ಚಾರಣವು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದು. ಹೆಗಲಿಗೆ ಬ್ಯಾಗ್ ಏರಿಸಿಕೊಂಡು ಬೆಟ್ಟ-ಗುಡ್ಡ, ಕಾಡು-ಮೇಡನ್ನು ಸುತ್ತುವುದೆಂದರೆ ಅದು ನಮಗೆ ನಾವೇ ಸೃಷ್ಟಿಸಿಕೊಳ್ಳುವ ಭೂಲೋಕದ ಸ್ವರ್ಗ ನನ್ನ ಪಾಲಿಗೆ. ಚಾರಣವನ್ನೇ ಪ್ರಧಾನ ಅಜೆಂಡವಾಗಿರಿಸಿಕೊಂಡು ಮಂಡ್ಯದಲ್ಲಿ ಚಾರಣಪ್ರಿಯ ಹತ್ತು ಮಂದಿ ಉಪನ್ಯಾಸಕ ಸ್ನೇಹಿತರೊಡಗೂಡಿ ಉದಯಿಸಿದ್ದು ಎಲ್‌ಜಿ 10 ಎಂಬ ಚಾರಣ ತಂಡ. (LECTURES GROUP 10) ನಮ್ಮ ಈ ತಂಡವು ವರ್ಷದ ಆರಂಭದಲ್ಲೇ, ಗಣರಾಜ್ಯೋತ್ಸವವನ್ನು ಸ್ಮರಣೀಯವಾಗಿಸಿಕೊಳ್ಳುವ ಸದುದ್ದೇಶದಿಂದ ಕಾಡಿಗೆ ತೆರಳಲು ನಿರ್ಧರಿಸಿ, ಚಾರಣಕ್ಕೆ ಆಯ್ಕೆಮಾಡಿಕೊಂಡ ಸ್ಥಳ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆ ಸಮೀಪದ ಬಲ್ಲಾಳರಾಯನ ದುರ್ಗಾ.
ನಮ್ಮ ಪಯಣವು ಮಂಡ್ಯದಿಂದ ಆರಂಭವಾಯಿತು. ಪೂರ್ವ ನಿಗದಿಯಂತೆ ಎಲ್ಲರೂ ತಮ್ಮ ತಮ್ಮ ಕಾಲೇಜುಗಳಿಗೆ ತೆರಳಿ ಸಂವಿಧಾನ ದಿನವನ್ನು ಆಚರಿಸಿ, ಮೇಲುಕೋಟೆ, ಹಾಸನ ಮಾರ್ಗವಾಗಿ ಮೂಡಿಗೆರೆಗೆ ಬಂದು ತಲುಪಿದಾಗ ಸಮಯ ಸಂಜೆಯಾಯಿತು. ರಾತ್ರಿ ಜಾವಳಿಯಲ್ಲಿ ತಂಗಿದ್ದು, ಬೆಳಿಗ್ಗೆ ಚಾರಣ ಹೊರಡುವುದು ನಮ್ಮ ಉದ್ದೇಶವಾಗಿತ್ತು. ಮೂಡಿಗೆರೆಯಲ್ಲಿ ಕಾಲಿರಿಸಿದ ತಕ್ಷಣ ಪ್ರಜ್ಞಾಪೂರ್ವಕವೋ ಅಪ್ರಜ್ಞಾಪೂರ್ವಕವೋ ಒಟ್ಟಾರೆ ನನ್ನೊಳಗೆ ಧನ್ಯತಾಭಾವ ಮೂಡಿದ್ದು ಸುಳ್ಳಲ್ಲ. ಏಕೆಂದರೆ ನಾವು ಯೋಚಿಸುವ, ನೋಡುವ ಮತ್ತು ಗ್ರಹಿಸುವ ದೃಷ್ಟಿಕೋನವನ್ನೇ ಬದಲಾಯಿಸಿ, ಸದಾ ಹೊಸ ದಿಗಂತದೆಡೆಗೆ ತುಡಿಯುವಂತೆ ಯುವ ಮನಸುಗಳನ್ನು ಪ್ರೇರೇಪಿಸುತ್ತಿದ್ದ ಕನ್ನಡದ ಸುಪ್ರಸಿದ್ಧ ಲೇಖಕರಾದ ಪೂರ್ಣಚಂದ್ರ ತೇಜಸ್ವಿ ಅವರು ಓಡಾಡಿದ, ಬದುಕಿದ್ದ ನೆಲದಲ್ಲಿ ನಾವು ಬಂದು ನಿಂತಿದ್ದೆವು. ಹಾಗೆಯೇ ನಾನು ಪಿಯುಸಿ ತರಗತಿಯಲ್ಲಿ ಬೋಧಿಸುತ್ತಿರುವ ತೇಜಸ್ವಿ ಅವರ ಕೃಷ್ಣೇಗೌಡನ ಆನೆ ಕಥೆಯಲ್ಲಿನ ಪಾತ್ರಗಳು, ಘಟನೆಗಳು ಕಣ್ಣು ಮುಂದೆ ಮೂಡಿ ಮರೆಯಾಗುತ್ತಿದ್ದವು. ಈ ಬೀದಿಯಲ್ಲಿ ರಹಮಾನ್ ಸಾಬಿಯ ಪೆಟ್ಟಿಗೆ ಅಂಗಡಿಯನ್ನು ಕೃಷ್ಣೇಗೌಡನ ಆನೆ ಬೀಳಿಸಿರಬಹುದು. ಆ ಬೀದಿಯಲ್ಲಿ ಸ್ಕೂಲ್ ಮಕ್ಕಳು ನಿಂತುಕೊಂಡು “ಗೌರಿ’ ಎಂದು ಆನೆಯನ್ನು ಕರೆದಿರಬಹುದು. ಪೋಸ್ಟ್‌ಮೆನ್ ಜಬ್ಟಾರ್ ಕುಂಟುತ್ತಾ ಬರುತ್ತಿದ್ದ ಜಾಗ ಇದೇ ಇರಬಹುದು. ಪುರಸಭೆಯ ಪ್ರಸಿಡೆಂಟ್ ಖಾನ್ ಸಾಹೇಬ್ ಮೀಟಿಂಗ್ ನಡೆಸಿದ ಸ್ಥಳ ಅದಿರಬಹುದು. ಇನ್ನೂ ಏನೇನೋ ಘಟನೆಗಳನ್ನು ಕುರಿತು ನಾನು ಕಲ್ಪಿಸಿಕೊಂಡರೂ ಪ್ರಯೋಜನವಿಲ್ಲ. ಏಕೆಂದರೆ, ಮೂಡಿಗೆರೆ ಗುರುತು ಸಿಗದಷ್ಟು ಬದಲಾಗಿ, ಆಧುನಿಕತೆಯಲ್ಲಿ ಮೈಮರೆತಿತ್ತು.
ಬಲ್ಲಾಳರಾಯ ದುರ್ಗಾಕ್ಕೆ ಚಾರಣ ಹೊರಡುವುದೇ ನಮ್ಮ ಪ್ರಧಾನ ಉದ್ದೇಶ ಆಗಿತ್ತಾದರೂ, ಮೂಡಿಗೆರೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಮನೆಗೆ ಭೇಟಿ ಕೊಟ್ಟಿದ್ದು ಆಕಸ್ಮಿಕ. ಅವರ ಮನೆಯ ಮುಂದಿನ ಕಾಡು ಮೊದಲಿಗೆ ನಮ್ಮನ್ನು ಸ್ವಾಗತಿಸಿತು. ತೇಜಸ್ವಿ ಅವರ ತೋಟದ ಮನೆಯ ವಿಶೇಷವೇ ಇದೆಂಬುದು ಮುಂದೆ ಗೊತ್ತಾಯಿತು. 20 ಎಕರೆ ಜಾಗದಲ್ಲಿ ಸ್ವಲ್ಪ ಕಾಡನ್ನು ಉಳಿಸಿಕೊಂಡು, ಉಳಿದುದನ್ನು ತೋಟ ಮಾಡಿಕೊಂಡಿದ್ದಾರೆ. ಮನೆಯ ಮುಂದೆ ಸುತ್ತಲು ಕಾಡನ್ನು ಉಳಿಸಿಕೊಂಡು ಎತ್ತಿನ ಬಂಡಿ ಹೋಗುವಷ್ಟು ಮಾತ್ರವೇ ದಾರಿ ಇದೆ. ಆ ದಾರಿಯಲ್ಲಿ ಸುಮಾರು 100 ಮೀ. ನಡೆದು ಸಾಗಿದ ಮೇಲೆ ಮನೆ ಕಾಣುತ್ತದೆ. ಮೊದಲ ನೋಟಕ್ಕೆ ಏನೂ ಕಾಣಸಿಗುವುದಿಲ್ಲ. ಆ ದಾರಿಯಲ್ಲಿ ನಡೆದು ಹೋಗುತ್ತಿರಬೇಕಾದರೆ ನನ್ನೊಳಗೆ ಏನೇನೊ ಕಪೋಲಕಲ್ಪಿತಗಳು ಮೂಡಲಾರಂಭಿಸಿದವು. ಬಹುಶಃ ಇದೆ ಜಾಗದಲ್ಲಿ ತೇಜಸ್ವಿ ಜೀಪಿನ ಕೆಳಗೆ ಮಲಗಿ ಗೇರುಬಾಕ್ಸ್ ರಿಪೇರಿ ಮಾಡುತ್ತಿದ್ದರೇನೊ, ದುರ್ಗಪ್ಪ ಕೊಡಲಿ ಕೇಳಲು ಬಂದು ನಿಂತಿದ್ದು ಇಲ್ಲಿಯೇ ಇರಬಹುದೇನೊ ಎಂದು ಊಹಿಸುತ್ತ, ಮುಂದೆ ನಡೆದೆ. ಮನೆ ಎದುರಾದಾಗ ನಮ್ಮ ತಂಡ ಅಕ್ಷರಶಃ ಶಾಲಾ ಮಕ್ಕಳಾಗಿದ್ದರು. ತೇಜಸ್ವಿ ಅವರು ಓಡಿಸುತ್ತಿದ್ದ ಬಜಾಜ್ ಚೇತಕ್ ಸ್ಕೂಟರ್ ಮೇಲೆ ಹೊದಿಸಿದ್ದ ಕವರ್ ತೆಗೆದು ಅದರ ಮುಂದೆ ನಿಂತು ಪೋಟೊ ಹಿಡಿಸಿಕೊಂಡು ಹಿಗ್ಗಿದರು. ಇಷ್ಟೆಲ್ಲಾ ರಾದ್ಧಾಂತ ಆಗುತ್ತಿದ್ದರೂ ಮನೆಯವರ ಯಾರ ಸುಳಿವು ಕಾಣದಿದ್ದಾಗ, ಮನೆಯಲ್ಲಿ ಯಾರು ಇಲ್ವೇನೊ, ಮನೆ ಖಾಲಿ ಇರಬಹುದು ಎಂದು ಇನ್ನೂ ಏನೇನೊ ಗೊಣಗುತ್ತ ಮನೆಯ ಸುತ್ತಲೂ ಓಡಾಡುತ್ತಿರುವಾಗಲೇ, ಮನೆಯ ಬಾಗಿಲು ತೆಗೆದು “ಯಾರು’ ಎಂದು ನಮ್ಮ ಮುಂದೆ ಎದುರಾದವರು ರಾಜೇಶ್ವರಿ ತೇಜಸ್ವಿ ಅವರು.
ನಮ್ಮನ್ನು ಒಳಗೆ ಕರೆದು ಎಲ್ಲಿಂದ ಬಂದಿದ್ದೀರಿ ಎಂದು ನಮ್ಮ ಪರಿಚಯ ಮಾಡಿಕೊಂಡ ಮೇಲೆ, “ಹೌದಾ ಸರಿ, ಹಾಗಾದರೆ ಮಾತಾಡಿ’ ಎಂದು ಅವರೇ ಮಾತಿಗೆಳೆದರೂ ನಾವು ಮಾತು ಬಾರದವರಾಗಿದ್ದೆವು. ಅಂತೂ ತೇಜಸ್ವಿ ಅವರ ಬಗ್ಗೆ, ಅವರ ದಾಂಪತ್ಯ ಬದುಕಿನ ಬಗ್ಗೆ, ಮೂಡಿಗೆರೆಗೆ ಬಂದು ನೆಲೆಸಿದರ ಬಗ್ಗೆ ಮಾತನಾಡಿದೆವು. ತೇಜಸ್ವಿ ಕೃತಿಗಳ ಬಗ್ಗೆ ಓದಿನ ಮಿತಿಯಲ್ಲಿ ಕೇಳುತ್ತಿದ್ದ ಪ್ರಶ್ನೆಗಳಿಗೆ ಅವರು ಅಷ್ಟೇ ಸಾವಧಾನವಾಗಿ ಲವಲವಿಕೆಯಿಂದಲೇ ಉತ್ತರಿಸುತ್ತಿದ್ದ ಅವರ ಮಾತಿನ ಧಾಟಿಯಲ್ಲಿ ತೇಜಸ್ವಿ ಇಣುಕಿದ್ದು ಅತಿಶಯೋಕ್ತಿಯಲ್ಲ. ಕರ್ವಾಲೊ ಕಾದಂಬರಿಯಲ್ಲಿನ ಪಾತ್ರಗಳು ಕಾಲ್ಪನಿಕವೊ ಅಥವಾ ವಾಸ್ತವವೊ ಎಂಬ ನನ್ನ ಪ್ರಶ್ನೆಗೆ ಉತ್ತರಿಸುತ್ತ, “ತೇಜಸ್ವಿ ಕೃತಿಗಳೆಲ್ಲವೂ ವಾಸ್ತವವೇ’ ಎಂದರು. ಹನ್ನೊಂದು ವರ್ಷಗಳ ಕಾಲ ತಮ್ಮ ಹಳೆಯ ಮನೆಯಲ್ಲಿ ವಿದ್ಯುತ್ ಇಲ್ಲದೆ ಚಿಮಣಿ ದ್ವೀಪದಲ್ಲಿ ಜೀವನ ಸಾಗಿಸುತ್ತಿದ್ದ ಸಂದರ್ಭದಲ್ಲಿ ತೇಜಸ್ವಿ ಕರ್ವಾಲೊ ಕಾದಂಬರಿ ಬರೆದಿದ್ದು ಎಂದು ನೆನಪಿಸಿಕೊಂಡರು. ಅದಕ್ಕೆ ಸಾಕ್ಷಿಯೆಂಬಂತೆ ಈಗಿರುವ ಅವರ ಮನೆಯ ಶೋಕೇಸ್‌ನಲ್ಲಿ ಆ ಚಿಮಣಿ ದ್ವೀಪ ತನ್ನ ಇರುವಿಕೆಯನ್ನು ಸಾರುತ್ತಿತ್ತು.
ನಾವು ಇನ್ನೇನು ಮರಳಲು ಸಿದ್ಧರಾದೆವು. ರಾಜೇಶ್ವರಿ ಮೇಡಂ ನಮ್ಮ ಅನಿರೀಕ್ಷಿತ ಆಗಮನದ ಬಗ್ಗೆ ಮಾತನಾಡುತ್ತ, “ವಾರ ವಾರ ಹೀಗೇನೆ ಯಾರಾದರೂ ಬರುತ್ತಿರುತ್ತಾರೆ’ ಎಂದರು. ಏನೇನೊ ಅನವಶ್ಯಕ ಪ್ರಶ್ನೆಗಳ ಕೇಳಿ ಬೇಸರಿಸುತ್ತಾರೆ ಎಂದಾಗ ನನ್ನ ಆತಂಕ ಇನ್ನೂ ಹೆಚ್ಚಾಯಿತು. ಹಾಗಾದರೆ, ನಾವು ಇಷ್ಟೊತ್ತು ಕೇಳಿದ ಪ್ರಶ್ನೆಗಳು ಅವರಿಗೆ ಕಿರಿಕಿರಿ ಉಂಟು ಮಾಡಿರಬಹುದಾ ಎಂಬ ಯೋಚನೆಯಲ್ಲಿ ಮುಳುಗಿದ್ದಾಗ, ತಮ್ಮ ತೋಟದ ಗಿಡದಲ್ಲಿ ಬೆಳೆದ ಬಾಳೆಹಣ್ಣನ್ನು ತಿನ್ನಲು ಕೊಟ್ಟು, “ನಿಮ್ಮಲ್ಲಿ ಎಲ್ಲರ ಹೆಸರು ನೆನಪಿರಲ್ಲ. ಯಾರಾದರೂ ಇಬ್ಬರ ಹೆಸರು ಹೇಳಿ, ನಾನು ಮುಂದೆ ಯಾವಾಗಲಾದರೂ ಬರೆಯುವ ಸಂದರ್ಭದಲ್ಲಿ ಉಲ್ಲೇಖೀಸಲು ಸಹಾಯಕವಾಗುತ್ತೆ’ ಎಂದಾಗ ಮನದ ದಿಗಿಲು ದೂರವಾಗಿತ್ತು.
ನಾವು ಬಂದಿದ್ದರ ಮೂಲ ಉದ್ದೇಶ ಚಾರಣದ ವಿಷಯವನ್ನು ಕೇಳಿ ತಿಳಿದು, “”ಮೂಡಿಗೆರೆಯ ವಿಶೇಷವೇ ಆರ್ಕಿಡ್ ಗಿಡಗಳು. ನಾನು ಕಣ್ಣು ಹಾಯಿಸಿದ ಕಡೆಯೆಲ್ಲ ಅವೇ ಕಾಣುತ್ತವೆ. ಅವುಗಳನ್ನು ನೋಡಿಕೊಂಡು ಹೋಗಿ, ಮತ್ತೆ ನಿಮ್ಮ ವಿದ್ಯಾರ್ಥಿಗಳಿಗೆ ನೀವು ಓದಿದ, ನೋಡಿದ, ಕೇಳಿದ ಹೊಸ ಹೊಸ ವಿಚಾರಗಳನ್ನು ತಿಳಿಸಿ ಮತ್ತು ತೇಜಸ್ವಿ ಚಿಂತನೆಗಳನ್ನು ಮತ್ತು ಕೃತಿಗಳನ್ನು ಓದಲು ಉತ್ತೇಜನಗೊಳ್ಳುವಂತೆ ಬೋಧಿಸಿ” ಎಂಬ ಕಿವಿ ಮಾತನ್ನು ಹೇಳಿ ನಮ್ಮನ್ನು ಬೀಳ್ಕೊಟ್ಟರು.
ಮರಳುವಾಗ ಕೊಟ್ಟಿಗೆಹಾರ, ಬಣಕಲ್ಲು, ಜಾವಳಿ ಕಣ್ಣು ಮುಂದೆ ಹಾಗೇ ಹಾದುಹೋದವು. ಮಾರ, ಪ್ಯಾರ, ಬಿರಿಯಾನಿ ಕರಿಯಪ್ಪ, ವಿಜ್ಞಾನಿ ಕರ್ವಾಲೊ, ಮಂದಣ್ಣ, ಕಿವಿ, ವೇಲಾಯುದ, ಪುಟ್ಟಯ್ಯ ಮೂಡಿಗೆರೆ ಪೇಟೆಯ ಈ ಬದಿಯಲ್ಲೆಲ್ಲೋ ನಿಂತಿರಬಹುದು, ಆ ರಸ್ತೆ ಬದಿಯಲ್ಲೆಲ್ಲೋ ಬೀಡಿ ಸೇದುತ್ತಿರಬಹುದು. ಅಲ್ಲೆಲ್ಲೋ ಓಡಾಡುತ್ತಿರಬಹುದು ಎಂದು ಭಾಸವಾಗುತ್ತಿತ್ತು. ಆದರೆ ತೇಜಸ್ವಿ ಇಲ್ಲದ ಮೂಡಿಗೆರೆ ಮಾತ್ರ “ನಿರುತ್ತರ’ವಾಗಿತ್ತು.
ಲೋಕೇಶ ಬೆಕ್ಕಳಲೆ