Advertisement

ಕರುಣೆ ಬೇಕಿಲ್ಲ, ಕ್ರಮ ಕೈಗೊಳ್ಳಿ ; ಪ್ರಕರಣದ ವಿಚಾರಣೆಗೆ ತ್ವರಿತ ನ್ಯಾಯಾಲಯ

09:57 AM Dec 02, 2019 | Hari Prasad |

ಹೈದರಾಬಾದ್‌: ಮಾಧ್ಯಮಗಳು, ಪೊಲೀಸರು, ಹೊರಗಿನವರಿಗೆ ಪ್ರವೇಶವಿಲ್ಲ – ಕರುಣೆಗಿಲ್ಲಿ ಅವಕಾಶವಿಲ್ಲ, ನಮಗೆ ಬೇಕಿರುವುದು ಕಠಿನ ಕ್ರಮ ಮತ್ತು ನ್ಯಾಯ…’
ಇದು ಹೈದರಾಬಾದ್‌ನ ಶಂಶಾಬಾದ್‌ನ ಕಾಲೊನಿಯಲ್ಲಿ ರವಿವಾರ ರಾರಾಜಿಸಿದ ಫ‌ಲಕಗಳು. ಇದೇ ಕಾಲೊನಿಯ ನಿವಾಸಿಯಾಗಿದ್ದ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಲ್ಲಿನ ನಾಗರಿಕರನ್ನು ಎಷ್ಟು ಕೆರಳಿಸಿದೆಯೆಂದರೆ, ನ್ಯಾಯ ಸಿಗುವವರೆಗೂ ನಾವು ನಮ್ಮ ಹೋರಾಟ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

Advertisement

ಯಾರನ್ನು ಮಾತನಾಡಿಸಿದರೂ ಒಬ್ಬೊಬ್ಬರ ಬಾಯಲ್ಲೂ ಆಕ್ರೋಶಭರಿತ ಮಾತುಗಳೇ ಹೊರಬರುತ್ತಿವೆ. ‘ಗುರುವಾರವೇ ಘಟನೆ ನಡೆದಿದ್ದರೂ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌ ಇನ್ನೂ ಏಕೆ ಕ್ರಮದ ಭರವಸೆ ಕೊಟ್ಟಿಲ್ಲ,’ ‘ಆರೋಪಿಗಳನ್ನೇಕೆ ಇನ್ನೂ ಸುಮ್ಮನೆ ಬಿಟ್ಟಿದ್ದೀರಿ’, ‘ಪ್ರಧಾನಿ ಮೋದಿಯವರಿಗೆ ಟ್ವೀಟ್‌ ಮಾಡಲು ಇನ್ನೂ ಸಮಯ ಸಿಕ್ಕಿಲ್ಲವೇ’ ಎಂಬಿತ್ಯಾದಿ ಪ್ರಶ್ನೆಗಳ ಸುರಿಮಳೆಯಾಗುತ್ತಿವೆ.

ಅಲ್ಲಿಗೆ ಬರುವ ರಾಜಕಾರಣಿಗಳನ್ನೂ ಒಳಗೇ ಬಿಡದೇ ಸತಾಯಿಸಲಾಗುತ್ತಿದೆ. ಕಾಲೊನಿಯ ಗೇಟುಗಳಿಗೆ ಬೀಗ ಜಡಿಯಲಾಗಿದ್ದು, ರಾಜಕೀಯ ನಾಯಕರನ್ನು ಬಂದ ದಾರಿಯಲ್ಲೇ ವಾಪಸ್‌ ಕಳುಹಿಸಲಾಗುತ್ತಿದೆ.

ವಿಜಯವಾಡದಲ್ಲಿ ನಿರ್ಬಂಧ: ಈ ನಡುವೆ ತೀವ್ರ ಪ್ರತಿಭಟನೆಯನ್ನು ಕಂಡ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಡಿ.1 ರಿಂದ ಜ.15ರವರೆಗೆ ಅಂದರೆ ಬರೋಬ್ಬರಿ 46 ದಿನಗಳ ಕಾಲ ಸೆಕ್ಷನ್‌ 144 ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ 5ಕ್ಕಿಂತ ಹೆಚ್ಚು ಜನ ಗುಂಪುಗೂಡುವಂತಿಲ್ಲ, ಶಸ್ತ್ರಗಳು, ಕಲ್ಲು, ಕೋಲುಗಳು ಮತ್ತಿತರ ಹಾನಿ ಮಾಡಲು ಬಳಸುವಂಥ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ ಎಂದು ಪೊಲೀಸ್‌ ಆಯುಕ್ತ ದ್ವಾರಕ ತಿರುಮಲ ರಾವ್‌ ಆದೇಶ ಹೊರಡಿಸಿದ್ದಾರೆ.

ಮೂವರ ಅಮಾನತು: ಸಂತ್ರಸ್ತೆಯ ನಾಪತ್ತೆ ಕುರಿತು ಕುಟುಂಬ ಸದಸ್ಯರು ದೂರು ನೀಡಲು ಬಂದಾಗ ದೂರು ಸ್ವೀಕರಿಸಲು ವಿಳಂಬ ಮಾಡಿದ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಆರೋಪ ಕುರಿತು ವಿಸ್ತೃತ ತನಿಖೆ ಬಳಿಕ ಒಬ್ಬ ಸಬ್‌ಇನ್‌ಸ್ಪೆಕ್ಟರ್‌ ಹಾಗೂ ಇಬ್ಬರು ಕಾನ್‌ಸ್ಟೇಬ ಲ್‌ಗ‌ಳನ್ನು ಸಸ್ಪೆಂಡ್‌ ಮಾಡಿರುವುದಾಗಿ ಸೈಬರಾಬಾದ್‌ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

Advertisement

ತ್ವರಿತ ನ್ಯಾಯಾಲಯ: ಘಟನೆ ಕುರಿತು ಮೌನ ಮುರಿದಿರುವ ಸಿಎಂ ಚಂದ್ರಶೇಖರ್‌ ರಾವ್‌, ಪಶು ವೈದ್ಯೆಯ ಹತ್ಯೆ ಕುರಿತ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸಲಾಗುವುದು ಹಾಗೂ ಆ ಮೂಲಕ ಸಂತ್ರಸ್ತೆಗೆ ಆದಷ್ಟು ಬೇಗ ನ್ಯಾಯ ಒದಗಿಸಲಾಗುವುದು ಎಂದು ಘೋಷಿಸಿದ್ದಾರೆ.

‘ನಮ್ಮ ಮಕ್ಕಳನ್ನೂ ಸುಟ್ಟುಬಿಡಿ’ ‘ನಮ್ಮ ಮಕ್ಕಳು ನಿಜವಾಗಿಯೂ ತಪ್ಪು ಮಾಡಿದ್ದೇ ಹೌದಾದರೆ, ಅವರಿಗೆ ಬದುಕುವ ಯಾವ ಅರ್ಹತೆಯೂ ಇಲ್ಲ. ಅವರನ್ನೂ ಸುಟ್ಟು ಹಾಕಿಬಿಡಿ.’ ಹೀಗೆಂದು ಹೇಳಿರುವುದು ಪಶುವೈದ್ಯೆಯ ಕೊಲೆ ಆರೋಪಿಗಳ ಹೆತ್ತವರು. ಭಾನುವಾರ ಮಾತನಾಡಿದ ಆರೋಪಿ ಚೆನ್ನಕೇಶವುಲು ತಾಯಿ ಜಯಮ್ಮ ಹಾಗೂ ಪ್ರಮುಖ ಆರೋಪಿ ಆರೀಫ್ ನ ತಂದೆ ಹುಸೇನ್‌, ‘ತಪ್ಪು ಮಾಡಿದ್ದರೆ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಯಾವ ಶಿಕ್ಷೆಗೆ ಅರ್ಹರೋ ಅದೇ ಶಿಕ್ಷೆ ನೀಡಿ’ ಎಂದು ಹೇಳಿದ್ದಾರೆ. ನನಗೂ ಒಬ್ಬ ಮಗಳಿದ್ದಾಳೆ. ಸಂತ್ರಸ್ತೆಯ ತಾಯಿಯ ನೋವು ನನಗೆ ಅರ್ಥವಾಗುತ್ತದೆ ಎಂದೂ ಜಯಮ್ಮ ಹೇಳಿದ್ದಾರೆ.

ಕೊಲೆ ಮಾಡಿ ಬಂದೆ ಎಂದಿದ್ದ!
ನನ್ನ ಮಗ ಮೊಹಮ್ಮದ್‌ ನ.29ರ ತಡರಾತ್ರಿ 1 ಗಂಟೆಗೆ ಮನೆಗೆ ಬಂದ. ಅವನು ತೀವ್ರ ಭಯದಿಂದ ನಡುಗುತ್ತಿದ್ದ. ‘ನಾನು ಯಾರನ್ನೋ ಕೊಂದು ಬಂದೆ’ ಎಂದು ಪದೇ ಪದೆ ಹೇಳುತ್ತಿದ್ದ. ಈ ಬಗ್ಗೆ ಮತ್ತಷ್ಟು ಪ್ರಶ್ನಿಸಿದಾಗ, ‘ನಾನು ಲಾರಿಯನ್ನು ಒಂದು ರಸ್ತೆಯಿಂದ ಮತ್ತೂಂದು ರಸ್ತೆಗೆ ತಿರುಗಿಸುತ್ತಿದ್ದಾಗ, ಸ್ಕೂಟರ್‌ನಲ್ಲಿ ಬರುತ್ತಿದ್ದ ಯುವತಿಗೆ ಲಾರಿ ಢಿಕ್ಕಿ ಹೊಡೆಯಿತು. ಢಿಕ್ಕಿಯ ರಭಸಕ್ಕೆ ಅವಳು ಮೃತಪಟ್ಟಳು’ ಎಂದು ಹೇಳಿದ. ರಾತ್ರಿ 3 ಗಂಟೆಯ ಹೊತ್ತಿಗೆ ಪೊಲೀಸರು ಮನೆಯ ಬಾಗಿಲು ತಟ್ಟಿ, ಅವನನ್ನು ಬಂಧಿಸಿದರು ಎಂದು ಪ್ರಮುಖ ಆರೋಪಿಯ ತಾಯಿ ಹೇಳಿದ್ದಾರೆ.

ಬಾಗಿಲು ಮುಚ್ಚಿದ ದೇವಾಲಯ
ಪಶುವೈದ್ಯೆಯ ಅತ್ಯಾಚಾರ-ಕೊಲೆ ಘಟನೆಯ ಪ್ರತಿಭಟನಾರ್ಥವಾಗಿ ಹೈದರಾಬಾದ್‌ನ ಪ್ರಸಿದ್ಧ ಚಿಲ್ಕೂರ್‌ ಬಾಲಾಜಿ ದೇವಾಲಯವನ್ನು ಶನಿವಾರ ರಾತ್ರಿ 20 ನಿಮಿಷ ಮುಂಚಿತವಾಗಿಯೇ ಮುಚ್ಚಲಾಯಿತು. ನಂತರ ಎಲ್ಲ ಭಕ್ತರು ಹಾಗೂ ಅರ್ಚಕರು ‘ಮಹಾ ಪ್ರದಕ್ಷಿಣಂ’ ನಡೆಸುವ ಮೂಲಕ ಮಹಿಳೆಯರ ಸುರಕ್ಷತೆಗಾಗಿ ಪ್ರಾರ್ಥಿಸಿದರು.

ಮೆಕ್ಯಾನಿಕ್‌ಗಳು ದಿಟ್ಟಿಸಿ ನೋಡ್ತಾರೆ!
ತೆಲಂಗಾಣದ ಘಟನೆ ಕುರಿತು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ, ಮಹೀಂದ್ರಾ ಸಮೂಹದ ಮುಖ್ಯಸ್ಥ ಆನಂದ್‌ ಮಹೀಂದ್ರಾಗೆ ಯುವತಿಯೊಬ್ಬಳು ಟ್ವಿಟರ್‌ ಮೂಲಕ ದೂರು ನೀಡಿದ್ದಾಳೆ. ‘ನೋಯ್ಡಾದ ಮಹೀಂದ್ರಾ ಸರ್ವಿಸ್‌ ಸೆಂಟರ್‌ನಲ್ಲಿ ಮೆಕ್ಯಾನಿಕ್‌ಗಳು ಬೆಳಗ್ಗೆಯೇ ಹೊರಗೆ ನಿಂತುಕೊಂಡು, ನನ್ನನ್ನು ದಿಟ್ಟಿಸಿ ನೋಡುವುದು, ನಗುವುದು, ಗುಸು ಗುಸು ಮಾತನಾಡುವುದು ಮಾಡುತ್ತಾರೆ. ಇದರಿಂದ ನನಗೆ ತೀರಾ ಕಿರಿಕಿರಿ ಆಗಿದೆ’ ಎಂದು ಬರೆದುಕೊಂಡಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿರುವ ಆನಂದ್‌ ಮಹೀಂದ್ರಾ, ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next