Advertisement
ಪ್ರತಿಬಾರಿಯೂ ನನಗೆ ಇದೊಂದು ಸವಾಲು! ಎಂಟನೇ ತರಗತಿಗೆ ಸೇರುವಾಗ ಕಣ್ಣಿನಲ್ಲಿ ಇನ್ನೂ ತುಂಟತನ ಇಟ್ಟುಕೊಂಡಿರುವ ಮಕ್ಕಳು, ಹತ್ತನೇ ತರಗತಿ ಹೊತ್ತಿಗೆ ಸಣ್ಣ ತಲೆ ನೋವಾಗಿ ಪರಿಣಮಿಸುತ್ತಾರೆ. ಓದು, ಶಿಸ್ತು, ನಡವಳಿಕೆ, ನುಡಿಗಾರಿಕೆಗಿಂತ ಆ ಸಮಯದಲ್ಲಿ ಅವರು ಒಳಗಾಗುವ ಪ್ರೀತಿ ಗೀತಿಯ ಸೆಲೆಗೆ ನಮಗೆ ಗಾಬರಿಯಾಗುತ್ತದೆ. ನನ್ನಂತೆ ಆ ಹಂತದಲ್ಲಿ ಪಾಠ ಹೇಳುವ ಪ್ರತಿಯೊಬ್ಬ ಮೇಷ್ಟ್ರಿಗೂ ಅದೊಂದು ಪೀಕಲಾಟ.
Related Articles
Advertisement
ನಿಜಕ್ಕೂ ಅದು ಪ್ರೀತಿಯಲ್ಲ!: ಮೊನ್ನೆಯಷ್ಟೇ ನನ್ನ ಶಿಷ್ಯೆಯೊಬ್ಬಳು ಸಿಕ್ಕಿದ್ದಳು. ತನ್ನ ಹೈಸ್ಕೂಲ್ ದಿನದ ಘಟನೆಯೊಂದನ್ನು ನೆನಪಿಸಿಕೊಂಡು ಬಿದ್ದ ಬಿದ್ದು ನಕ್ಕಳು. “ನಾನ್ಹೆಗೆ ಆಡಿಟ್ಟೆ ಅಲ್ವಾ ಸರ್ ಆಗ… ನೆನೆಸಿಕೊಂಡರೆ ನಗು ಬರುತ್ತೆ. ಒಂಚೂರು ಯಾಮಾರಿದ್ದರೂ ಲೈಫ್ ಹಾಳಾಗ್ತಿತ್ತು.
ಥ್ಯಾಂಕ್ಸ್ ಸರ್’ ಅಂದಳು. ಹೌದು, ಆ ಸಮಯದ್ದು ಕೇವಲ ಒಂದು ಆಕರ್ಷಣೆ. ವಯಸ್ಸು ಹೇಳಿಕೊಡುವ ಭಿನ್ನ ಲಿಂಗದ ಸೆಳೆತ. ನಾವಿರುವ ಪರಿಸರದಿಂದ ಕಲಿತುಕೊಂಡ ಆ ಮನಸ್ಸುಗಳು ಅದನ್ನು ಪ್ರೀತಿಯೆಂದುಕೊಳ್ಳುತ್ತವೆ. ಅದೊಂದು ಕೇವಲ ಕ್ರಶ್! ತಾತ್ಕಾಲಿಕ ಆಕರ್ಷಣೆ. ಅವನು ಕಾಣಿಸದಿದ್ದರೆ ಎರಡೇ ದಿನಕ್ಕೆ ಅವನ ನೆನಪೂ ಉಳಿಯದಂತೆ ಮರೆತು ಹೋಗುತ್ತೀರಿ, ಅಷ್ಟೇ.
ಸೂಕ್ಷ್ಮ ವಯಸ್ಸು, ಸೂಕ್ಷ್ಮ ವಿಚಾರ!: ನದಿಯ ಮೇಲೆ ಕಟ್ಟಲಾಗಿರುವ ಹಗ್ಗದ ಮೇಲಿನ ನಡಿಗೆ ಇದು. ಸ್ವಲ್ಪ ಯಾಮಾರಿದರೂ ನೀರು ಪಾಲು. ಅವರ ಮನಸ್ಸು ಸೂಕ್ಷ್ಮವೆಂದು ಗೊತ್ತಿದ್ದೂ ನಾವು ಯರ್ರಾಬಿರ್ರಿಯಾಗಿ ಆಡಿದರೆ ಅದು ನಮಗೂ ನಷ್ಟ. ಮಗುವಿನ ಬದುಕಿಗೂ ನಷ್ಟ. ಇಂಥ ವಿಚಾರಗಳನ್ನು ಸಾಕಷ್ಟು ಜಾಗೃಕತೆಯಿಂದಲೇ ಸಂಭಾಳಿಸಬೇಕು. ಇಂಥ ವಿಚಾರಗಳು ತಿಳಿದ ತಕ್ಷಣ ಕೂಗಾಡುತ್ತೇವೆ. ಅಬ್ಬರಿಸುತ್ತೇವೆ. ಅವರನ್ನು ದಂಡಿಸುತ್ತೇವೆ.
ಬಂಧಿಸುತ್ತೇವೆ. ಇದರಿಂದ ಖಂಡಿತ ಅವರು ಹಠಕ್ಕೆ ಬೀಳುತ್ತಾರೆ. ಬೇಡ ಅನ್ನುವುದನ್ನೇ ಹಠಕ್ಕೆ ತಂದುಕೊಳ್ಳುವ ವಯಸ್ಸದು. “ನನ್ನಿಷ್ಟ, ನಾನು ಏನಾದರೂ ಮಾಡಿಕೊಳ್ತೀನಿ’ ಅಂತ ತಿರುಗಿ ಬೀಳುತ್ತಾರೆ. ನಾವು ಅವರ ನಡೆಯ ಬಗ್ಗೆ ತುಂಬಾ ಕುತೂಹಲ ತಾಳಿ ಅವರನ್ನು ಕೂರಿಸಿಕೊಂಡು ತಪ್ಪಿತಸ್ಥನಂತೆ ವಿಚಾರ ಮಾಡಿದರೆ ಮುಗಿದು ಹೊಯಿತು. ಎಲ್ಲಾ ಗೊತ್ತಾಯ್ತಲ್ಲ ಇನ್ನೇನು ಇವರದು ಅಂದುಕೊಂಡು ಕೇರ್ ಮಾಡದೇ ಇದ್ದುಬಿಡುತ್ತಾರೆ.
ಹಾಗಾದರೆ, ಅದನ್ನು ಉಡಾಫೆ ಮಾಡಿಬಿಡಬೇಕಾ? ಹೌದು! ಅವರ ದೃಷ್ಟಿಯಿಂದ ಉಡಾಫೆ ಮಾಡಿದಂತೆ ಮಾಡಿ, ಸದಾ ಅವರ ಮೇಲೊಂದು ಕಣ್ಣಿಡಬೇಕು. ಅವರಿಗೆ ಅರಿವಿಗೆ ಬಾರದಂತೆ ತಿದ್ದುವ ಪ್ರಯತ್ನ ಮಾಡಬೇಕು. ನನ್ನದೊಂದು ಜಸ್ಟ್ ಸೆಳೆತ ಅನ್ನುವುದು ಅವರಿಗೆ ಅರ್ಥವಾಗಬೇಕು. ಇವೆಲ್ಲವುಗಳಿಗಿಂತ ಲೈಫ್ನಲ್ಲಿ ಮಾಡಬೇಕಾದ್ದು ತುಂಬಾ ಇದೆ. ಅದು ಮುಖ್ಯ.
ಅವೆಲ್ಲವೂ ಸಿಕ್ಕ ಮೇಲೆ ನಿನಗೆ ಇವೆಲ್ಲವೂ ಸಿಕ್ಕೇ ಸಿಗುತ್ತವೆ ಎಂಬುದು ಗೊತ್ತಾಗಬೇಕು. ಓದು ಮತ್ತು ಭವಿಷ್ಯ ಎಷ್ಟು ಮುಖ್ಯವಾದದ್ದು ಎಂಬುದನ್ನು ಅರ್ಥ ಮಾಡಿಸಬೇಕು. ಪೋಷಕರು ಮತ್ತು ಶಿಕ್ಷಕರು ಅವರನ್ನು ಮಿತ್ರರಂತೆ ನಡೆಸಿಕೊಳ್ಳಬೇಕು. ಅವರ ಭಾವನೆಗಳಿಗೆ ಕಿವಿಯಾಗಬೇಕು. ಸ್ಪಂದಿಸಬೇಕು. ನಾಳೆಗೆ ಅವನನ್ನು ತಯಾರು ಮಾಡಬೇಕು. ಎಲ್ಲವೂ ನಮ್ಮ ಕೈಯಲ್ಲಿದೆ. ಯೋಚಿಸಬೇಕಷ್ಟೇ!
* ಸದಾಶಿವ ಸೊರಟೂರು