ಬೆಂಗಳೂರು: ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ಹೊಸ ಟ್ವಿಟರ್ ಖಾತೆ ತೆರೆದಿದ್ದು, ಅನಂತ ಕುಮಾರ್ ಅವರ ನಿಧನರಾದಾಗ ಸಾಂತ್ವನ ಹೇಳಿದವರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಹಿಂದೆ ಹಲವು ವರ್ಷಗಳಿಂದ ಸಾಮಾಜಿಕ, ಪರಿಸರ ಕುರಿತಂತೆ ತೇಜಸ್ವಿನಿ ಅಂಡರ್‌ಸ್ಕೋರ್ ಎಸಿಎಫ್ ಖಾತೆಯಡಿ ಟ್ವೀಟ್ ಮಾಡುತ್ತಿದ್ದ ಅವರು ಇನ್ನು ಮುಂದೆ ತೇಜ್ ಅಂಡರ್‌ಸ್ಕೋರ್ ಅನಂತಕುಮಾರ್ ಹೆಸರಿನ ಖಾತೆ ಬಳಸುವುದಾಗಿ ಹೇಳಿಕೊಂಡಿದ್ದಾರೆ.
ಈ ಹಿಂದಿನ ಟ್ವಿಟರ್ ಖಾತೆಯಲ್ಲಿ ತಾವು ಇಂಜಿನಿಯರ್, ಚಾರಿಟಬಲ್ ಸಂಘಟನೆ ಮುಖ್ಯಸ್ಥೆ, ಇಬ್ಬರು ಹೆಣ್ಣು ಮಕ್ಕಳ ತಾಯಿ ಎಂದು ಬರೆದುಕೊಂಡಿದ್ದರು. ಹೊಸ ಟ್ವಿಟರ್ ಖಾತೆಯ ಸ್ಟೇಟಸ್ ಅಂಗಳದಲ್ಲಿ ಗಿಡಮರಗಳ ಚಿತ್ರವಿದೆ. ಮುಖ್ಯ ವಾಲ್‌ನಲ್ಲಿ ದಿವಂಗತ ಅನಂತಕುಮಾರ್, ಮಾಜಿ ಶಾಸಕ ಬಿ.ಎನ್.ವಿಜಯಕುಮಾರ್ ಜೊತೆಯಾಗಿರುವ ಚಿತ್ರವಿದೆ.
ಅನಂತ ಕುಮಾರ್ ವಿಧಿವಶರಾದ ನಂತರ ದೂರವಾಣಿ, ಪತ್ರ ಮುಖೇನ ಸಾಂತ್ವನ ಹೇಳಿದ ರಾಷ್ಟ್ರಪತಿ ರಾಮನಾಥ ಕೋವಿಂದ್, ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಾರ್ವಜನಿಕರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಅನಂತಕುಮಾರ್ ಅವರ ಹೆಸರು ನಮೂದಿಸಿಕೊಂಡು ಹೊಸ ಟ್ವಿಟರ್ ಖಾತೆ ತೆರೆದಿರುವುದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯರಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಅಚ್ಚರಿಯಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.