ಸೈಬರಾಬಾದ್/ತೆಲಂಗಾಣ: ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬೆಂಕಿಹಚ್ಚಿ ಸುಟ್ಟು ಹಾಕಿರುವ ಪ್ರಕರಣದ ನಾಲ್ವರು ಆರೋಪಿಗಳನ್ನು ತೆಲಂಗಾಣ ಪೊಲೀಸರು ಎನ್ ಕೌಂಟರ್ ನಲ್ಲಿ ಹತ್ಯೆಗೈದಿರುವ ಘಟನೆ ಬಗ್ಗೆ ಪರ, ವಿರೋಧ ಚರ್ಚೆ ನಡೆಯುತ್ತಿದೆ. ಏತನ್ಮಧ್ಯೆ ಎನ್ ಕೌಂಟರ್ ನಡೆದ ಸ್ಥಳದಲ್ಲಿಯೇ ಸೈಬರಾಬಾದ್ ಪೊಲೀಸ್ ವರಿಷ್ಠಾಧಿಕಾರಿ ವಿಸಿ ಸಜ್ಜನವರ್ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಜ್ಜನರ್ ಹೇಳಿದ್ದಿಷ್ಟು:
ದಿಶಾ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ನಮಗೆ ದೊರೆತ ಮಾಹಿತಿ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ನ್ಯಾಯಾಲಯ ಕೂಡ ಹತ್ತು ದಿನಗಳ ಕಾಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಮೊದಲ ದಿನದ ವಿಚಾರಣೆಯಲ್ಲಿಯೇ ಮಹತ್ವದ ಸುಳಿವು ಲಭ್ಯವಾಗಿತ್ತು. ದಿಶಾಗೆ ಸೇರಿದ್ದ ಮೊಬೈಲ್, ವಾಚ್ ಹಾಗೂ ವಸ್ತುಗಳನ್ನು ಘಟನೆ ನಡೆದ ಸ್ಥಳದಲ್ಲಿಯೇ ಅಡಗಿಸಿಟ್ಟಿರುವುದಾಗಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳನ್ನು ಘಟನೆ ನಡೆದ ಸ್ಥಳಕ್ಕೆ ಶುಕ್ರವಾರ ಬೆಳಗ್ಗೆ ಕರೆತರಲಾಗಿತ್ತು. ಈ ಸಂದರ್ಭದಲ್ಲಿ ಆರೋಪಿಗಳು ನಮ್ಮ ದಿಕ್ಕು ತಪ್ಪಿಸಲು ಒಬ್ಬೊಬ್ಬರು ಒಂದೊಂದು ರೀತಿ ಹೇಳತೊಡಗಿದ್ದರು. ಆಗ ಸ್ಥಳದಲ್ಲಿಯೇ ಸಿಕ್ಕ ದೊಣ್ಣೆಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು.
ಮೊದಲು ಮೊಹಮ್ಮದ್ ಆರೀಫ್ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ. ಈ ಸಂದರ್ಭದಲ್ಲಿ ಪೊಲೀಸರು ಎಚ್ಚರಿಕೆಯನ್ನು ನೀಡಿದ್ದರು. ನಂತರ ಇಬ್ಬರು ಆರೋಪಿಗಳು ಪೊಲೀಸರಿಬ್ಬರ ರಿವಾಲ್ವರ್ ಕಸಿದುಕೊಳ್ಳಲು ಯತ್ನಿಸಿದ್ದರು. ಪೊಲೀಸರ ತಲೆ ಮೇಲೆ ದೊಣ್ಣೆಯಿಂದ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಎನ್ ಕೌಂಟರ್ ನಡೆಸಿರುವುದಾಗಿ ಸಜ್ಜನರ್ ವಿವರಿಸಿದ್ದಾರೆ.