Advertisement

Tejasvi Surya: ಇನ್ನೊಂದು ಏರ್‌ಪೋರ್ಟ್‌ ತರಲು ಯತ್ನಿಸುವೆ; ತೇಜಸ್ವಿ ಸೂರ್ಯ

10:55 AM Jun 05, 2024 | Team Udayavani |

ಬೆಂಗಳೂರು: ಕಳೆದ ಬಾರಿ ಏನು ಕೆಲಸ ಮಾಡಿದ್ದೇನೋ ಅದಕ್ಕಿಂತಲೂ 10 ಪಟ್ಟು ಪರಿಶ್ರಮ ಹಾಕಿ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ. ಬೆಂಗಳೂರಿಗೆ ಮತ್ತೂಂದು ವಿಮಾನ ನಿಲ್ದಾಣದ ಬೇಡಿಕೆಯಿದ್ದು ಅದರ ಕಾರ್ಯಗತಕ್ಕೆ ಶ್ರಮಿಸುತ್ತನೇ ಎಂದು ಸತತ 2ನೇ ಬಾರಿ ಸಂಸತ್‌ ಪ್ರವೇಶ ಮಾಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿಸೂರ್ಯ ಹೇಳಿದ್ದಾರೆ. ಗೆಲುವಿನ ಖುಷಿಯಲ್ಲಿ ಅವರು “ಉದಯವಾಣಿ’ ಜತೆ ಮಾತನಾಡಿದರು.

Advertisement

ನಿಮ್ಮ ಗೆಲುವಿನ ಬಗ್ಗೆ ಹೇಳುವುದಾದರೆ?

ಹಣಬಲದ ಮುಂದೆ ಜನಬಲ ಗೆದ್ದಿದೆ. ದೊಡ್ಡ ಸಂಖ್ಯೆಯಲ್ಲಿ ಗೆಲವು ಸಂತಸ ತಂದಿದೆ. ಕೋವಿಡ್‌ ಸಂಕಷ್ಟದ ವೇಳೆ ಮಾಡಿದ್ದ ಕೆಲಸಗಳು ಕೈ ಹಿಡಿದಿವೆ. 2 ಸಾವಿರ ಬಡಜನರಿಗೆ ಮನೆ ಕಟ್ಟಿಕೊಟ್ಟಿರುವುದು, 10 ಸಾವಿರ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿರುವುದು. ಎಲ್ಲಕ್ಕಿಂತಲೂ ಮಿಗಿಲಾಗಿ ದೇಶದಲ್ಲೇ ಹೆಚ್ಚಿನ ಜನೌಷಧ ಕೇಂದ್ರಗಳನ್ನು ತೆರೆದು ಜನಸೇವೆ ಮಾಡಿರುವುದು ಜನರ ನನ್ನ ಮೇಲೆ ನಂಬಿಕೆಯಿರಿಸಿದ್ದಾರೆ ಎಂಬುವುದು ಇದರಿಂದ ಗೊತ್ತಾಗುತ್ತದೆ.

ಕ್ಷೇತ್ರಕ್ಕಾಗಿ ನಿಮ್ಮ ಮುಂದಿನ ಗುರಿ?

ಕಳೆದ ಬಾರಿ ಏನು ಕೆಲಸ ಮಾಡಿದ್ದೇನೋ ಅದಕ್ಕಿಂತಲೂ 10 ಪಟ್ಟು ಪರಿಶ್ರಮ ಹಾಕಿ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ಪ್ರಗತಿ ಹಂತದಲ್ಲಿದೆ. ಮೆಟ್ರೋ ಕಾಮಗಾರಿ ಆರಂಭವಾಗಿದ್ದು, ಅದನ್ನು ಪೂರ್ಣಗೊಳಿಸಬೇಕಾಗಿದೆ. ಬೆಂಗಳೂರಿಗೆ ಅಂತಾರಾಷ್ಟ್ರೀಯ ಮಟ್ಟದ ಮೂಲಭೂತ ಸೌಕರ್ಯ ಕಲ್ಪಿಸಕೊಡಬೇಕಾಗಿದೆ. ಬೆಂಗಳೂರಿಗೆ ಮತ್ತೂಂದು ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬ ಬೇಡಿಕೆಯಿದೆ. ಸೆಮಿಕಂಡಕ್ಟರ್‌, ಎಲೆಕ್ಟ್ರಾನಿಕ್‌ ಉತ್ಪನ್ನಗಳ ತಯಾರಿಕಾ ಘಟಕ ಸೇರಿದಂತೆ ಹಲವು ಹಬ್‌ಗಳನ್ನು ನಿರ್ಮಾಣ ಮಾಡಬೇಕಾಗಿದೆ .ಇವೆಲ್ಲವನ್ನು ಕೇಂದ್ರದ ಮುಂದಿಟ್ಟು ಕಾರ್ಯಗತಕ್ಕೆ ಪ್ರಯತ್ನ ಮಾಡುತ್ತೇನೆ.

Advertisement

2ನೇ ಬಾರಿ ಗೆಲುವಿನ ಕಾರಣಗಳು?

ನರೇಂದ್ರ ಮೋದಿ ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕು ಎಂಬುವುದು ಜನರ ಆಶಯವಾಗಿದೆ. ಆ ಹಿನ್ನೆಲೆಯಲ್ಲಿ ಈ ಬಾರಿ ಕೂಡ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಕಳೆದ 10 ವರ್ಷಗಳಲ್ಲಿ ನಡೆದಿರುವ ಅಭಿವೃದ್ಧಿ ಕೆಲಸ ದೇಶದಲ್ಲಿ ಮತ್ತೆ ಮುಂದುವರಿಯಬೇಕು ಎಂಬುವುದು ಜನರ ಆಸೆಯಾಗಿದೆ. ಹೀಗಾಗಿ ಬಹುದೊಡ್ಡ ಮತಗಳಿಂದ ಆಯ್ಕೆ ಮಾಡಿದ್ದಾರೆ.

ರಾಜ್ಯದ ಯಾವೆಲ್ಲ ಹಿತಾಶಕ್ತಿಗಾಗಿ ನಿಮ್ಮ ಶ್ರಮವಿರಲಿದೆ?

ರಾಜ್ಯದ ಹಿತಾಸಕ್ತಿಗೆ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ. ತೇಜಸ್ವಿ ಸೂರ್ಯ ಅವರು ಮತ್ತೆ ಕರ್ನಾಟಕದ ಧ್ವನಿ ಆಗಿ ಸಂಸತ್‌ನಲ್ಲಿ ಕೆಲಸ ಮಾಡಬೇಕು ಎಂಬುವುದು ಜನರ ಆಸೆಯಾಗಿದೆ. ಈ ಕಾರಣದಿಂದಲೇ ದೊಡ್ಡ ಬಹುಮತದಿಂದ ಮತ್ತೆ ಆಯ್ಕೆ ಮಾಡಿಕೊಂಡಿದ್ದಾರೆ. ಕ್ಷೇತ್ರದ ಮತದಾರರು ಇರಿಸಿರುವ ಭರವಸೆಯನ್ನು ಉಳಿಸಿ ರಾಜ್ಯದ ಅಭಿವೃದ್ಧಿಗೆ ಕೈ ಜೋಡಿಸುತ್ತೇನೆ.

ಯಾರಿಗೆ ಗೆಲುವು ಅರ್ಪಿಸುತ್ತೀರಿ?

ನನ್ನ ಗೆಲುವಿಗೆ ಹಗಲುರಾತ್ರಿ ಎನ್ನದೆ ಹಲವು ಜನರು ಕೆಲಸ ಮಾಡಿದ್ದಾರೆ. ಅವರೆಲ್ಲರಿಗೂ ಗೆಲುವನ್ನು ಅರ್ಪಿಸುತ್ತೇನೆ. ಶಾಸಕರಾದ ಸತೀಶ್‌ರೆಡ್ಡಿ, ರವಿಸುಬ್ರಹ್ಮಣ, ಉದಯ್‌ ಗರುಡಾಚಾರ್‌, ರಾಮಮೂರ್ತಿ, ವಿ.ಸೋಮಣ್ಣ, ಉಮೇಶ್‌ಶೆಟ್ಟಿ ಸೇರಿದಂತೆ ಹಲವು ಕೆಲಸ ಮಾಡಿದ್ದಾರೆ. ಗೋವಿಂದರಾಜ ನಗರದಲ್ಲಿ ಶಾಸಕರಿಲ್ಲದಿದ್ದರೂ 50 ಸಾವಿರ ಲೀಡ್‌ ಕೊಟ್ಟಿದ್ದಾರೆ. ವಿಜಯನಗರದಲ್ಲಿ 30 ಸಾವಿರ ಲೀಡ್‌ ನೀಡಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಕ್ಷೇತ್ರದಲ್ಲಿ 10-12 ಸಾವಿರ ಲೀಡ್‌ ಕೊಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ.

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next