ಬೆಂಗಳೂರು: ಟ್ವಿಟ್ಟರ್‌ನಲ್ಲಿ ಯುವತಿಯೊಬ್ಬರು ಮಾಡಿರುವ ಆರೋಪ ಸಂಬಂಧ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಆಕೆಗೆ ರಕ್ಷಣೆ ನೀಡುವಂತೆ ರಾಜ್ಯ ಮಹಿಳಾ ಕಾಂಗ್ರೆಸ್, ಮಹಿಳಾ ಆಯೋಗಕ್ಕೆ ದೂರು ನೀಡಿದೆ.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಅವರಿಗೆ ದೂರು ನೀಡಿದ್ದಾರೆ.
“ತೇಜಸ್ವಿ ಸೂರ್ಯನಿಂದ ತನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ಆಗಿರುವ ಬಗ್ಗೆ ಯುವತಿ ತನ್ನ ಟ್ವಿಟರ್ ಖಾತೆಯಲ್ಲಿ ಬಹಿರಂಗ ಪಡಿಸಿದ್ದಾರೆ. ಅವರಂತೆ ಅನೇಕ ಯುವತಿಯರಿಗೆ ತೇಜಸ್ವಿ ಸೂರ್ಯ ವಂಚನೆ ಮಾಡಿದ್ದಾರೆ.
ಅಲ್ಲದೇ, ಮಹಿಳಾ ಮೀಸಲಾತಿ ಬಗ್ಗೆ ಕೆಟ್ಟದಾಗಿ ಬರೆದುಕೊಂಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ತೇಜಸ್ವಿ ಸೂರ್ಯ, ಪ್ರಭಾವಿ ರಾಜಕಾರಣಿಯ ಸಂಬಂಧಿ ಆಗಿರುವುದರಿಂದ ಅವರು ಯುವತಿಗೆ ತೊಂದರೆ ಕೊಡುವ ಸಾಧ್ಯತೆ ಇದೆ.
ಇದರಿಂದ ಆಕೆ ಭಯಗೊಂಡು ಆರೋಪದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಹೀಗಾಗಿ ತೇಜಸ್ವಿ ಸೂರ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಕಾಂಗ್ರೆಸ್ ಮನವಿ ಮಾಡಿದೆ.