ಉಪ್ಪಿನಂಗಡಿ: ಪಂಚಾಯತ್ ಕಟ್ಟಡಕ್ಕೆಂದು ಮಂಜೂರಾದ ನಿವೇಶನವನ್ನು ಬಿಟ್ಟು ಖಾಸಗಿ ಭೂಮಿಯಲ್ಲಿ ಕಟ್ಟಡವನ್ನು ಕಟ್ಟಿ ವಿವಾದಕ್ಕೆ ಸಿಲುಕಿ ಅತಂತ್ರವಾಗಿದ್ದ ಕಟ್ಟಡದ ಅಡಿಸ್ಥಳವನ್ನು ಜಿಲ್ಲಾಧಿಕಾರಿಯವರು ಪಂಚಾಯತ್ ಕಟ್ಟಡಕ್ಕೆ ಮೀಸಲಿರಿಸಿ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ಕಟ್ಟಡವನ್ನು ಪಂಚಾಯತ್ ಆಡಳಿತ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ.
ಪರಿಶಿಷ್ಟ ಪಂಗಡಕ್ಕೆ ಸೇರಿದ್ದ ಯಮುನಾ ಅವರಿಗೆ ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಸರ್ವೆ ನಂಬ್ರ 103/1ಎ ರಲ್ಲಿ 69 ಸೆಂಟ್ಸ್ ಭೂಮಿಯು 1980ರಲ್ಲಿ ಮಂಜೂರಾಗಿತ್ತು ಎನ್ನಲಾಗಿದ್ದು, ಸದ್ರಿ ಭೂಮಿಯಲ್ಲಿ ತೆಕ್ಕಾರು ಪಂಚಾಯತ್ ಆಡಳಿತ ಸುಸಜ್ಜಿತ ಪಂಚಾಯತ್ ಕಟ್ಟಡ ನಿರ್ಮಿಸಲು ಮುಂದಾಗಿತ್ತು. ತಳ ಹಂತ ಹಾಗೂ ಒಂದು ಮಹಡಿಯ ಸ್ಲ್ಯಾಬ್ ರಚನೆ ಹಾಗೂ ಗೋಡೆ ಕಾಮಗಾರಿ ನಡೆಯುತ್ತಿದ್ದಂತೆಯೇ ಜಾಗದ ಅನುಭೋಗದಾರಳಾದ ಯಮುನಾ ಅವರು ತನ್ನ ಭೂಮಿಯಲ್ಲಿ ಪಂಚಾಯತ್ ಅಧಿಕಾರಿಗಳು ಅಕ್ರಮವಾಗಿ ಕಟ್ಟಡವನ್ನು ಕಟ್ಟಿದ್ದಾರೆಂದು ಆರೋಪಿಸಿ ನಿರ್ಮಾಣ ಹಂತದ ಕಟ್ಟಡವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದರು. ಹಾಗೂ ಪಂಚಾಯತ್ ಕಟ್ಟಡವನ್ನು ನಿರ್ಮಿಸಲು ಗ್ರಾಮದ 64ನೇ ಸರ್ವೆ ನಂಬ್ರದಲ್ಲಿ 20 ಸೆಂಟ್ಸ್ ಮಂಜೂರಾಗಿದ್ದು, ಬಡವಳಾದ ನನ್ನನ್ನು ವಂಚಿಸಲು ಮಂಜೂರಾದ ಭೂಮಿಯನ್ನು ಬಿಟ್ಟು ತನ್ನ ಭೂಮಿಯಲ್ಲಿ ಕಟ್ಟಡವನ್ನು ಕಟ್ಟಿರುತ್ತಾರೆಂದು ಆಪಾದಿಸಿದ್ದರು.
ಬಳಿಕ ಇಲಾಖಾ ತನಿಖೆ ನಡೆಯುತ್ತಿದ್ದಂತೆಯೇ ಪಂಚಾಯತ್ ಆಡಳಿತದ ಮನವಿಯನ್ನು ಪುರಸ್ಕರಿಸಿದ ದ.ಕ. ಜಿಲ್ಲಾಧಿಕಾರಿಗಳು ಮೇ 27ರಂದು ಸರ್ವೆ ನಂಬ್ರ 103/1ಎ ಯಲ್ಲಿ 15 ಸೆಂಟ್ಸ್ ಭೂಮಿಯನ್ನು ಪಂಚಾಯತ್ ಕಚೇರಿ ಕಟ್ಟಡ ನಿರ್ಮಿಸಲು ಕಾದಿರಿಸಿ ಆದೇಶ ಹೊರಡಿಸಿದ್ದಾರೆ.
ಸದ್ರಿ ಆದೇಶವನ್ನು ಮುಂದಿರಿಸಿ ಆ. 23ರಂದು ತೆಕ್ಕಾರು ಗ್ರಾಮ ಪಂಚಾಯತ್ ಅಧಿಕಾರಿಗಳು ಈವರೆಗೆ ಯಮುನಾ ಅವರ ವಶದಲ್ಲಿದ್ದ ಪಂಚಾಯತ್ ಕಚೇರಿಯ ನಿರ್ಮಾಣ ಹಂತದ ಕಟ್ಟಡಕ್ಕೆ ಪ್ರವೇಶಿಸಿ ಕಟ್ಟಡಕ್ಕೆ ನಾಮಫಲಕ ಅಳವಡಿಸಿದ್ದಾರೆ.
ರಾಜಕೀಯ ಪ್ರಭಾವ: ನವೀನ್ ನಾಯ್ಕ ಘಟನೆ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಯಮುನಾ ಅವರ ಪುತ್ರ ನವೀನ್ ನಾಯ್ಕ, ಜಿಲ್ಲಾಧಿಕಾರಿಗಳು ನಮ್ಮ ಅನುಭೋಗದ ಭೂಮಿಯ ಪೈಕಿ 15 ಸೆಂಟ್ಸ್ ಭೂಮಿಯನ್ನು ಪಂಚಾಯತ್ ಕಚೇರಿಗಾಗಿ ಮೀಸಲಿರಿಸುವಲ್ಲಿ ರಾಜ್ಯದ ಬದಲಾದ ರಾಜಕೀಯದ ಕೆಲಸ ಮಾಡಿದೆ. ಪರಿಶಿಷ್ಟ ಜಾತಿಗೆ ಮೀಸಲಿರಿಸಿದ ಭೂಮಿಯನ್ನು ಕಿತ್ತುಕೊಂಡಿರುವುದು ಬೇಸರ ಮೂಡಿಸಿದೆ. ನ್ಯಾಯಾಲಯದಿಂದ ನ್ಯಾಯ ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.