ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಅವರು ಶುಕ್ರವಾರ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಪರವಾಗಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮನೆ ಮನೆ ಪ್ರಚಾರ ನಡೆಸಿದರು. ಈ ಮೂಲಕ ಸೀಟು ಹಂಚಿಕೆಯ ನಂತರ ಉಂಟಾಗಿದ್ದ ಎಲ್ಲ ಗೊಂದಲಕ್ಕೂ ತೆರೆ ಎಳೆದಿದ್ದಾರೆ.
ತೇಜಸ್ವಿನಿ ಅನಂತಕುಮಾರ್ ಅವರು ಬಿಜೆಪಿ ಶಾಲು ಹಾಕಿಕೊಂಡು ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ, ಮೋದಿ ಸಾಧನೆ ಹಾಗೂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾವಚಿತ್ರ ಇರುವ ಕರಪತ್ರವನ್ನು ನೀಡಿದರು. ಬೆಂಗಳೂರು ದಕ್ಷಿಣ ಕೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿದ್ದರಿಂದ ಬೇಸರವಾಗಿದ್ದರೂ, ಬಹಿರಂಗವಾಗಿ ತೋರಿಸಿಕೊಂಡಿರಲಿಲ್ಲ.
ಇತ್ತೀಚೆಗೆ ಬನಶಂಕರಿ ದೇವಸ್ಥಾನದಿಂದ ಸಾರಕ್ಕಿವರೆಗೆ ಅಮಿತ್ ಶಾ ರೋಡ್ ಶೋ ನಡೆಸಿದ ದಿನವೇ ಅವರನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ರೋಡ್ ಶೋ ಆರಂಭವಾಗಿ ಹತ್ತು ನಿಮಿಷ ತಡವಾಗಿ ಬಂದು ಸೇರಿಕೊಂಡಿದ್ದರು. ಇದಾದ ನಂತರವೂ ಅಭ್ಯರ್ಥಿ ಪರ ಬಹಿರಂಗ ಪ್ರಚಾರ ಮಾಡಿರಲಿಲ್ಲ.
ಶುಕ್ರವಾರ ಮನೆ ಮನೆ ತೆರೆಳಿ ಬಹಿರಂಗ ಪ್ರಚಾರ ಮಾಡುವ ಮೂಲಕ ಅಚ್ಚರಿ ಮೂಡಿಸಿದರು. ಅಲ್ಲದೇ, ರಾಜ್ಯದ ಹಿರಿಯ ನಾಯಕರೊಂದಿಗೆ ಚರ್ಚಿಸಿ ವಿವಿಧ ಕ್ಷೇತ್ರದಲ್ಲೂ ಪ್ರಚಾರ ನಡೆಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿಯವರ ರ್ಯಾಲಿಗೂ ಮುನ್ನವೇ ಬಹಿರಂಗ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದರಿಂದ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುವ ಸಂದೇಶವನ್ನು ರವಾನೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಶನಿವಾರ ಸಂಜೆ ಅರಮನೆ ಮೈದಾನದಲ್ಲಿ ನಡೆಯುವ ಬೃಹತ್ ರ್ಯಾಲಿಯಲ್ಲೂ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಚಿಕ್ಕಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ಆರಂಭಿಸುವ ಮೂಲಕ ಎಲ್ಲ ಗೊಂದಲಕ್ಕೂ ತೆರೆ ಎಳೆದಿದ್ದಾರೆ.