ಮಂಗಳೂರು: ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ನೆಹರೂ ಕುಟುಂಬದೊಂದಿಗೆ ನಾನು ಅವಿನಾಭಾವ ಸಂಬಂಧ ಹೊಂದಿದ್ದೇನೆ. ನಾನು ಎಂದೆಂದಿಗೂ ಕಾಂಗ್ರೆಸ್‌ನಲ್ಲಿಯೇ ಇರಲಿ ದ್ದೇನೆ. ಪಕ್ಷದ ಒಳಿತಿಗಾಗಿ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುದ್ಧಿ ಹೇಳಿದ್ದೇನೆ. ಆದರೆ ಅದು ತಪ್ಪು ಅನ್ನುವುದಾದರೆ ಇವತ್ತು ಸಂಜೆಯೊಳಗೇ ನನ್ನನ್ನು ಪಕ್ಷದಿಂದ ತೆಗೆಯಲಿ. ನಾನು ಖುಷಿಯಲ್ಲಿರುವೆ. ಆದರೆ ಕಾಂಗ್ರೆಸ್ ಬಿಡುವ ಪ್ರಶ್ನೆಯೇ ನನಗಿಲ್ಲ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಹೇಳಿದರು.
ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾರ್ಲಿಮೆಂಟ್‌ನಲ್ಲಿ “ಸತ್ಯಮೇವ ಜಯತೇ’ ಎಂದು ಬರೆಯಲಾಗಿದೆ. ಸುಳ್ಳು ಹೇಳುವುದಕ್ಕೆ ಗೆಲುವು ಎನ್ನುವುದಾದರೆ ಅದನ್ನೇ ಇವರು ಬರೆದುಬಿಡಲಿ. ಪೂಜಾರಿ ಯಾವತ್ತೂ ಸತ್ಯವನ್ನೇ ಹೇಳುತ್ತಾ ಬಂದವನು. ಯಾವತ್ತೂ ಸತ್ಯವೇ ಗೆಲ್ಲುವುದು. ಸ್ವಾತಂತ್ರಕ್ಕಾಗಿ ಹೋರಾಡಿದ, ಸೇವೆ ಮಾಡಿದ ಕುಟುಂಬದೊಂದಿಗೆ ನನ್ನ ಸಂಬಂಧ ನಿರಂತರವಾಗಿರಲಿದೆ. ಇದನ್ನು ಹೈಕಮಾಂಡ್ ಸಹಿತ ಯಾರಿಗೂ ತಡೆಯಲಾಗದು ಎಂದರು.
ಸಿದ್ದರಾಮಯ್ಯ ಅವರಿಗೆ ಸಲಹೆ ಕೊಟ್ಟದ್ದು ನನ್ನ ತಪ್ಪಾ? ನೇರ ನಡೆನುಡಿ ಪೂಜಾರಿಯ ಗುಣ. ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದು ಹಣಕಾಸು ಸಚಿವರಾಗಿದ್ದಾಗ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದು 1 ರೂ.ಗೆ ಅಕ್ಕಿ ನೀಡುವಂತೆ ಸಲಹೆ ನೀಡಿದ್ದೆ. ಆಗ ಆಗುವುದಿಲ್ಲ ಎಂದಿದ್ದರು. ನನ್ನ ಹೇಳಿಕೆ ಸುಳ್ಳಾಗಿದ್ದರೆ ಧರ್ಮಸ್ಥಳ ಅಥವಾ ಕುದ್ರೋಳಿಗೆ ಬಂದು ಆಣೆ ಮಾಡಲಿ ಎಂದು ಪೂಜಾರಿ ಸಿಎಂಗೆ ಸವಾಲೆಸೆದರು.
ಗೊಂದಲ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಬಹುದಲ್ಲವೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೂಜಾರಿ, ನಾನು ಮೈಸೂರಿನಲ್ಲಿ ಪಕ್ಷದ ಕಾರ್ಯಕ್ರಮದಲ್ಲೇ ಎಚ್ಚರಿಸಿ, ಸಲಹೆ ನೀಡಿದೆ. ಅದನ್ನು ಸ್ವೀಕರಿಸಲಿಲ್ಲ, ಅದು ಪಾರ್ಟಿ ಸಭೆ ಆಗಿರ
ಲಿಲ್ಲವೇ? ಹಾಗಾದರೆ ಪಕ್ಷ ಬೆಳೆಸಿದ ಕಾರ್ಯಕರ್ತರು ಏನೂ ಅಲ್ಲವೇ? ಪಕ್ಷದ ಒಳಿತಿಗಾಗಿ ನನ್ನ ಮಾತಿನ ಧೋರಣೆಯಲ್ಲಿ ಯಾವತ್ತೂ ಬದಲಾಗುವುದಿಲ್ಲ ಎಂದರು.
ಒಂದು ವೇಳೆ ಪಕ್ಷ ನಿಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಂಡರೆ? ಎಂಬ ಪ್ರಶ್ನೆಗೆ, ನಾನು ಯಾವತ್ತೂ ಯೂ ಟರ್ನ್ ಮಾಡಿದವನಲ್ಲ. ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಬೇರೆ ಪಕ್ಷ ಸೇರುವ ಮನುಷ್ಯ ನಾನಲ್ಲವೇ ಅಲ್ಲ ಎಂದು ಸ್ಪಷ್ಟಪಡಿಸಿದರು. ಎಸ್.ಎಂ. ಕೃಷ್ಣ, ಜಾಫರ್ ಷರೀಫ್‌ರಂತಹ ಹಿರಿಯ ನಾಯಕರು ಪಕ್ಷದಿಂದ ದೂರವಾಗಿದ್ದು, ಈಗ ಕುಮಾರ್ ಬಂಗಾರಪ್ಪ ಆ ಸಾಲಿನಲ್ಲಿದ್ದಾರೆ. ಇದು ಪಕ್ಷದೊಳಗಿನ ಅವ್ಯವಸ್ಥೆಯನ್ನು ವ್ಯಕ್ತಪಡಿಸುತ್ತಿದೆ. ಇದೇ ರೀತಿ ಮುಂದುವರಿದರೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮುಂದಿನ ದಿನಗಳು ಕಠಿನವಾಗಲಿವೆ. ಜಾಫರ್ ಷರೀಫ್‌ರಂತಹ ಅತ್ಯುನ್ನತ ನಾಯಕರು ನಮಗೆ ಬೇಡವೇ? ಇವರೆಲ್ಲ ಹೋದರೆ ಇವರ ಜತೆಗೆ ಜನರ ದೊಡ್ಡ ತಂಡವೇ ಹೋಗಲಿದೆ. ಇದು ಪಕ್ಷಕ್ಕೆ ಅಪಾಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.