ಬೆಂಗಳೂರು: “ಲವ್ ಜೆಹಾದ್ ಎನ್ನುವುದು ಹಿಂದೂ- ಮುಸ್ಲಿಂ ವಿಚಾರವಲ್ಲ. ಅದು ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆಯ ಮಹತ್ತರ ವಿಚಾರವಾಗಿದೆ’ ಎಂದು ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಪ್ರತಿಪಾದಿಸಿದ್ದಾರೆ.
ಮುಸ್ಲಿಮೇತರ ಹೆಣ್ಣುಮಕ್ಕಳು ಮುಸ್ಲಿಂ ಯುವಕನನ್ನು ವಿವಾಹವಾಗುವುದಾದರೆ ವಿಶೇಷ ವಿವಾಹ ಕಾಯ್ದೆಯಡಿ ನೋಂದಣಿ ಕಡ್ಡಾಯ ಮಾಡಬೇಕು. ಜತೆಗೆ ಹಿಂದೂ ಉತ್ತರಾಧಿಕಾರಿ ಕಾಯ್ದೆಯಡಿ ವಿವಾಹವಾಗುವಂತಾದರೆ ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆಯಾಗಲಿದೆ ಎಂದು ಹೇಳಿದ್ದಾರೆ.
“ಉದಯವಾಣಿ’ ಕಚೇರಿಯಲ್ಲಿ ಬುಧವಾರ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ಸದ್ಯ ರಾಜ್ಯ ಮತ್ತು ದೇಶದ ಹಲವೆಡೆ ಚರ್ಚೆಗೆ ಗ್ರಾಸವಾಗಿರುವ ಲವ್ ಜೆಹಾದ್ ಬಗ್ಗೆ ವಾಸ್ತವಾಂಶ ಅರಿಯದೆ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ನಾವು ಯಾರ ವಿರುದ್ಧವೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ವ್ಯಕ್ತಿ ಯಾರನ್ನು ವಿವಾಹವಾಗಬೇಕು ಎಂಬ ಐಚ್ಛಿಕ ಸ್ವಾತಂತ್ರ್ಯ ಸಂವಿಧಾನಾತ್ಮಕವಾಗಿದೆ. ಆದರೆ ಲವ್ ಜೆಹಾದ್ ಹಿಂದೂ- ಮುಸ್ಲಿಂ ವಿಚಾರ ಅಲ್ಲ. ಹಿಂದೂ, ಕ್ರೈಸ್ತ ಧರ್ಮೀಯ ಹೆಣ್ಣುಮಗಳು ಮುಸ್ಲಿಂ ಯುವಕನನ್ನು ವಿವಾಹವಾದರೆ ಸ್ವಧರ್ಮೀಯರನ್ನು ವಿವಾಹವಾದಾಗ ಸಿಗುವ ಕಾನೂನಾತ್ಮಕ ರಕ್ಷಣೆ ಸಿಗುವುದಿಲ್ಲ. ಆದರೆ ಮುಸ್ಲಿಂ ಯುವಕನನ್ನು ವಿವಾಹವಾದ ಅನ್ಯಧರ್ಮೀಯ ಹೆಣ್ಣುಮಗಳಿಗೂ ಹಕ್ಕುಗಳ ರಕ್ಷಣೆ ಸಿಗಬೇಕು ಎಂಬುದಷ್ಟೇ ನಮ್ಮ ಉದ್ದೇಶ ಎಂದರು.
ಈ ವಿವಾದ ಬಗೆಹರಿಸಲು ಹೊಸ ಕಾನೂನು ಜಾರಿಗಿಂತಲೂ ಸಣ್ಣ ಬದಲಾವಣೆ ಮೂಲಕ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ಮುಸ್ಲಿಮೇತರ ಹೆಣ್ಣುಮಗಳು ಮುಸ್ಲಿಂ ಯುವಕನನ್ನು ವಿವಾಹವಾದರೆ ವಿಶೇಷ ವಿವಾಹ ಕಾಯ್ದೆಯಡಿ ನೋಂದಣಿಯಾಗುವುದನ್ನು ಕಡ್ಡಾಯಗೊಳಿಸಬೇಕು. ಇಲ್ಲದಿದ್ದರೆ ಅಂತಹ ಅಂತರ್‌ಧರ್ಮೀಯ ವಿವಾಹಕ್ಕೆ ಮಾನ್ಯತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಬೇಕು ಎಂದು ಸಲಹೆ ನೀಡಿದರು.
ಹಾಗೆಯೇ ಹಿಂದೂ ಉತ್ತರಾಧಿಕಾರಿ ಕಾಯ್ದೆಯಡಿ ವಿವಾಹವಾಗುವ ವ್ಯವಸ್ಥೆ ತರಬೇಕು. ಇದರಿಂದ ಹೆಣ್ಣುಮಕ್ಕಳ ಕಾನೂನಾತ್ಮಕ ಹಕ್ಕುಗಳ ರಕ್ಷಣೆಯಾಗುತ್ತದೆ. ಇಲ್ಲದಿದ್ದರೆ ಹಕ್ಕುಗಳ ರಕ್ಷಣೆಯಾಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದರು.
ಪಕ್ಷದ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷನಾದ ಬಳಿಕ ಬಿಹಾರ ಚುನಾವಣೆ, ಗ್ರೇಟರ್ ಹೈದರಾಬಾದ್ ಚುನಾವಣೆಯಲ್ಲಿ ಪ್ರಚಾರ ಕೈಗೊಂಡಿದ್ದೆ. ಪ. ಬಂಗಾಲಕ್ಕೂ ಹೋಗಿ ಬಂದಿದ್ದೇನೆ. ಪ. ಬಂಗಾಳದಲ್ಲಿ ರಕ್ತಸಿಕ್ತ ರಾಜಕಾರಣ ನಡೆಯುತ್ತಿದೆ. ಟಿಯರ್ ಗ್ಯಾಸ್ ಎದೆಗೆ ಹೊಡೆಯುತ್ತಾರೆ, ಲಾಠಿ ಚಾರ್ಜ್ ಎಂದರೆ ಬಾಸುಂಡೆ ಬರುವಂತೆ ಬಾರಿಸುತ್ತಾರೆ ಎಂದು ಅಲ್ಲಿಗೆ ಹೋದ ಮೇಲೆ ಗೊತ್ತಾಯಿತು. ಪ. ಬಂಗಾಲದಲ್ಲಿ ಅಲ್ಲಿನ ಸರಕಾರದ ವಿರುದ್ಧ ಜನರ ಆಕ್ರೋಶ ತೀವ್ರವಾಗಿದೆ.
– ತೇಜಸ್ವಿ ಸೂರ್ಯ