Advertisement

ರಾಜ್ಯದಲ್ಲಿ ಐಸಿಸ್‌ ಗಟ್ಟಿಗೊಳಿಸಲು ಟೆಕ್ಕಿಗಳ ನೇಮಕ!

10:35 PM Jan 14, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ “ಐಸಿಸ್‌’ ಬೇರುಗಳನ್ನು ಗಟ್ಟಿಗೊಳಿಸಲು ಶತಪ್ರಯತ್ನ ನಡೆಸುತ್ತಿದ್ದ ಮೆಹಬೂಬ್‌ ಪಾಷಾ ಮತ್ತು ಮನ್ಸೂರ್‌ ಖಾನ್‌ ಸಂಘಟನೆಗೆ ತಾಂತ್ರಿಕ ನೈಪುಣ್ಯವುಳ್ಳ ಟೆಕ್ಕಿಗಳನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿರುವುದು ಬಯಲಾಗಿದೆ. ವಿದೇಶಿ ಉಗ್ರರ ಜತೆ ಡಿಜಿಟಲ್‌ ಸಂಪರ್ಕಕ್ಕೆ ಮತ್ತು ರಹಸ್ಯ “ಡಿಜಿಟಲ್‌ ಕೋಡ್‌’ಗಳ ವಿನಿಮಯಕ್ಕಾಗಿ ಟೆಕ್ಕಿಗಳ ನೇಮಿಸಲು ಹವಣಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿಯೂ ಹೊರಬಿದ್ದಿದೆ.

Advertisement

“ಜಿಹಾದಿ’ ಚಟುವಟಿಕೆಗಳನ್ನು ನಡೆಸುವ ಸಂಚಿನ ಹಿನ್ನೆಲೆಯಲ್ಲಿ ಬಂಧಿತನಾಗಿರುವ ಮೊಹಮದ್‌ ಜೈದ್‌ (24) ವಿಚಾರಣೆ ಹಾಗೂ ಪ್ರಾಥಮಿಕ ತನಿಖೆಯಲ್ಲಿ ಈ ಮಾಹಿತಿ ಗೊತ್ತಾಗಿದೆ. ಇನ್ನೂ ಕೆಲ ಟೆಕ್ಕಿಗಳು ಈ ಜಾಲದಲ್ಲಿ ಇರುವ ಶಂಕೆ ಇದ್ದು, ಪತ್ತೆಗಾಗಿ ತೀವ್ರ ಯತ್ನ ನಡೆದಿದೆ. ಈ ಹಿಂದೆಯೂ ಇಂಡಿಯನ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆ ಎಂಜಿನಿಯ ರಿಂಗ್‌ ಕಾಲೇಜಿನ ವಿದ್ಯಾರ್ಥಿಗಳನ್ನು ಮತ್ತು ಟೆಕ್ಕಿಗಳನ್ನು ತಮ್ಮ ಕೃತ್ಯಗಳಿಗೆ ಬಳಸಿಕೊಂಡಿರುವುದನ್ನು ಸ್ಮರಿಸಬಹುದು.

ಕೋಲಾರ ಮೂಲದ ಮೊಹಮ್ಮದ್‌ ಜೈದ್‌ (24) ಬೆಂಗಳೂರಿನ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ. ಆತನ ಮನವೊಲಿಸಿದ ಪಾಷಾ, ಜಿಹಾದಿ ಚಟುವಟಿಕೆಗಳಿಗೆ ಪ್ರೇರೇಪಿ ಸಿದ್ದ. ಇದಕ್ಕೆ ಒಪ್ಪಿದ್ದ ಜೈದ್‌, ಕಂಪೆನಿಯ ಉದ್ಯೋಗವನ್ನು ತೊರೆದು ಆತನ ತಂಡ ಸೇರಿದ್ದ ಎಂದು ತನಿಖಾ ಮೂಲಗಳು ತಿಳಿಸಿವೆ.

ಐಸಿಸ್‌ ಸಂಪರ್ಕದ ಪ್ರಮುಖರಾಗಿರುವ ಪಾಷಾ ಹಾಗೂ ಮನ್ಸೂರ್‌, ತಾಂತ್ರಿಕವಾಗಿ ನಿಪುಣರಾಗಿರುವ ಕೆಲ ಯುವಕರನ್ನು ಕೂಡ ತಮ್ಮ ಸಂಘಟನೆ ಜತೆ ಸೇರಿಸಿಕೊಳ್ಳಲು ಹವಣಿಸುತ್ತಿದ್ದರು. ವಿದೇಶಿ ಉಗ್ರರ ಜತೆಗೆ ಡಿಜಿಟಲ್‌ ಸಾಧನ ಗಳೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ತಮ್ಮ ಮಾಹಿತಿ ಗಳನ್ನು “ಕೋಡ್‌ವರ್ಡ್‌’ ಮೂಲಕ ವಿನಿಮಯ ಮಾಡಿಕೊ ಳ್ಳಲು ತಾಂತ್ರಿಕ ನೈಪುಣ್ಯ ಹೊಂದಿದವರ ಅಗತ್ಯವಿತ್ತು. ಹೀಗಾಗಿ ಐಸಿಸ್‌ ಪರ ಒಲವುಳ್ಳ ಟೆಕ್ಕಿಗಳ ಶೋಧನೆಯಲ್ಲಿ ತೊಡಗಿದ್ದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವೇಳೆ ಐಸಿಸ್‌ನ ತಮಿಳುನಾಡಿನ ಖ್ವಾಜಾ ಮೊಹಮದ್‌ ಸಹಚರ ಅಬ್ದುಲ್‌ ಸಮದ್‌ ಮೆಹಬೂಬ್‌ ಪಾಷಾನಿಗೆ ಜೈದ್‌ ಬಗ್ಗೆ ಮಾಹಿತಿ ನೀಡಿದ್ದ ಜತೆಗೆ ಆತನನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದ. ಅದರಂತೆ, ಕಾರ್ಯಪ್ರವೃತ್ತರಾದ ಪಾಷಾ ಹಾಗೂ ಮನ್ಸೂರ್‌ ಜೋಡಿ ಜೈದ್‌ನನ್ನು ಸಂಪರ್ಕಿಸಿದ್ದರು.ಆರಂಭದಲ್ಲಿ ಜೈದ್‌ ಒಪ್ಪಿಗೆ ಸೂಚಿಸಲು ಹಿಂದೇಟು ಹಾಕಿದರೂ, ಹಲವು ಸುತ್ತಿನ ಮಾತುಕತೆ ಬಳಿಕ ಒಪ್ಪಿಕೊಂಡಿದ್ದ. ಕಡೆಗೆ ಇಡೀ ಸಂಘಟನೆಯ ತಾಂತ್ರಿಕ ಸಲಹೆಗಾರನಾಗಿ ಕೆಲಸ ಮಾಡತೊಡಗಿದ್ದ ಎನ್ನಲಾಗಿದೆ.

Advertisement

ಸಾಮಾಜಿಕ ತಾಲತಾಣ, ಪೊಲೀಸರ ತನಿಖಾ ಕಾರ್ಯ ವೈಖರಿ, ಆಂಗ್ಲ ಭಾಷೆಯ ಮೇಲೆ ಹಿಡಿತ ಹೊಂದಿದ್ದ ಜೈದ್‌, ಸಂಘಟನೆ ಸಲುವಾಗಿ ಕೆಲವೇ ತಿಂಗಳ ಹಿಂದೆ ರಾಜೀನಾಮೆ ನೀಡಿದ್ದ. ಆತನಿಗೆ ಸಮದ್‌ ಏನು ಕೆಲಸ ಮಾಡಬೇಕು ಎಂಬುದರ ಬಗ್ಗೆ ತರಬೇತುದಾರನಾಗಿ ಸಲಹೆ ಸೂಚನೆಗಳನ್ನು ನೀಡಿದ್ದ. ಅದರಂತೆ ಜೈದ್‌ ರಾಜ್ಯದಲ್ಲಿ ಐಸಿಸ್‌ ಸಂಘಟನೆಯ ತಾಂತ್ರಿಕ ವಿಭಾಗವನ್ನು ನಿಭಾಯಿಸುತ್ತಿದ್ದ. ಪಾಷಾನಿಗೆ ಬರುವ ಇ-ಮೇಲ್‌ ಪರಿಶೀಲನೆ, ಆತ ವಿದೇಶದಲ್ಲಿರುವ ಐಸಿಸ್‌ ಪ್ರಮುಖರ ಜತೆ ದೂರವಾಣಿ ಸಂಪರ್ಕ ಇತ್ಯಾದಿ ಜವಾಬ್ದಾರಿ ಗಳನ್ನು ನೋಡಿಕೊಂಡಿದ್ದ ಎಂದು ಮೂಲಗಳು ಹೇಳಿವೆ.

ಅದೇ ರೀತಿ ಪಾಷಾ ಹಾಗೂ ಮನ್ಸೂರ್‌ ಜೋಡಿ ಬಟ್ಟೆ ವ್ಯಾಪಾರ ಮಾಡುವ ತೀರ್ಥಹಳ್ಳಿಯ ಅಬ್ದುಲ್‌ ಮತೀನ್‌ ಅಹ್ಮದ್‌, ಮುಸ್ಸಾವೀರ್‌ ಹುಸೇನ್‌, ಕ್ಯಾಬ್‌ ಚಾಲಕನಾಗಿರುವ ನಾಯಂಡಹಳ್ಳಿಯ ಇಮ್ರಾನ್‌ ಖಾನ್‌, ಜಬೀವುಲ್ಲಾ ಸೇರಿ ಚನ್ನರಾಯಪಟ್ಟಣದ ಅನೀಸ್‌, ರಾಮನಗರದ ಅಜಾಜ್‌ ಪಾಷಾ, ಕೋಲಾರದ ಸಲೀಂ ಖಾನ್‌ ಹೀಗೆ ವಿವಿಧ ವೃತ್ತಿಗಳಲ್ಲಿ ನಿರತರಾಗಿರುವ ಯುವಕರನ್ನು ಸಂಘಟನೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು ಎಂದು ಮೂಲಗಳು ಹೇಳಿವೆ.

ಶಸ್ತ್ರಾಸ್ತ್ರ ಇಟ್ಕೊಂಡು ಸಿಕ್ಕಿಬಿದ್ದ ಇಮ್ರಾನ್‌: ಮೆಹಬೂಬ್‌ ಪಾಷಾನ ಮಾತಿಗೆ ಮರುಳಾಗಿದ್ದ ಇಮ್ರಾನ್‌ ಖಾನ್‌ ಕೂಡ ಸದ್ಯ ಚೆನೈನ “ಕ್ಯು’ಬ್ರಾಂಚ್‌ ಪೊಲೀಸರ ವಶದಲ್ಲಿದ್ದಾನೆ. ಪಾಷಾನ ಮಾತುಗಳಿಗೆ ಮರುಳಾಗಿ “ಜಿಹಾದಿ’ ಸಂಘಟನೆ ಸೇರಿದ್ದ ಇಮ್ರಾನ್‌ ಶಸ್ತ್ರಾಸ್ತ್ರಗಳನ್ನು ತನ್ನ ಬಳಿ ಇಟ್ಟುಕೊಂಡಿದ್ದ. ದೇವರ ಮೇಲೆ ಆಣೆ ಮಾಡಿಸಿಕೊಂಡಿದ್ದ ಪಾಷಾ, ಆತನ ಕೈಗೆ ನಾಡ ಪಿಸ್ತೂಲ್‌ ಹಾಗೂ 80ಕ್ಕೂ ಅಧಿಕ ಜೀವಂತ ಗುಂಡಗಳನ್ನು ನೀಡಿದ್ದ. ಇಮ್ರಾನ್‌ ಇಟ್ಟುಕೊಂಡಿದ್ದ ಪಿಸ್ತೂಲ್‌ ಹಾಗೂ ಗುಂಡುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪೊಲೀಸರಿಗೆ ಸಿಕ್ಕಿಬೀಳದಿರಲು ಬೇಸಿಕ್‌ ಫೋನ್‌!: ಸಂಘಟನೆಯಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡಿದ್ದ ಜೈದ್‌, ಸಂಘಟನೆಯಲ್ಲಿ ಸಕ್ರಿಯವಾಗಿರುವವರು ಸ್ಮಾರ್ಟ್‌ ಫೋನ್‌ಗಳಲ್ಲಿ ಸಂಭಾಷಣೆ ನಡೆಸಿದರೆ ಪೊಲೀಸರಿಗೆ ಸುಳಿವು ದೊರೆಯುವ ಸಾಧ್ಯತೆಯಿದೆ ಎಂಬುದನ್ನು ಅರಿತಿದ್ದ. ಹೀಗಾಗಿ, ಎಲ್ಲರೂ ಬೇಸಿಕ್‌ ಮೊಬೈಲ್‌ಗ‌ಳಲ್ಲೇ ಸಂಪರ್ಕ ಸಾಧಿಸುವಂತೆ ಸಲಹೆ ನೀಡಿದ್ದ. ಅದರಂತೆ, ಆರೋಪಿಗಳೆಲ್ಲರೂ ಬೇಸಿಕ್‌ ಮೊಬೈಲ್‌ಗ‌ಳಲ್ಲಿ ತಮಿಳುನಾಡಿನಿಂದ ಖರೀದಿಸಿದ್ದ ಸಿಮ್‌ಗಳನ್ನು ಹಾಕಿ ಅಗತ್ಯವಿದ್ದಾಗ ಮಾತ್ರವೇ ಬಳಕೆ ಮಾಡುತ್ತಿದ್ದರು. ಉಳಿದಂತೆ ಎಲ್ಲರೂ ಪ್ರತ್ಯೇಕವಾಗಿ ಸ್ಮಾರ್ಟ್‌ ಪೋನ್‌ಗಳನ್ನೂ ಸಹ ಹೊಂದಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next