ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಟೆಡ್ ಡೆಕ್ಸ್‌ಟರ್ ಇನ್ನಿಲ್ಲ. 86 ವರ್ಷದ ಅವರು ವಯೋಸಹಜ ಕಾಯಿಲೆಯಿಂದ ಬುಧವಾರ ರಾತ್ರಿ ನಿಧನ ಹೊಂದಿದರೆಂದು ಮೆರಿಲ್‌ಬಾನ್ ಕ್ರಿಕೆಟ್ ಕ್ಲಬ್ ತಿಳಿಸಿದೆ.
“ಟೆಡ್’ ಎಂದೇ ಕರೆಯಲ್ಪಡುತ್ತಿದ್ದ ಎಡ್ವರ್ಡ್ ರಾಲ್ಫ್ ಡೆಕ್‌ಸ್ಟರ್ 1958-1968ರ ಅವಧಿಯಲ್ಲಿ ಇಂಗ್ಲೆಂಡ್ ಪರ 62 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಇದರಲ್ಲಿ 30 ಟೆಸ್ಟ್‌ಗಳಲ್ಲಿ ತಂಡದ ನೇತೃತ್ವ ವಹಿಸಿದ್ದರು.
ಇಂಗ್ಲೆಂಡ್ ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿರ್‌ಗಳಲ್ಲಿ ಒಬ್ಬರಾಗಿದ್ದ ಡೆಕ್‌ಸ್ಟರ್ 1935ರಲ್ಲಿ ಇಟಲಿಯ ಮಿಲಾನ್‌ನಲ್ಲಿ ಜನಿಸಿದ್ದರು. 1958ರ ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಮ್ಯಾಂಚೆಸ್ಟರ್ ಪಂದ್ಯದಲ್ಲಿ ಟೆಸ್ಟ್‌ಕ್ಯಾಪ್ ಧರಿಸಿದರು. ರೇ ಇಲ್ಲಿಂಗ್‌ವರ್ತ್, ರಮಣ್ ಸುಬ್ಟಾರಾವ್ ಅವರಿಗೂ ಇದು ಪದಾರ್ಪಣ ಪಂದ್ಯವಾಗಿತ್ತು. ಪವರ್‌ಫುಲ್ ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್ ಆಗಿ ಡೆಕ್ಸ್‌ಟರ್ ಯಶಸ್ಸು ಕಾಣುತ್ತ ಹೋದರು. ಶಾರ್ಟ್‌ಪಿಚ್ ಎಸೆತಗಳನ್ನು ಎದುರಿಸುವಲ್ಲಿ ನಿಷ್ಣಾತರಾಗಿದ್ದರು.
62 ಟೆಸ್ಟ್‌ಗಳಲ್ಲಿ, 9 ಶತಕಗಳ ನೆರವಿನಿಂದ 4,502 ರನ್ ಪೇರಿಸಿದ ಹೆಗ್ಗಳಿಕೆ ಡೆಕ್ಸ್‌ಟರ್ ಅವರದು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 21,150 ರನ್ ಗಳಿಸಿದ್ದರು. ಇದರಲ್ಲಿ 51 ಶತಕ ಸೇರಿದೆ. ವಿಸ್ಡನ್, ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದ ಡೆಕ್ಸ್‌ಟರ್, ಇಂಗ್ಲೆಂಡ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ ಕರ್ತವ್ಯ ವಹಿಸಿದ್ದರು.
1962-63ರ ಆ್ಯಶಸ್ ಸರಣಿಯಲ್ಲಿ 481 ರನ್ ಗಳಿಸಿದ್ದು ಡೆಕ್ಸ್‌ಟರ್ ಅವರ ಅಮೋಘ ಸಾಧನೆಗಳಲ್ಲೊಂದು. ಇದು ಆಸ್ಟ್ರೇಲಿಯದಲ್ಲಿ ನಡೆದ ಆ್ಯಶಸ್‌ನಲ್ಲಿ ಇಂಗ್ಲೆಂಡ್ ನಾಯಕನ ಅತ್ಯಧಿಕ ಗಳಿಕೆಯಾಗಿದೆ.