ಪಟ್ನಾ: ಬಹುಕೋಟಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಪಕ್ಷದಲ್ಲಿ ಲಾಲು ಪುತ್ರರೊಳಗಿನ ಪಾರಮ್ಯದ ಮೇಲಾಟ ತಾರಕಕ್ಕೇರಿದೆ.
ಲಾಲು ಪುತ್ರ ತೇಜಸ್ವಿ ಯಾದವ್ ಅವರು ತನ್ನ ಸಹೋದರ ತೇಜ್ ಪ್ರತಾಪ್ ಯಾದವ್ ರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿರುವುದಾಗಿ ಬಿಹಾರದ ಸಚಿವ ವಿಜಯ್ ಸಿನ್ಹಾ ನೀಡಿರುವ ಹೇಳಿಕೆ ರಾಜ್ಯದ ರಾಜಕೀಯ ವರ್ತುಲದಲ್ಲಿ ಭಾರೀ ಸಂಚಲನ ಉಂಟುಮಾಡಿದೆ.
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಪ್ರಕೃತ ಪಕ್ಷದ ಪಾಲನೆ ಪೋಷಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಆರ್‌ಜೆಡಿ ಪಕ್ಷದ ದಯನೀಯ ನಿರ್ವಹಣೆಯೇ ಲಾಲು ಪುತ್ರರ ಅಧಿಕಾರ ಮೇಲಾಟಕ್ಕೆ ಕಾರಣವೆನ್ನಲಾಗಿದೆ.
ಲೋಕಸಭಾ ಚುನಾವಣೆಯ ಬಳಿಕ ಸಾಕಷ್ಟು ಸಮಯದಿಂದ ಬಿಹಾರದಿಂದ ದೂರವಾಗಿದ್ದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ರಾಜ್ಯ ವಿಧಾನಸಭೆಯಲ್ಲಿ ಕಾಣಿಸಿಕೊಂಡೇ ಇಲ್ಲ.