Advertisement

ದಕ್ಷಿಣದಲ್ಲಿ ಪ್ರಚಾರಕ್ಕೆ ತೇಜಸ್ವಿನಿ ನಿರಾಸಕ್ತಿ?

12:23 PM Mar 31, 2019 | Team Udayavani |

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಸಿಗದಿರುವುದಕ್ಕೆ ಅಸಮಾಧಾನಗೊಂಡಿರುವ ತೇಜಸ್ವಿನಿ ಅನಂತ ಕುಮಾರ್‌ ಅವರನ್ನು ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಇತರೆ ಪ್ರಮುಖರು ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Advertisement

ಈ ನಡುವೆ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಪರ ಪ್ರಚಾರ ನಡೆಸಲು ತೇಜಸ್ವಿನಿ ಅನಂತ ಕುಮಾರ್‌ ಆಸಕ್ತಿ ತೋರಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್‌ ಅವರಿಗೆ ಆಪ್ತರಾಗಿದ್ದ ಹಿನ್ನೆಲೆಯಲ್ಲಿ ದತ್ತಾತ್ರೇಯ ಹೊಸಬಾಳೆಯವರು ತೇಜಸ್ವಿನಿ ಅನಂತ ಕುಮಾರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಹೆಚ್ಚು ಚರ್ಚೆ ನಡೆದಿಲ್ಲ ಎನ್ನಲಾದರೂ ತೇಜಸ್ವಿನಿ ಅವರಿಗೆ ಉಂಟಾಗಿರುವ ಅಸಮಾಧಾನವನ್ನು ತಗ್ಗಿಸುವ ಪ್ರಯತ್ನ ಸದ್ದಿಲ್ಲದೇ ನಡೆದಿದೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ ಅಖೀಲ ಕರ್ನಾಟಕ ಬ್ರಾಹ್ಮಣ ಸಭಾ ಅಧ್ಯಕ್ಷ ವೆಂಕಟನಾರಾಯಣ, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ದಿನೇಶ್‌ ಹೆಗಡೆ ಸೇರಿದಂತೆ ನಾನಾ ಸಂಘ,

ಸಂಸ್ಥೆ, ಸಂಘಟನೆಗಳ ಪದಾಧಿಕಾರಿಗಳು ತೇಜಸ್ವಿನಿ ಅನಂತ ಕುಮಾರ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬೆಂಬಲಿಗರು, ಕಾರ್ಯಕರ್ತರು ಶನಿವಾರ ಇಡೀ ದಿನ ಭೇಟಿಯಾಗಿ ಮಾತುಕತೆ ನಡೆಸಿದರು. ಅಲ್ಲದೇ ಅವರ ನಿಲುವಿನ ಬಗ್ಗೆ ತಿಳಿಸುವಂತೆಯೂ ಮನವಿ ಮಾಡುತ್ತಿದ್ದು, ಈ ಬಗ್ಗೆ ಸ್ಪಷ್ಟ ಅಭಿಪ್ರಾಯ ನೀಡಿಲ್ಲ ಎನ್ನಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂಬ ಉದ್ದೇಶದಿಂದ ಪಕ್ಷದ ಪರವಾಗಿ ಪ್ರಚಾರ ನಡೆಸುವುದಾಗಿ ತೇಜಸ್ವಿನಿ ಅನಂತ ಕುಮಾರ್‌ ಪುನರುಚ್ಚರಿಸಿದ್ದಾರೆ. ಆದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ಕುರಿತು ಸ್ಪಷ್ಟವಾಗಿ ಹೇಳುತ್ತಿಲ್ಲ ಎನ್ನಲಾಗಿದೆ.

Advertisement

ತಮ್ಮನ್ನು ಭೇಟಿಯಾಗುವ ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರಿಗೂ ತಮ್ಮ ನಿಲುವಿನ ಬಗ್ಗೆ ಸುಳಿವು ನೀಡುತ್ತಿಲ್ಲ. ಬೆಂಗಳೂರು ದಕ್ಷಿಣ ಕ್ಷೇತ್ರದ ಬದಲಿಗೆ ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕ್ಷೇತ್ರದ ಕೆಲವೆಡೆ ಪ್ರಚಾರ: ತೇಜಸ್ವಿ ಸೂರ್ಯ ಅವರು ಶನಿವಾರ ಬೆಳಗ್ಗೆ ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ದೇವಿ ದರ್ಶನ ಪಡೆದರು. ಬಳಿಕ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರ ಆಶೀರ್ವಾದ ಪಡೆದು ಬೆಂಗಳೂರಿಗೆ ಹಿಂತಿರುಗಿದರು.

ಸಂಜೆ ಜಯನಗರ 5ನೇ ಬ್ಲಾಕ್‌ನಲ್ಲಿರುವ ರಾಘವೇಂದ್ರಸ್ವಾಮಿ ದೇವಸ್ಥಾನದಲ್ಲೂ ದರ್ಶನ ಪಡೆದು ಬಳಿಕ ಪ್ರಚಾರ ನಡೆಸಿದರು. ಬಸವನಗುಡಿಯ ಗಾಂಧಿ ಬಜಾರ್‌ನಲ್ಲಿ ಪಾದಯಾತ್ರೆ ನಡೆಸಿದ ತೇಜಸ್ವಿ ಸೂರ್ಯ ಬಳಿಕ ಕೋರಮಂಗಲದಲ್ಲಿ ಸಭೆಯೊಂದರಲ್ಲಿ ಪಾಲ್ಗೊಂಡಿದ್ದರು.

ಇಂದು ಚರ್ಚೆ ಸಾಧ್ಯತೆ: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಯೋಜಿತ ರೀತಿಯಲ್ಲಿ ನಡೆಸುವ ಸಲುವಾಗಿ ಭಾನುವಾರ ಜಯನಗರದಲ್ಲಿ ಸಭೆ ನಡೆಯಲಿದೆ. “ನಾನೂ ಚೌಕಿದಾರ’ ಅಭಿಯಾನದ ಭಾಗವಾಗಿ ನಡೆಯುವ ಸಂವಾದ ಕಾರ್ಯಕ್ರಮದ ಸಂದರ್ಭದಲ್ಲೇ ಪ್ರಚಾರದ ರೂಪುರೇಷೆ ಬಗ್ಗೆ ಚರ್ಚೆ ನಡೆಸಲು ಚಿಂತಿಸಿದ್ದಾರೆ. ಕ್ಷೇತ್ರದ ಬಿಜೆಪಿ ಶಾಸಕರು, ಪಾಲಿಕೆ ಸದಸ್ಯರು ಪಾಲ್ಗೊಳ್ಳಲಿದ್ದು, ಸಂಘಟನೆ ಹಾಗೂ ಪ್ರಚಾರದ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next