Advertisement

ನಾಡಕಚೇರಿಯಲ್ಲೇ ತಹಶೀಲ್ದಾರ್‌ ಕಚೇರಿ

12:31 PM May 19, 2022 | Team Udayavani |

ಕಾರವಾರ: ರಾಜ್ಯದಲ್ಲಿ 58 ಹೊಸ ತಾಲೂಕುಗಳ ರಚನೆಯ ಜತೆಗೆ ಉತ್ತರ ಕನ್ನಡದ 12ನೇ ತಾಲೂಕಾಗಿ ಸೇರ್ಪಡೆಯಾದದ್ದು ದಾಂಡೇಲಿ. 2017ರಲ್ಲಿ ದಾಂಡೇಲಿ ತಾಲೂಕಾಗಿ ಘೊಷಣೆಯಾದ ನಂತರ ದಾಂಡೇಲಿ ನಗರದ ನಾಡಕಚೇರಿಯಲ್ಲಿಯೇ ತಹಶೀಲ್ದಾರ್‌ ಕಚೇರಿ ಆರಂಭವಾಗಿದೆ.

Advertisement

ತಹಶೀಲ್ದಾರರ ಕಚೇರಿ ಕರ್ತವ್ಯಕ್ಕೆ ಪೀಠೊಪಕರಣ ಹಾಗೂ ಕಚೇರಿಯ ಇತರೆ ಸೌಲಭ್ಯ ಹಾಗೂ ಕಾಗದ ಪತ್ರ, ಲೇಖನ ಸಾಮಾಗ್ರಿ ಖರೀದಿಗೆ ಒಟ್ಟು 25 ಲಕ್ಷವನ್ನು ಸರ್ಕಾರ ನೀಡಿದೆ. ಇದನ್ನು ಹೊರತುಪಡಿಸಿ 10 ಕೋಟಿಯ ಆಡಳಿತ ಭವನ ನಿರ್ಮಾಣ ಹಂತದಲ್ಲಿದೆ. 5 ಎಕರೆ ಪ್ರದೇಶವನ್ನು ಜಿಲ್ಲಾಡಳಿತ ನೀಡಿದ್ದು, ಭವ್ಯ ಆಡಳಿತ ಭವನ ನಿರ್ಮಾಣ ಮುಕ್ತಾಯ ಹಂತದಲ್ಲಿದೆ.

ಬರುವ ಆಗಸ್ಟ್ ಅಥವಾ ಸೆಪ್ಟಂಬರ್‌ನಲ್ಲಿ ಆಡಳಿತ ಭವನ ಉದ್ಘಾಟನೆ ಸಹ ಆಗಲಿದೆ. ದಾಂಡೇಲಿ ನಗರದ ಜೊತೆಗೆ ಅಂಬಿಕಾನಗರ, ಅಂಬೇವಾಡಿ, ಆಲೂರು, ಕೊಗಿಲಬನ ಗ್ರಾಮ ಪಂಚಾಯತ್‌ಗಳು ದಾಂಡೇಲಿ ತಾಲೂಕು ವ್ಯಾಪ್ತಿಯಲ್ಲಿವೆ. ಅಲ್ಲದೇ ಜೊಯಿಡಾದ ಬೈಲಪಾರು ಮಜಿರೆ ಸಹ ದಾಂಡೇಲಿ ತಾಲೂಕಿನ ವ್ಯಾಪ್ತಿಗೆ ಬರಲಿದೆ. ಈ ಪದೇಶದ ಜನರು ಈಗ ಹಳಿಯಾಳ ತಾಲೂಕಿಗೆ ಅಲೆದಾಡುವುದು ನಿಂತಿದೆ. ರೆಕಾರ್ಡ್‌ ರೂಂ ಸಿದ್ಧವಾದ ನಂತರ ದಾಂಡೇಲಿಗೆ ಬರಬೇಕಾದ ದಸ್ತಾವೇಜು, ಭೂ ದಾಖಲೆಗಳು ಸಹ ಬರುವ ಸೆಪ್ಟಂಬರ್‌ಗೆ ಹಳಿಯಾಳದಿಂದ ದಾಂಡೇಲಿಗೆ ಬರಲಿವೆ. ಹಳಿಯಾಳ ತಾಲೂಕಿನಿಂದ ಪ್ರತ್ಯೇಕವಾದ ದಾಂಡೇಲಿ ತಾಲೂಕು ತನ್ನ ಅಸ್ತಿತ್ವವನ್ನು ಪ್ರತ್ಯೇಕಿಸಿಕೊಂಡಿದೆ.

ದಾಂಡೇಲಿ ನಗರಸಭೆ ಸಹ ಶ್ರೀಮಂತ ನಗರಸಭೆಗಳಲ್ಲಿ ಒಂದಾಗಿದೆ. ಇಲ್ಲಿನ ಮೊಸಳೆ ಪಾರ್ಕ್‌ ಹಾಗೂ ಅರಣ್ಯ ಇಲಾಖೆ, ರೆಸಾರ್ಟ್‌ ಉದ್ಯಮಗಳು ದಾಂಡೇಲಿಗೆ ರಾಜ್ಯಮಟ್ಟದಲ್ಲಿ ಹೆಸರು ತಂದು ಕೊಟ್ಟಿದೆ. ಪ್ರವಾಸೋದ್ಯಮಕ್ಕೆ ದಾಂಡೇಲಿ ಹೆಸರುವಾಸಿ. ಅರಣ್ಯ ಇಲಾಖೆಯ ಜಂಗಲ್‌ ಸಫಾರಿ, ಕುಳಗಿ ಪಕ್ಷಿ ಧಾಮ ಹಾಗೂ ಅಂಬಿಕಾನಗರ ಸೆಕ್ಸ್‌ ಪಾಯಿಂಟ್‌, ಸಿಂಥೇರಿ ರಾಕ್ಸ್‌ ಹೆಸರುವಾಸಿ. ಜಂಗಲ್‌ ಲಾಡ್ಜಸ್‌ನ ರಾಫ್ಟ್‌ ಹಾಗೂ ಖಾಸಗಿಯವರು ನಡೆಸುವ ರಾಫ್ಟಿಂಗ್ ಚಟುವಟಿಕೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುವುದು ವಾಡಿಕೆ. ವಿದ್ಯುತ್‌ ಉತ್ಪಾದನೆ ಹಾಗೂ ಕುಡಿವ ನೀರು ಪೂರೈಕೆಯಿಂದ ದಾಂಡೇಲಿ ಸದಾ ಸುದ್ದಿಯಲ್ಲಿದೆ. ಕಾಳಿ ನದಿ ನೀರನ್ನು ಹೊರ ಜಿಲ್ಲೆಗೆ ಹಂಚುವ ವಿಚಾರವಂತೂ ವಿವಾದದ ಬೆಂಕಿಯನ್ನು ಜನರ ಮಡಿಲಲ್ಲಿ ಅಡಗಿಸಿಟ್ಟಿದೆ.

ದಾಂಡೇಲಿ ಪೇಪರ್‌ ಮಿಲ್‌ ಸಹ ಅನೇಕ ಕೈಗಳಿಗೆ ಉದ್ಯೋಗ ನೀಡಿದೆ. ಅನೇಕ ಹೊಸ ಹೊಸ ಸಮಸ್ಯೆ ಹಾಗೂ ಸವಾಲುಗಳ ದಾಂಡೇಲಿ ತಾಲೂಕಿನ ಮುಂದೆ ಈಗಲೂ ಇವೆ. ಕಾಳಿ ನದಿ ನೀರಿನ ಹಂಚಿಕೆ ಹೊಸ ವಿವಾದವನ್ನೇ ಸೃಷ್ಟಿಸಿದೆ. ಹೊಸ ತಾಲೂಕಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕಿದ್ದು, ಪ್ರವಾಸೋದ್ಯಮದ ಮೇಲೆ ಪ್ರಸ್ತುತ ಎದ್ದಿರುವ ವಿವಾದವನ್ನು, ನೀರು ಹಂಚಿಕೆ ವಿವಾದವನ್ನು ಸಹ ಬಗೆ ಹರಿಸಬೇಕಿದೆ.

Advertisement

ಇಲ್ಲಿನ ಜಲ ಸಾಹಸ ಕ್ರೀಡೆಗಳು ಜೊಯಿಡಾದಿಂದ ಆರಂಭವಾಗಿ ದಾಂಡೇಲಿಯ ಮಾವಳಂಗಿಯಲ್ಲಿ ಬಂದು ನಿಲ್ಲುತ್ತವೆ. ಜೊಯಿಡಾ -ದಾಂಡೇಲಿ ಅವಳಿ ತಾಲೂಕುಗಳು ಪ್ರವಾಸೋದ್ಯಮವನ್ನು ಬೆಸೆದುಕೊಂಡಿವೆ. ಈಗ ಇಲ್ಲಿನ ಸ್ಥಳೀಯರ ಕೈಯಲ್ಲಿನ ಪ್ರವಾಸೋದ್ಯಮದ ಹೃದಯವೇ ಆಗಿರುವ ಜಲ ಸಾಹಸ ಕ್ರೀಡೆ ಹಾಗೂ ರಾಫ್ಟಿಂಗ್ ನ್ನು ಹೊರ ರಾಜ್ಯದ ಶ್ರೀಮಂತ ಸಂಸ್ಥೆಗೆ ಧಾರೆ ಎರೆಯುವ ಲಕ್ಷಣಗಳಿದ್ದು, ಅದು ಸ್ಥಳೀಯ ಪ್ರವಾಸೋದ್ಯಮಿಗಳನ್ನು ರೊಚ್ಚಿಗೆ ಏಳಿಸುವ ಎಲ್ಲಾ ಲಕ್ಷಣಗಳು ಇವೆ. ಹೊಸ ತಾಲೂಕಿನ ಉಗಮದ 5 ವರ್ಷದ ಹಾದಿ ಇನ್ನೂ ಕಠಿಣ ಸವಾಲುಗಳನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ಮುಂದೆ ತಂದಿಡುವ ಘಟನೆಗಳು ಸಾಲು ಸಾಲಾಗಿ ನಡೆಯುತ್ತಿವೆ.

-ನಾಗರಾಜ್‌ ಹರಪನಹಳ್ಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next