ಬೆಂಗಳೂರು: ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡಿರುವುದು ಘೋಷಣೆಯಾದ ಬಳಿಕವೂ ತೇಜಸ್ವಿನಿ ಅನಂತ ಕುಮಾರ್ ಅವರು ಬಿಜೆಪಿ ಪರ ಬಹಿರಂಗವಾಗಿ ಪ್ರಚಾರ ನಡೆಸದಿರುವುದು ಚರ್ಚೆಗೆ ಗ್ರಾಸವಾಗಿದೆ.
ತೇಜಸ್ವಿನಿ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕ ಮಾಡಿರುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದರು. ಆನಂತರ ಅಮಿತ್ ಶಾ ಅವರೊಂದಿಗೆ ರೋಡ್ ಶೋನಲ್ಲಿ ಕಾಣಿಸಿಕೊಂಡ ತೇಜಸ್ವಿನಿಯವರು ನಂತರ ಬಹಿರಂಗ ಪ್ರಚಾರದಲ್ಲಿ ಕಂಡಿಲ್ಲ.
ಬುಧವಾರ ಹಾಗೂ ಗುರುವಾರ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ರೋಡ್ ಶೋ ಹಮ್ಮಿಕೊಂಡಿದ್ದು, ಆ ಸಂದರ್ಭದಲ್ಲಿ ತೇಜಸ್ವಿನಿಯವರು ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಏ. 13ರಂದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಆ ಸಭೆಗೆ ತೇಜಸ್ವಿನಿಯವರಿಗೆ ಆಹ್ವಾನ ನೀಡಲಾಗಿದೆಯೇ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ. ಬಹಿರಂಗ ಪ್ರಚಾರಕ್ಕೆ ಏ.16ರ ಸಂಜೆ ತೆರೆ ಬೀಳಲಿದ್ದು, ಏಳು ದಿನವಷ್ಟೇ ಬಾಕಿ ಉಳಿದಿದೆ. ಅಷ್ಟರೊಳಗೆ ತೇಜಸ್ವಿನಿಯವರು ಪ್ರಚಾರಕ್ಕೆ ಬಂದು ಪಕ್ಷಕ್ಕೆ ಬಲ ತುಂಬಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಮುಖಂಡರಿದ್ದಾರೆ.
ಪೂರ್ವಭಾವಿ ಸಭೆ: ಪ್ರಧಾನಿ ಮೋದಿಯವರು ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಬುಧವಾರ ಬಿಜೆಪಿ ಪಾಲಿಕೆ ಸದಸ್ಯರು, ಮುಖಂಡರು ಹಾಗೂ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. ಶಾಸಕರಾದ ಎಂ.ಸತೀಶ್ ರೆಡ್ಡಿ, ಎಸ್.ರಘು, ಬೆಂಗಳೂರು ನಗರ ಅಧ್ಯಕ್ಷ ಪಿ.ಎನ್.ಸದಾಶಿವ ಇತರರು ಪಾಲ್ಗೊಂಡಿದ್ದರು.