮುಖಂಡರಾದ ಹನುಮಂತರಾವ್, ಚನ್ನಾರೆಡ್ಡಿ, ಶಾಸಕರಾದ ಡಿ.ಕೆ.ಅರುಣಾ, ಟಿ.ಸಂಪತ್, ಮಲ್ಲರವಿ ಉಪಸ್ಥಿತರಿದ್ದರು.
ಕರ್ನಾಟಕದಲ್ಲೂ ಕಳೆದ ಏಳು ವರ್ಷಗಳಿಂದ ಬರಗಾಲವಿದೆ. ನಮಗೂ ಕುಡಿಯುವ ನೀರಿನ ಸಮಸ್ಯೆಯಿದೆ. ಈಗಾಗಲೇ ತೆಲಂಗಾಣಕ್ಕೆ 1.8 ಟಿಎಂಸಿ ನೀರು ಬಿಡಲಾಗಿದೆ. ಕುಡಿಯುವ ನೀರಿನ ತೆಲಂಗಾಣದ ಬೇಡಿಕೆಯನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿದ್ದು, ಇನ್ನೂ 5 ಟಿಎಂಸಿ ನೀರು ಬಿಡುಗಡೆ ಮಾಡುತ್ತೇವೆ. ಮುಂದೆ ಮಳೆ ಬಂದು ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಾದರೆ, ಇನ್ನೂ ಹೆಚ್ಚಿನ ಪ್ರಮಾಣದ ನೀರು ಕೊಡಲಾಗುವುದು. ರಾಜೋಳಿ ಬಂಡಾ ಯೋಜನೆ ಕಾಮಗಾರಿ ಬಗ್ಗೆ ಎರಡೂ ರಾಜ್ಯಗಳ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು.
ಸಿದ್ದರಾಮಯ್ಯ, ಮುಖ್ಯಮಂತ್ರಿ