ಬೆಂಗಳೂರು: ಪ್ರೇಯಸಿ ಮನೆಗೆ ಹೊರಟಿದ್ದ ಟೆಕ್ಕಿಯನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ದಾರುಣವಾಗಿ ಕೊಂದ ಘಟನೆ ಸದ್ದಗುಂಟೆ ಪಾಳ್ಯದ ಕ್ಯಾಶಿಯರ್ ಲೇಔಟ್‌ನ ಚಾಕೋಲೇಟ್ ಕಾರ್ಖಾನೆ ಬಳಿ ಸೋಮವಾರ ನಸುಕಿನಲ್ಲಿ ನಡೆದಿದೆ.
ಒಡಿಶಾದ ಭುವನೇಶ್ವರ ಮೂಲದ ಪ್ರಣಯ್ ಮಿಶ್ರಾ (26) ಕೊಲೆಯಾದ ಟೆಕ್ಕಿ. ಭಾನುವಾರ ರಾತ್ರಿ ಸ್ನೇಹಿತರ ಜತೆ ಪಾರ್ಟಿ ಮುಗಿಸಿ, ಮನೆಗೆ ಬಂದಿದ್ದಾರೆ. ನಂತರ ಪ್ರೇಯಸಿ ಮನೆಗೆ ಹೋಗುವಾಗ ಪ್ರಣಯ್‌ನನ್ನು ಅಡ್ಡಗಟ್ಟಿದ ನಾಲ್ವರು ದುಷ್ಕರ್ಮಿಗಳು, ಹೊಟ್ಟೆ ಮತ್ತು ಎದೆ ಭಾಗಕ್ಕೆ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದು ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದ ಪ್ರಣಯ್, ಭಾನುವಾರ ಬೇಗೂರಿನಲ್ಲಿರುವ ಸ್ನೇಹಿತರ ಮನೆಯಲ್ಲಿ ತಡರಾತ್ರಿ 2.30ರವರೆಗೆ ಪಾರ್ಟಿ ಮಾಡಿ, ಸದ್ದಗುಂಟೆಪಾಳ್ಯದಲ್ಲಿರುವ ತನ್ನ ಮನೆಗೆ ಮರಳಿದ್ದಾನೆ.
ಇದೇ ವೇಳೆ ಬಿಟಿಎಂ ಲೇಔಟ್ ಸಮೀಪವಿರುವ ಉಡುಪಿ ಗಾರ್ಡ್‌ನ್‌ನಲ್ಲಿ ವಾಸವಿರುವ ತನ್ನ ಪ್ರೇಯಸಿಗೆ ಕರೆ ಮಾಡಿ, ಕೂಡಲೇ ಮಾತನಾಡಬೇಕು ಮನೆಗೆ ಬರುತ್ತಿದ್ದೇನೆ ಎಂದು ಹೇಳಿ, ಬೈಕ್‌ನಲ್ಲಿ ಹೊರಡಲು ಸಿದ್ಧನಾಗಿದ್ದ ಪ್ರಣಯ್‌ನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಇರಿದಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಣಯ್‌ನನ್ನು ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ, ಚಿಕಿತ್ಸೆ ಫಲಿಸದೆ ಮುಂಜಾನೆ 5 ಗಂಟೆ ಸುಮಾರಿಗೆ ಆತ ಮೃತಪಟ್ಟಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಯುವಕನ ಮೊಬೈಲ್ ಪತ್ತೆಯಾಗಿದ್ದು, ಕರೆ ವಿವರಗಳನ್ನು ಪಡೆದು ಪರಿಶೀಲಿಸಲಾಗುತ್ತಿದೆ.
ಈ ಸಂಬಂಧ ಪ್ರಣಯ್‌ನ ಪ್ರೇಯಸಿ ಹಾಗೂ ಆತನ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಪ್ರಕರಣದ ತನಿಖೆಗಾಗಿ ಮೂರು ತಂಡ ರಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.