ಪಟ್ನಾ : ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರ ವಿವಾಹ ವಿಚ್ಛೇದನ ಕೇಸಿನ ವಿಚಾರಣೆ ಇಂದು ಪಟ್ನಾ ಕೋರ್ಟಿನಲ್ಲಿ ಆರಂಭವಾಗಲಿದೆ.
ವೈಶಾಲಿ ಜಿಲ್ಲೆಯ ಮಹುವಾ ಕ್ಷೇತ್ರದ ಶಾಸಕರಾಗಿರುವ ತೇಜ್ ಪ್ರತಾಪ್ ಕಳೆದ ವರ್ಷ ನವೆಂಬರ್ 3ರಂದು ಪಟ್ನಾದ ಕೌಟುಂಬಿಕ ಕೋರ್ಟಿನಲ್ಲಿ ಡಿವೋರ್ಸ್ ಅರ್ಜಿ ದಾಖಲಿಸಿದ್ದರು.
ಪತ್ನಿ ಐಶ್ವರ್ಯಾ ರಾಯ್ ಜತೆಗೆ ತನಗೆ ವೈವಾಹಿಕ ಹೊಂದಾಣಿಕೆ ಇಲ್ಲದಿರುವ ಕಾರಣಕ್ಕೆ ತಾನು ವಿಚ್ಛೇದನ ಅರ್ಜಿ ಸಲ್ಲಿಸುತ್ತಿರುವಾಗಿ ತೇಜ್ ಹೇಳಿದ್ದರು.
ತೇಜ್ ಅವರ ವಿವಾಹವು 2018ರ ಮೇ ತಿಂಗಳಲ್ಲಿ ಪಟ್ನಾದಲ್ಲಿ ಐಶ್ವರ್ಯಾ ರಾಯ್ ಜತೆಗೆ ಅದ್ದೂರಿಯಿಂದ ನಡೆದಿತ್ತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸಹಿತ ಅನೇಕ ಪ್ರಮುಖ ರಾಜಕೀಯ ನಾಯಕರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನವ ದಂಪತಿಗೆ ಶುಭ ಹಾರೈಸಿದ್ದರು.
ಐಶ್ವರ್ಯಾ ರಾಯ್ ಅವರ ತಂದೆ ಚಂದ್ರಿಕ ರಾಯ್ ಅವರು ಹಾಲಿ ಆರ್‌ಜೆಡಿ ಶಾಸಕರು ಮತ್ತು ಅಜ್ಜ ದರೋಗಾ ರಾಯ್ ಅವರು 1960ರ ದಶಕದಲ್ಲಿ ಮುಖ್ಯ ಮಂತ್ರಿಯಾಗಿದ್ದರು.
ನ್ಯಾಯಾಲಯವು ಈ ಕೇಸಿನ ವಿಚಾರಣೆಯನ್ನು ಮೊದಲ ಜನವರಿ 8ಕ್ಕೆ ನಿಗದಿಸಿ ಅನಂತರ ಜ.31ಕ್ಕೆ ಇರಿಸಿತ್ತು. ನ್ಯಾಯಾಧೀಶರ ವರ್ಗಾವಣೆಯೇ ಇದಕ್ಕೆ ಕಾರಣವಾಗಿತ್ತು.