ಬೆಂಗಳೂರು: ಜೀವನ್ ಬ್ಲೂಸ್ ಎಫ್ ಸಿ ತಂಡವನ್ನು 4-2 ಪೆನಾಲ್ಟಿ (2-2 ಡ್ರಾ ನಂತರ)ಯೊಂದಿಗೆ ಸೋಲಿಸುವ ಮೂಲಕ ಪ್ರಭಾ 7ಎಸ್ ತಂಡವು ಕಿಕ್ ಸ್ಟಾರ್ಟ್ ಎಫ್ ಸಿ ಯಲ್ಲಿ ನಡೆದ ‘ತೇಜಸ್ವೀ ಸೂರ್ಯ ಫುಟ್ಬಾಲ್ ಕಪ್’ ನ ವಿಜಯಿ ತಂಡವಾಗಿ ಹೊರಹೊಮ್ಮಿದ್ದು, 8 ಟರ್ಫ್ ಗಳಲ್ಲಿ ಒಟ್ಟು 244 ಪಂದ್ಯಗಳು ನಡೆದಿದ್ದು ಬೆಂಗಳೂರು ದಕ್ಷಿಣದ ಅತಿ ದೊಡ್ಡ ಕ್ರೀಡಾ ಉತ್ಸವಕ್ಕೆ ಭಾನುವಾರ ತೆರೆ ಎಳೆಯಲಾಗಿದೆ.
ಓಪನ್ ಕೆಟಗರಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಲಾ ಮಾಸಿಯಾ ತಂಡವು,ಕಾಸ್ಮೋಸ್ ತಂಡದ ಎದುರಿನ ರೋಚಕ ಪಂದ್ಯದಲ್ಲಿ ಸೆಣಸಿ ವಿಜಯಿಯಾಗಿದ್ದು ಪಂದ್ಯದ ವಿಶೇಷ.
ಪ್ರಶಸ್ತಿ ವಿತರಣೆಯ ನಂತರ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವೀ ಸೂರ್ಯ, ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿನ ಯುವಕರನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಈ ಟೂರ್ನಿಯನ್ನು ಆಯೋಜಿಸಲಾಗಿದ್ದು, ವೃತ್ತಿಪರ ಹಾಗೂ ಹವ್ಯಾಸಿ ಫುಟ್ಬಾಲ್ ಆಟಗಾರರನ್ನು ಪ್ರೋತ್ಸಾಹಿಸುವುದು ಈ ಟೂರ್ನಿಯ ಉದ್ದೇಶವಾಗಿತ್ತು, ಆದರೆ, ಪಂದ್ಯ ಆಯೋಜನೆಯ ಘೋಷಣೆಯಾದ ನಂತರ ಬೆಂಗಳೂರು ದಕ್ಷಿಣದ ಅನೇಕರು ಟೂರ್ನಿಯ ಭಾಗವಾಗಲು ಇಚ್ಛಿಸಿದ್ದು ನಿಜಕ್ಕೂ ಖುಷಿಯ ಸಂಗತಿ. ತಂಡದ ಆಟಗಾರರು, ಪ್ರತೀ ಟರ್ಫ್ ನಲ್ಲಿ ನಿಯೋಜನೆಗೊಂಡಿದ್ದ ಸ್ವಯಂಸೇವಕರು, ಟರ್ಫ್ ನ ಮಾಲೀಕರು ಎಲ್ಲರ ಸಹಕಾರದಿಂದ ಈ ಟೂರ್ನಿ ದೊಡ್ಡ ಮಟ್ಟದ ಯಶಸ್ಸು ಕಾಣಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ವಾಹನ ಮಾಲಕರೇ ಎಚ್ಚರ! ನಿಮ್ಮ ವಾಹನದಲ್ಲಿ ಜಾತಿ ಹೆಸರು ಕಂಡುಬಂದಲ್ಲಿ ವಶ ಖಚಿತ!
ನಂತರ ಮಾತನಾಡಿದ ಟೂರ್ನಮೆಂಟ್ ನ ನಿರ್ದೇಶಕರಾದ ಅರವಿಂದ್ ಸುಚಿಂದ್ರನ್, ಒಂದೇ ದಿನದಲ್ಲಿ 8 ವಿವಿಧ ಟರ್ಫ್ ಗಳಲ್ಲಿ 192 ಮ್ಯಾಚ್ ನಡೆಸಿದ್ದು ಈ ಟೂರ್ನಮೆಂಟ್ ನ ವಿಶೇಷ. ಫುಟ್ಬಾಲ್ ಸೇರಿದಂತೆ ಇಂತಹ ಇನ್ನಷ್ಟು ಟೂರ್ನಮೆಂಟ್ ಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಸುವ ಉದ್ದೇಶವನ್ನು ಬೆಂಗಳೂರು ದಕ್ಷಿಣ ಸಂಸದರ ಕಛೇರಿಯು ಇಟ್ಟುಕೊಂಡಿದ್ದು, ಇದೇ ರೀತಿಯ ಸಹಕಾರದ ನಿರೀಕ್ಷೆ ಇದೆ ಎಂದು ತಿಳಿಸಿದರು.