ಹೈದರಾಬಾದ್: ತೆಲಂಗಾಣದಲ್ಲಿ ನಡೆದ ಗಣರಾಜ್ಯ ದಿನ ಕಾರ್ಯಕ್ರಮ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಮತ್ತು ರಾಜ್ಯಪಾಲರ ಭಿನ್ನಾಭಿಪ್ರಾಯಕ್ಕೆ ಸಾಕ್ಷಿಯಾಯಿತು. ರಾಜಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲೆ ಡಾ.ತಮಿಳ್‌ಸೈ ಸುಂದರರಾಜನ್ ರಾಷ್ಟ್ರಧ್ವಜಾರೋಹಣ ಮಾಡಿದ್ದಾರೆ. ಅದರಲ್ಲಿ ಮುಖ್ಯಮಂತ್ರಿ ಭಾಗವಹಿಸಲಿಲ್ಲ.
ರಾಷ್ಟ್ರೀಯ ಹಬ್ಬದ ಸಂದರ್ಭದಲ್ಲೂ ಸರ್ಕಾರ ಶಿಷ್ಟಾಚಾರ ಪಾಲನೆ ಮಾಡದಿರುವುದಕ್ಕೆ ಪ್ರತಿಪಕ್ಷಗಳು ಆಕ್ಷೇಪಿಸಿವೆ. ಧ್ವಜಾರೋಹಣದ ಬಳಿಕ ಮಾತನಾಡಿರುವ ರಾಜ್ಯಪಾಲರು, ಪ್ರಜಾಪ್ರಭತ್ವದ ಗೌರವ, ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ.ನನಗೆ ತೆಲಂಗಾಣದ ಜತೆಗೆ ಕಳೆದ 3 ವರ್ಷಗಳ ನಂಟು ಹುಟ್ಟಿದ್ದಲ್ಲ, ನನ್ನ ಹುಟ್ಟಿನಿಂದಲೂ ಇಲ್ಲಿನ ಜನರ ಜತೆಗೆ ನಂಟಿದೆ. ಯಾರು ನನ್ನನ್ನು ಇಷ್ಟ ಪಟ್ಟರೂ, ಪಡದಿದ್ದರೂ, ನಾನು ರಾಜ್ಯದ ಜನರಿಗಾಗಿ ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದಿದ್ದಾರೆ.
ತೆಲಂಗಾಣದಲ್ಲಿ ಪರೇಡ್ ಕೂಡ ನಡೆದಿಲ್ಲ. ಈ ಬಗ್ಗೆ ಹೈಕೋರ್ಟ್ ವಿಚಾರಣೆ ನಡೆಸಿ, ಕೇಂದ್ರದ ಸೂಚನೆಯಂತೆ ರಾಜ್ಯದಲ್ಲಿ ಗಣರಾಜ್ಯೋತ್ಸವ ಆಚರಿಸುವಂತೆ ರಾಜ್ಯಸರ್ಕಾರಕ್ಕೆ ಬುಧವಾರ ಆದೇಶಿಸಿತ್ತು. ಅದನ್ನೂ ನಡೆಸಲಾಗಿಲ್ಲ. ಈ ಬೆಳವಣಿಗೆ ಪ್ರತಿಪಕ್ಷಗಳನ್ನು ಸಿಟ್ಟಿಗೆಬ್ಬಿಸಿದೆ.
ಇದನ್ನೂ ಓದಿ: ಐಬಿಎಂ-ಸ್ಯಾಪ್‌ನಿಂದಲೂ ಉದ್ಯೋಗ ಕಡಿತ: ಕಂಗಾಲಾದ ಉದ್ಯೋಗಿಗಳು