Advertisement
ಬೆಂಗಳೂರು, ಪುಣೆ, ಅಮೆರಿಕಾ, ದುಬೈನಲ್ಲಿ ಕಳೆದ 13 ವರ್ಷಗಳಿಂದ ಸಾಫ್ಟ್‌ವೇರ್ ಇಂಜಿನಿಯರ್ ಕೆಲಸಮಾಡುತ್ತಿದ್ದ ಇಲ್ಲಿನ ಬಸವೇಶ್ವರ ನಗರದ ಸತೀಶಕುಮಾರ ಹುಡುಗಿ ಈಗ ಅಪ್ಪಟ ಕೃಷಿಕ. ಕಳೆದ ಎರಡು ವರ್ಷಗಳ ಹಿಂದೆ ದುಬೈನಿಂದ ಮರಳಿರುವ ಸತೀಶ ಸದ್ಯ ತಮ್ಮದೇ ಹೊಲದಲ್ಲಿ ಬೆವರು ಹರಿಸಿ ದುಡಿಯುತ್ತಿದ್ದಾರೆ. ಕಮಲಾಪುರ ತಾಲೂಕಿನ ಹೊಳಕುಂದಾ ಗ್ರಾಮದಲ್ಲಿ 12 ಎಕರೆ ಸ್ವಂತ ಹೊಲದಲ್ಲಿ ಕೃಷಿ ಮಾಡುತ್ತಿರುವ ಇವರು, ಎರಡು ವರ್ಷಗಳಲ್ಲಿ ತೊಗರಿ, ಈರುಳ್ಳಿ, ಕಲ್ಲಂಗಡಿ, ಮೆಕ್ಕೆಜೋಳ ಬೆಳೆದಿದ್ದಾರೆ. ಈಗ ಹೆಸರು ಫಸಲಾಗುವ ಹಂತದಲ್ಲಿ ಇದೆ. ಒಂದು ಎಕರೆಯಲ್ಲಿ ನಿಂಬೆ ಗಿಡಗಳ ನಾಟಿ ಮಾಡಿದ್ದಾರೆ. ಜತೆಗೆ ಪಕ್ಕದ 10 ಎಕರೆ ಹೊಲವನ್ನು ಸತೀಶ ಲೀಸ್‌ಗೆ ಪಡೆದು ಕೃಷಿ ಮಾಡುತ್ತಿದ್ದಾರೆ. ಓದು ಮುಗಿದ ನಂತರ ಕೆಲಸ ಸಿಕ್ಕ ಆರಂಭದಲ್ಲಿ ಜೀವನ ಇಷ್ಟಿದ್ದರೆ ಸಾಕು. ಇದೇ ಜೀವನ ಎಂದುಕೊಂಡಿದ್ದೆ. ಆದರೆ, ಎಸಿಯಲ್ಲಿ ಕುಳಿತು ಮಾಡುವ ಕೆಲಸವಾಗಿದ್ದರೂ ನೆಮ್ಮದಿ ಇರುತ್ತಿರಲಿಲ್ಲ. ಕಣ್ಣು ತುಂಬಾ ನಿದ್ದೆಯೂ ಆಗುತ್ತಿರಲಿಲ್ಲ. ಮನೆ-ಕಚೇರಿ ಎರಡೇ ಪ್ರಪಂಚ ಎನ್ನುವಂತೆ ಆಗಿತ್ತು. ಹೀಗಾಗಿ ಊರಿಗೆ ಬಂದು ಇಲ್ಲೇ ಏನಾದರೂ ಮಾಡೋಣ ಎನ್ನುವ ಯೋಚನೆಯ ಫಲವೇ ಈ ಕೃಷಿ
Related Articles
Advertisement
ಕೃಷಿ ಕಾಯಕ ಜೀವನದಲ್ಲಿ ಹೊಸ ಉತ್ಸಾಹ ತುಂಬಿದೆ. ಕೃಷಿ ಸ್ವಾವಲಂಬನೆ ಉದ್ಯೋಗದೊಂದಿಗೆ ಲಾಭದಾಯಕವೂ ಆಗಿದೆ. ಅಲ್ಪಾವಧಿ ಬೆಳೆಗಳನ್ನು ಬೆಳೆಯುವುದರಿಂದ ನಮಗೆ ಹಣ ಬೇಗ ಸಿಗುತ್ತದೆ. ಬೆಳೆಗಳಿಗೆ ಯಾವ ಹಂತದಲ್ಲಿ ಎಷ್ಟು ನೀರು, ಗೊಬ್ಬರ ಬಳಸಬೇಕೆಂಬ ವೈಜ್ಞಾನಿಕ ಕ್ರಮವೇ ಕೃಷಿಯ ಯಶಸ್ಸಿನ ಗುಟ್ಟಾಗಿದೆ. – ಸತೀಶ ಕುಮಾರ ಹುಡುಗಿ, ಕೃಷಿಕ
ಕೃಷಿ ಸಹ ಲಾಭದಾಯಕ ಕ್ಷೇತ್ರ ಎನ್ನುವುದನ್ನು ಸಾಕಷ್ಟು ವಿದ್ಯಾವಂತರು ಮನಗಾಣುತ್ತಿದ್ದಾರೆ. ವಾಣಿಜ್ಯ ಮತ್ತು ತೋಟಗಾರಿಕೆ ಕೃಷಿಯತ್ತ ಹೆಚ್ಚಿನ ಒಲವು ಹೊಂದಿದ್ದಾರೆ. ಕಳೆದ ಎರಡೂ¾ರು ವರ್ಷಗಳಿಂದ ಕೃಷಿ ಬಗ್ಗೆ ಮಾಹಿತಿ ಪಡೆಯುವರಲ್ಲಿ ನೌಕರಸ್ಥರ ಸಂಖ್ಯೆಯೂ ಹೆಚ್ಚುತ್ತಿದೆ. ವಿಜ್ಞಾನ ಕೇಂದ್ರದಿಂದ ಈ ಬಾರಿ ಸಬ್ಸಿಡಿ ದರದಲ್ಲಿ 10 ಸಾವಿರ ಸಸಿಗಳನ್ನು ರೈತರಿಗೆ ವಿತರಿಸಲಾಗಿದೆ. –ಡಾ| ವಾಸುದೇವ ನಾಯ್ಕ, ತೋಟಗಾರಿಕೆ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ
-ರಂಗಪ್ಪ ಗಧಾರ