Advertisement
ದರ್ಶಿನಿ ಮೇಲೆ ನಾಡಬಂದೂಕಿನಿಂದ ದಾಳಿ ನಡೆಸಿ ತಪ್ಪಿಸಿಕೊಂಡಿದ್ದ ಆಕೆಯ ಸ್ನೇಹಿತ ಅಮರೇಂದ್ರ ಪಟ್ನಾಯಕ್ (33) ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಆತ್ಮಹತ್ಯೆ ಯತ್ನಕ್ಕೂ ಮುನ್ನ ಅಮರೇಂದ್ರ ಬರೆದಿಟ್ಟಿರುವ ಹದಿನೈದು ಪುಟಗಳ ಡೆತ್‌ನೋಟ್ ಪೊಲೀಸರ ಕೈ ಸೇರಿದ್ದು,, ದರ್ಶಿನಿ ಮೇಲಿನ ಗುಂಡಿನ ದಾಳಿಗೆ ಕಾರಣವಾದ ಹೂರಣವನ್ನು ಅದು ಬಿಚ್ಚಿಟ್ಟಿದೆ.
Related Articles
Advertisement
ನಡುರಸ್ತೆಯಲ್ಲಿ ಬಿದ್ದಿದ್ದ: ಮಾರತ್‌ಹಳ್ಳಿಯ ಪಿ.ಜಿ ಒಂದರ ಬಳಿ ದರ್ಶಿನಿ ಮೇಲೆ ಗುಂಡು ಹಾರಿಸಿದ್ದ ಅಮರೇಂದ್ರ, ಭಯದಿಂದ ನಾಡಬಂದೂಕನ್ನು ರಸ್ತೆಯಲ್ಲಿ ಎಸೆದು ಬೈಕ್‌ನಲ್ಲಿ ಪರಾರಿಯಾಗಿದ್ದ. ಆತನ ಬಂಧನಕ್ಕೆ ಎರಡು ತಂಡಗಳು ರಾತ್ರಿ ಇಡೀ ಶೋಧ ನಡೆಸಿದ್ದವು.
ಬುಧವಾರ ನಸುಕಿನ 2.30ರ ಸುಮಾರಿಗೆ ಮಾರತ್‌ಹಳ್ಳಿ ಹೊರವರ್ತುಲ ರಸ್ತೆಯಲ್ಲಿ ವ್ಯಕ್ತಿಯೊಬ್ಬ ರಕ್ತದ ಮಡುವಿನಲ್ಲಿ ಬಿದ್ದಿರುವ ಬಗ್ಗೆ ವಾಹನ ಸವಾರರು ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಲ್ಲಿಗೆ ತೆರಳಿದ ಪೊಲೀಸರು, ಕತ್ತಕುಯ್ದುಕೊಂಡು ರಸ್ತೆಯಲ್ಲಿ ಬಿದ್ದಿದ್ದ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಬಳಿ 15 ಪುಟಗಳ ಡೆತ್‌ನೋಟ್ ಸಹ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಓಡಿಶಾ ಮೂಲದ ಅಮರೇಂದ್ರ ಹಾಗೂ ದರ್ಶಿನಿ ಐದು ವರ್ಷಗಳಿಂದ ಪರಿಚಿತರು. ಇಬ್ಬರ ನಡುವೆ ಉತ್ತಮ ಬಾಂಧವ್ಯ ಇತ್ತು. ಅಮರೇಂದ್ರ ಹೈದ್ರಾಬಾದ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ದರ್ಶಿನಿ, ಆಸ್ಪತ್ರೆಯೊಂದರಲ್ಲಿ ಎರಡು ವರ್ಷಗಳಿಂದ ಸಾಫ್ಟ್ವೇರ್ ಡೆವಲಪರ್ ಆಗಿ ಕೆಲಸ ಮಾಡು ತ್ತಿದ್ದು, ಮುನೆಕೊಳಾಲುವಿನ ಸಮೀಪ ಪಿ.ಜಿ ಯಲ್ಲಿ ಉಳಿದುಕೊಂಡಿದ್ದರು. ಅಮರೇಂದ್ರ ಕೂಡ ನಗರಕ್ಕೆ ಆಗಾಗ ಬಂದು ಹೋಗುತ್ತಿದ್ದ.
ಅಮರೇಂದ್ರನಿಗೆ ಮತ್ತೂಬ್ಬ ಯುವತಿ ಜತೆ ಮದುವೆ ನಿಶ್ಚಯವಾಗಿದ್ದು, ಮಾರ್ಚ್‌ನಲ್ಲಿ ದಿನಾಂಕ ನಿಗದಿಯಾಗಿತ್ತು. ಆದರೆ, ಕೆಲವು ದಿನಗಳ ಹಿಂದಷ್ಟೇ ದರ್ಶಿನಿ ತನ್ನ ಜತೆ ಒಟ್ಟಿಗೆ ಇದ್ದ ಫೋಟೋಗಳನ್ನು ಅಮರೇಂದ್ರ ಮದುವೆ ಆಗಲಿದ್ದ ಯುವತಿಗೆ ಕಳುಹಿಸಿಕೊಟ್ಟಿದ್ದಳು.
ಇದನ್ನು ನೋಡಿದ್ದ ಆಕೆ ಅಮರೇಂದ್ರನ ಜತೆ ಜಗಳವಾಡಿ ಮದುವೆಯೂ ರದ್ದಾಗಿತ್ತು. ಇದರಿಂದ ಕೋಪಗೊಂಂಡ ಅಮರೇಂದ್ರ, ಎರಡು ದಿನಗಳ ಹಿಂದೆ ನಗರಕ್ಕೆ ಬಂದು ದರ್ಶಿನಿಗೆ ಗುಂಡು ಹೊಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
15 ಪುಟಗಳ ಡೆತ್‌ನೋಟ್ ಬರೆದಿರುವ ಅಮರೇಂದ್ರ, ತನ್ನ ವಿದ್ಯಾಭ್ಯಾಸ ಮನೆಯ ಪರಿಸ್ಥಿತಿ ಹಾಗೂ ದರ್ಶಿನಿ ಹೈದ್ರಾಬಾದ್‌ನಲ್ಲಿ ಇದ್ದಿದ್ದು, ಆಕೆಯ ವಿದ್ಯಾಭ್ಯಾಸಕ್ಕೆ ನೆರವಾಗಿದ್ದೇನೆ. ಆದರೆ, ಆಕೆ ಬೆಂಗಳೂರಿಗೆ ಬಂದ ಬಳಿಕ ಅಂತರ ಕಾಯ್ದುಕೊಂಡಳು.
ನನ್ನಿಂದ ಎಲ್ಲ ಸೌಕರ್ಯ ಪಡೆದು ನನಗೆ ಮೋಸ ಮಾಡಿದ್ದಾಳೆ. ಮದುವೆ ಆಗಲಿದ್ದ ಹುಡುಗಿಗೆ ಮೆಸೇಜ್ ಹಾಗೂ ಫೋಟೋ ಕಳುಹಿಸಿ ವ್ಯಕ್ತಿತ್ವಕ್ಕೆ ಚ್ಯುತಿತಂದಳು. ಈ ಸಮಾಜದಲ್ಲಿ ಗಂಡಸರಿಗೆ ನ್ಯಾಯವೇ ಇಲ್ಲವೇ ಎಂದಿದ್ದಾರೆ. ಹೆಣ್ಣುಮಕ್ಕಳ ಬಗ್ಗೆ ನನಗೆ ಅಪಾರ ಗೌರವವಿದೆ.
ಆದರೆ, ನನಗೆ ಆದ ಮೋಸಕ್ಕೆ ಬೇರೆ ದಾರಿಯಿಲ್ಲ. ಆಕೆಯನ್ನು ಶೂಟ್ ಮಾಡಿದ ಬಳಿಕ ಸಮಾಜ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಆರೋಪಿಸುತ್ತದೆ. ಹೀಗಾಗಿ ಪೊಲೀಸ್ ವ್ಯವಸ್ಥೆ, ಮಾಧ್ಯಮ ನನ್ನನ್ನು ಕ್ಷಮಿಸಬೇಕು. ಮದ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ನಾನು ಕಷ್ಟುಪಟ್ಟು ಓದಿ ಊರಿಗೆ ಆದರ್ಶವಾಗಿದ್ದೆ ಆದರೆ ಈಗ ವಿಲನ್ ಆಗುತ್ತಿದ್ದೇನೆ ಎಂದು ಬರೆದಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಆನ್‌ಲೈನಲ್ಲಿ ಬಂದೂಕು ಖರೀದಿ!: ಅಮರೇಂದ್ರ ಇಂಟರ್‌ನೆಟ್‌ನಲ್ಲಿ ಬಂದೂಕು ಖರೀದಿಸಿರುವ ಬಗ್ಗೆ ಸಣ್ಣ ಸುಳಿವು ದೊರೆತಿದೆ. ಅದು ಖಚಿತಪಟ್ಟಿಲ್ಲ. ಹೀಗಾಗಿ ಬಂದೂಕು ಖರೀದಿ ಎಲ್ಲಿಂದ ಮಾಡಿದ್ದ ಹೇಗೆ ತರಿಸಿಕೊಂಡಿದ್ದ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.
ದರ್ಶಿನಿ ಮೇಲೆ ಗುಂಡಿನ ದಾಳಿ ನಡೆಸಿರುವ ಆರೋಪಿ ಅಮರೇಂದ್ರ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಆತ ಬರೆದಿಟ್ಟಿದ್ದ ಡೆತ್‌ನೋಟ್ ಸಿಕ್ಕಿದ್ದು ಇಡೀ ಕೃತ್ಯಕ್ಕೆ ಕಾರಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.-ಎಂ.ಎನ್ ಅನುಚೇತ್, ವೈಟ್‌ಫೀಲ್ಡ್ ವಿಭಾಗದ ಡಿಸಿಪಿ