Advertisement

ನೆಟ್‌ವರ್ಕ್‌ಗಾಗಿ ನಿತ್ಯ 15-18 ಕಿ.ಮೀ. ಟೆಕ್ಕಿಗರ ಸಂಚಾರ

11:14 PM Aug 14, 2020 | mahesh |

ಕುಂದಾಪುರ: ಕೋವಿಡ್ ನಿಂದಾಗಿ ಸಾಕಷ್ಟು ಮಂದಿ ಐಟಿ ಉದ್ಯೋಗಿಗಳು ಬೆಂಗಳೂರು, ಮೈಸೂರು ಮತ್ತಿತರ ನಗರಗಳಿಂದ ಊರಿಗೆ ಬಂದು ಮನೆಯಿಂದಲೇ (ವರ್ಕ್‌ ಫ್ರಂ ಹೋಮ್‌) ಕೆಲಸ ಮಾಡುವಂತಾಗಿದೆ. ಹಲವರಿಗೆ ಇದರಿಂದ ಅನುಕೂಲವಾದರೆ ಕೆಲವರಿಗೆ ಸರಿಯಾದ ನೆಟ್‌ವರ್ಕ್‌ ಇಲ್ಲದೆ ಪರದಾಡಬೇಕಾದ ಸ್ಥಿತಿ. ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಹಳ್ಳಿಹೊಳೆ, ಕಮಲಶಿಲೆ ಗ್ರಾಮಗಳ ಟೆಕ್ಕಿಗರು ನೆಟ್‌ವರ್ಕ್‌ಗಾಗಿ ದಿನವೂ 15-18 ಕಿ.ಮೀ. ದೂರದ ಪೇಟೆಗೆ ಬಂದು ಕರ್ತವ್ಯ ನಿರ್ವಹಿಸಿ ಮನೆಗೆ ಮರಳುತ್ತಿದ್ದಾರೆ.

Advertisement

ಹಳ್ಳಿಹೊಳೆಯಲ್ಲಿ ಬಿಎಸ್ಸೆನ್ನೆಲ್‌ ಮತ್ತು ಖಾಸಗಿ ಸ್ವಾಮ್ಯದ ಟವರ್‌ ಇದೆ. ಅದನ್ನೂ ಈಗ ಬಳಕೆದಾರರ ಸಮಸ್ಯೆಯಿಂದಾಗಿ ಕಳಚುತ್ತಿದ್ದಾರೆ. ದೇವರಬಾಳು, ಕಬ್ಬಿನಾಲೆ, ಕಟ್ಟಿನಾಡಿ, ಕಾರೇಬೈಲು ಮತ್ತಿತರ ಗ್ರಾಮೀಣ ಭಾಗ, ಕಮಲಶಿಲೆ ಗ್ರಾಮದ ಕೆಲವು ಊರುಗಳ ಜನರಿಗೂ ನೆಟ್‌ವರ್ಕ್‌ ಸಮಸ್ಯೆಯಿದೆ. ಮಳೆಯಿಂದಾಗಿ ವಿದ್ಯುತ್‌ ಇಲ್ಲವಾದರೆ ಯಾವುದೇ ನೆಟ್‌ವರ್ಕ್‌ ಇಲ್ಲ.

ಟೆಕ್ಕಿಗರ ಸಮಸ್ಯೆಯೇನು?
ಹಳ್ಳಿಹೊಳೆ, ಕಮಲಶಿಲೆ ಗ್ರಾಮಗಳ 50ಕ್ಕೂ ಅಧಿಕ ಮಂದಿ ಟೆಕ್ಕಿಗರು ಕೊರೊನಾದಿಂದಾಗಿ ಊರಿಗೆ ಬಂದಿದ್ದಾರೆ. ಆದರೆ ಅವರಿಗೆ ಮನೆಯಲ್ಲಿ ನೆಟ್‌ವರ್ಕ್‌ ಸಿಗುತ್ತಿಲ್ಲ. ಹೀಗಾಗಿ ಕಮಲಶಿಲೆ ಮತ್ತು ಸಿದ್ದಾಪುರ ಪೇಟೆಯಲ್ಲಿ ಬಾಡಿಗೆ ರೂಂ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. “ಬೆಳಗ್ಗೆ ಮನೆಯಿಂದ ಬುತ್ತಿ, ಲ್ಯಾಪ್ಟ್ಯಾಪ್‌ ಹಿಡಿದು ಹೊರಡುತ್ತೇವೆ, ಸಂಜೆ ಮನೆಗೆ ಮರಳುತ್ತೇವೆ. ಆದರೆ ರಾತ್ರಿ ಶಿಫ್ಟ್‌ ಇದ್ದಾಗ ಸಮಸ್ಯೆಯಾಗುತ್ತದೆ’ ಎನ್ನುತ್ತಾರೆ ಹಳ್ಳಿಹೊಳೆ ಗ್ರಾಮದ ಸಮೃದ್ಧ್.

ಆನ್‌ಲೈನ್‌ ಕ್ಲಾಸ್‌ಗೂ ಅಡ್ಡಿ
ಹಳ್ಳಿಹೊಳೆ ಗ್ರಾಮದ ಅನೇಕ ಮಂದಿಗೆ ಈಗ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ಎಂಜಿನಿಯರಿಂಗ್‌, ಮೆಡಿಕಲ್‌ ಮತ್ತಿತರ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಕೆಲವರನ್ನು ಹೆತ್ತವರೇ ಪ್ರತೀ ದಿನ ಪೇಟೆಗಳಲ್ಲಿರುವ ಸಂಬಂಧಿಕರ ಮನೆಗೆ ಬಿಟ್ಟು, ತರಗತಿ ಮುಗಿದ ಮೇಲೆ ಕರೆದೊಯ್ಯುತ್ತಿದ್ದಾರೆ.

ಅಂಕಿ- ಸಂಖ್ಯೆ
ಹಳ್ಳಿಹೊಳೆ ಮತ್ತು ಕಮಲಶಿಲೆ ಒಳಗೊಂಡ ಗ್ರಾ.ಪಂ. ವ್ಯಾಪ್ತಿಯಲ್ಲಿ 973 ಮನೆಗಳಿವೆ. 4,438 ಜನಸಂಖ್ಯೆಯಿದೆ. ಪ್ರತೀ ಮನೆಯಲ್ಲಿ 2 ಅಥವಾ ಹೆಚ್ಚು ಮೊಬೈಲ್‌ ಫೋನ್‌ಗಳಿವೆ.

Advertisement

ಟವರ್‌ಗೆ ಪ್ರಸ್ತಾವನೆ ಸಲ್ಲಿಕೆ
ಬೈಂದೂರು ಕ್ಷೇತ್ರದ ಗ್ರಾಮೀಣ ಭಾಗದ ನೆಟ್‌ವರ್ಕ್‌ ಸಮಸ್ಯೆ ಗಮನಕ್ಕೆ ಬಂದಿದ್ದು, ಈಗಾಗಲೇ 20ಕ್ಕೂ ಹೆಚ್ಚು ಕಡೆ ಹೊಸದಾಗಿ ಟವರ್‌ ನಿರ್ಮಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇಲ್ಲಿನ ನೆಟ್‌ವರ್ಕ್‌ ಸಮಸ್ಯೆ ನೀಗಿಸುವ ಸಂಬಂಧ ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತೇನೆ.
– ಬಿ.ವೈ. ರಾಘವೇಂದ್ರ, ಸಂಸದರು ಶಿವಮೊಗ್ಗ ಕ್ಷೇತ್ರ

ಮಾರ್ಚ್‌ ನಲ್ಲಿ ಊರಿಗೆ ಬಂದಿದ್ದೇನೆ. ಮನೆಯಲ್ಲಿದ್ದರೆ ನೆಟ್‌ವರ್ಕ್‌ ಸಿಗುವುದಿಲ್ಲ. ನಾನು ಮತ್ತು ನನ್ನಂಥ ಹಲವರು ಪ್ರತೀ ದಿನ ಮನೆಯಿಂದ 10 ಕಿ.ಮೀ. ದೂರದ ಕಮಲಶಿಲೆಗೆ ಬಂದು ಕೆಲಸ ಮಾಡಿ ಮನೆಗೆ ವಾಪಸಾ ಗುತ್ತಿದ್ದೇವೆ. ಕೆಲವೊಮ್ಮೆ ಮನೆ ಯಲ್ಲಿದ್ದಾಗ ತುರ್ತಾಗಿ ಆನ್‌ಲೈನ್‌ ವೀಡಿಯೋ ಮೀಟಿಂಗ್‌ ಕರೆದರೆ ಸಮಸ್ಯೆಯಾಗುತ್ತಿದೆ.
– ರಘುರಾಮ್‌ ಹಳ್ಳಿಹೊಳೆ, ಬೆಂಗಳೂರಿನ ಖಾಸಗಿ ಸಂಸ್ಥೆ ಉದ್ಯೋಗಿ

Advertisement

Udayavani is now on Telegram. Click here to join our channel and stay updated with the latest news.

Next