ಹೈದರಾಬಾದ್: ಭೂ ಕಬಳಿಕೆ ಆರೋಪದ ಹಿನ್ನೆಲೆಯಲ್ಲಿ ಎಟಾಲಾ ರಾಜೇಂದ್ರ ಅವರನ್ನು ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಸ್ಥಾನದಿಂದ ಶನಿವಾರ(ಮೇ 1)ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ವಜಾಗೊಳಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪತ್ನಿಯ ಆಭರಣ ಮಾರಾಟ ಮಾಡಿ ಉಚಿತ ಆಕ್ಸಿಜನ್ ನೀಡುತ್ತಿರುವ ವ್ಯಕ್ತಿ
ಅಧಿಕೃತ ಪ್ರಕಟಣೆ ಪ್ರಕಾರ, ತೆಲಂಗಾಣ ಮುಖ್ಯಮಂತ್ರಿ ಅವರ ಸಲಹೆ ಮೇರೆಗೆ, ತಕ್ಷಣಕ್ಕೆ ಜಾರಿಗೆ ಬರುವಂತೆ ಎಟಾಲಾ ರಾಜೇಂದ್ರ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸ್ಥಾನದಿಂದ ವಜಾಗೊಳಿಸುವ ಶಿಫಾರಸ್ಸಿಗೆ ರಾಜ್ಯಪಾಲರು ಅಂಕಿತ ಹಾಕಿರುವುದಾಗಿ ವಿವರಿಸಿದೆ.
ಮೇದಕ್ ಜಿಲ್ಲೆಯಲ್ಲಿನ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ಮೇದಕ್ ನ ಮಸಾಯಿಪೆಟ್ ಮಂಡಲ್ ನ ಅಚಾಂಪೆಟ್ ಹೊರವಲಯದಲ್ಲಿನ ಭೂ ಕಬಳಿಕೆ ಆರೋಪದ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ರಾವ್ ಅವರು ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದೊಂದು ಪೂರ್ವಯೋಜಿತ ಕೆಲಸವಾಗಿದೆ ಎಂದು ರಾಜೇಂದ್ರ ಆರೋಪಿಸಿದ್ದು, ತನ್ನ ಬೆಂಬಲಿಗರೊಂದಿಗೆ ಚರ್ಚಿಸಿದ ನಂತರ ಮುಂದಿನ ನಿರ್ಧಾರದ ಬಗ್ಗೆ ಘೋಷಿಸುವುದಾಗಿ ತಿಳಿಸಿದ್ದಾರೆ. ಏತನ್ಮಧ್ಯೆ ಆಡಳಿತಾರೂಢ ಪಕ್ಷದ ಕೆಲವು ಶಾಸಕರ ಮೇಲಿರುವ ಹಾಗೂ ಸಚಿವರ ವಿರುದ್ಧದ ಆರೋಪದ ಬಗ್ಗೆಯೂ ತನಿಖೆ ನಡೆಸುವಂತೆ ವಿಪಕ್ಷಗಳು ಆಗ್ರಹಿಸಿವೆ.