Advertisement
ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎಂಬ ಮಾತು ಯಾವಾಗಿನಿಂದ ಚಾಲ್ತಿಯಲ್ಲಿದೆಯೋ ಗೊತ್ತಿಲ್ಲ. ಆದರೆ ಮೋಸ ಹೊಸ ಹೊಸ ರೂಪದಲ್ಲಿ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಟೆಕ್ನಾಲಜಿ ವಿಚಾರದಲ್ಲಂತೂ ದಿನದಿಂದ ದಿನಕ್ಕೆ ಹೊಸ ಹೊಸ ವಿಧಾನವನ್ನು ಮೋಸಗಾರರು ಕಂಡುಕೊಳ್ಳುತ್ತಿರುತ್ತಾರೆ. ಹೊಸ ಸೌಲಭ್ಯವೊಂದು ಜನರಿಗೆ ಲಭ್ಯವಾಗುತ್ತಿದ್ದಂತೆಯೇ ಅದನ್ನೇ ದುರ್ಬಳಕೆ ಮಾಡಿಕೊಂಡು ಮೋಸ ಮಾಡುವ, ಕಾಸು ದೋಚುವ ತಂತ್ರ ಹುಡುಕುತ್ತಲೇ ಇರುತ್ತಾರೆ. ಒಟಿಪಿ ಬಳಸಿ ಹಣಕಾಸು ವ್ಯವಹಾರ ನಡೆಸುವಲ್ಲಿ ಮಾಡುವ ಅಕ್ರಮವೇ ಈಗ ಕೋಟ್ಯಂತರ ರೂಪಾಯಿ ದಾಟಿರಬಹುದು. ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳ ವಹಿವಾಟನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಪರಿಚಯಿಸಿದ ಒಟಿಪಿ ವ್ಯವಸ್ಥೆ ಅಕ್ರಮ ನಡೆಸುವವರಿಗೊಂದು ಸ್ವರ್ಗ. ಯಾಕೆಂದರೆ, ಈ ಒಟಿಪಿಯನ್ನು ನೇರವಾಗಿ ಗ್ರಾಹಕರೇ ಮೋಸಗಾರನ ಕೈಗೆ ಕೊಟ್ಟಿರುತ್ತಾರೆ. ಹೀಗಾಗಿ ಬ್ಯಾಂಕ್‌ನವರು ತಮ್ಮಿಂದೇನೂ ಮಾಡಲು ಸಾಧ್ಯವಿಲ್ಲ ಎಂದು ಕೈತೊಳೆದುಕೊಂಡಿರುತ್ತಾರೆ. ಆದರೆ ಇಲ್ಲಿ, ಮೋಸ ಹೋದವರಿಗೆ ನೆರವಾಗುವುದು ಪೊಲೀಸರು ಮಾತ್ರ.
Related Articles
Advertisement
ಟೆಕ್ನಾಲಜಿ ಕ್ಷೇತ್ರದಲ್ಲಿ ನಡೆಯುವ ಮೋಸಗಳ ಪೈಕಿ ಬ್ಯಾಂಕಿಂಗ್ ವಹಿವಾಟುಗಳಲ್ಲಿ ನಡೆಯುವ ಮೋಸಗಳಿಗೇ ಒಂದು ದೊಡ್ಡ ಪಾಲಿದೆ. ಇಂಥ ಮೋಸಗಳು ನೇರವಾಗಿ ಜನರನ್ನೇ ಗುರಿಯಾಗಿಸಿಕೊಂಡಿರುತ್ತವೆ. ಇವೆಲ್ಲವೂ ಸಣ್ಣ ಪ್ರಮಾಣದಲ್ಲಿ ನಡೆಯುವ ಮೋಸಗಳಾದರೂ, ಇದರಿಂದ ಬಾಧೆಗೆ ಒಳಗಾಗುವವರ ಸಂಖ್ಯೆ ಜಾಸ್ತಿ ಇರುತ್ತದೆ. ದೊಡ್ಡ ಪ್ರಮಾಣದಲ್ಲಿ ನಡೆಯುವ ಮೋಸಗಳಲ್ಲಿ, ಅದು ಟೆಕ್ನಾಲಜಿಯ ದುರ್ಬಳಕೆ ಎಂಬುದಕ್ಕಿಂತ ಹೆಚ್ಚಾಗಿ ಅದೊಂದು ಹಗರಣವಾಗಿಯೇ ಗಮನ ಸೆಳೆಯುತ್ತದೆ. ಇತ್ತೀಚೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ಮೋಸ ಮಾಡಿದ ನೀರವ್ ಮೋದಿ ಕೂಡ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿರುವ ಸ್ವಿಫ್ಟ್ ಸಿಸ್ಟಂ ಅನ್ನು ದುರ್ಬಳಕೆ ಮಾಡಿಕೊಂಡಿದ್ದ. ವಿದೇಶಿ ಬ್ಯಾಂಕ್‌ಗಳು ಹಾಗೂ ಶಾಖೆಗಳಿಂದ ಹಣಕಾಸು ವಹಿವಾಟುಗಳ ಮಾಹಿತಿಯನ್ನು ಸಂವಹನ ನಡೆಸಲು ಈ ಸ್ವಿಫ್ಟ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆಯಾದರೂ, ಇದನ್ನು ಹಲವು ಭಾರತೀಯ ಬ್ಯಾಂಕ್‌ಗಳು ತಮ್ಮ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಇಂಟಿಗ್ರೇಟ್ ಮಾಡಿರಲಿಲ್ಲ. ಕೊನೆಗೆ ಸ್ವಿಫ್ಟ್ ವ್ಯವಸ್ಥೆಯಲ್ಲಿರುವ ಲೋಪವನ್ನು ಗುರುತಿಸಿ ಸರಿಪಡಿಸಲು ಆರ್‌ಬಿಐ ನಿರ್ಧರಿಸಿತಾದರೂ, ಅದೊಂದು ಹಗರಣ ಎಂದೇ ಹೆಚ್ಚಾಗಿ ಗುರುತಿಸಿಕೊಂಡಿತು. ಬ್ಯಾಂಕಿಂಗ್ ಹೊರತುಪಡಿಸಿ ಇಮೇಲ್ ಫಿಶಿಂಗ್ ಹಾಗೂ ಇತರ ಮೋಸಗಳೆಲ್ಲ ಈಗ ಮರೆಗೆ ಸಂದಿವೆ. ಯಾಕೆಂದರೆ ಅದರಿಂದ ಇತರ ಕಾರ್ಯಸಾಧನೆಯಾದೀತಾದರೂ, ಬ್ಯಾಂಕಿಂಗ್ ಟೆಕ್ನಾಲಜಿಯನ್ನು ದುರ್ಬಳಕೆ ಮಾಡಿಕೊಂಡಾಗ ಸಿಗುವಷ್ಟು ಹಣ ಸಿಗದ್ದರಿಂದ ಅವು ಮೋಸಗಾರರ ಆಕರ್ಷಣೆ ಕಳೆದುಕೊಂಡಿವೆ.
ಒಟಿಪಿ ಎಂದರೇ ಭೀತಿ ಹುಟ್ಟುವಂತೆ ಮಾಡಿದ್ದೂ ಇದೇ ಕಳ್ಳರ ಜಾಲ. ಸಾಮಾನ್ಯವಾಗಿ ಒಟಿಪಿ ಎಂಬುದು ಅತ್ಯಂತ ಸುರಕ್ಷಿತ ವಿಧಾನ. ನಾವು ಡಿಜಿಟಲ್ ರೂಪದಲ್ಲಿ ಯಾವ ವಹಿವಾಟು ನಡೆಸಬೇಕಿದ್ದರೂ ಒಟಿಪಿ ಬೇಕು. ಎಟಿಎಂನಿಂದ ಕ್ಯಾಶ್ ತೆಗೆಯುವುದು ಹಾಗೂ ನಗದು ವಹಿವಾಟು ಹೊರತುಪಡಿಸಿ ಬಹುತೇಕ ಎಲ್ಲ ವಹಿವಾಟು ನಡೆಸುವಲ್ಲೂ ಒಟಿಪಿ ಅತ್ಯಂತ ಅಗತ್ಯ. ಅಂದರೆ ನಾವು ದಿನಕ್ಕೆ ಕನಿಷ್ಠ 3-4 ಒಟಿಪಿಗಳನ್ನು ಬಳಸುತ್ತೇವೆ. ಇದು ನಮಗೆ ಒಟಿಪಿ ಬಗ್ಗೆ ಒಂದು ಹಗುರ ಭಾವನೆ ಮೂಡುವಂತೆ ಮಾಡಿದೆ. ಆದರೆ ಒನ್ ಟೈಮ್ ಪಾಸ್‌ವರ್ಡ್ ಎಂಬ ಹೃಸ್ವರೂಪ ಹೊಂದಿರುವ ಇದು ನಮ್ಮ ಬ್ಯಾಂಕ್ ಖಾತೆಯಲ್ಲಿನ ಅಂಕಿಗಳನ್ನೂ ಸಂಕ್ಷಿಪ್ತ ಗೊಳಿಸಬಲ್ಲದು.
ಡಿಜಿಟಲ್ ವಾಲೆಟ್‌ಗಳಿಗೆ ಕೆವೈಸಿ ಕಡ್ಡಾಯ ಮಾಡುವುದಕ್ಕೂ ಮೊದಲು ಇಂಥ ಹಣಕಾಸು ಅಕ್ರಮ ಲೀಲಾಜಾಲವಾಗಿ ನಡೆಯುತ್ತಿತ್ತು. ಉತ್ತರ ಭಾರತದ ಕೆಲವು ಕುಗ್ರಾಮಗಳಲ್ಲಂತೂ ಇಂಥ ಮೋಸಗಾರರ ತಂಡವೇ ಇತ್ತು. ಆದರೆ ಕೆವೈಸಿ ಕಡ್ಡಾಯ ಮಾಡಿದ ನಂತರ ಇಂಥ ಅಕ್ರಮಗಳಿಗೆ ಸ್ವಲ್ಪ ಮಟ್ಟಿನ ಕಡಿವಾಣ ಬಿದ್ದಿದೆ. ಈಗ ಅಕ್ರಮ ನಡೆಯುತ್ತಿದ್ದರೂ ಅದರ ಪ್ರಮಾಣ ಕಡಿಮೆಯಾಗಿದೆ. ಯಾಕೆಂದರೆ 10 ಸಾವಿರ ರೂ.ಗಿಂತ ಕಡಿಮೆ ಮೊತ್ತದ ವಹಿವಾಟನ್ನಷ್ಟೇ ಡಿಜಿಟಲ್ ವಾಲೆಟ್ ಮೂಲಕ ಮಾಡಬಹುದಾಗಿದೆ. ಅದರಲ್ಲೂ ಪೇಟಿಎಂ ಜನಪ್ರಿಯವಾಗಿದ್ದಾಗ ಇದನ್ನು ಬಳಸಿಕೊಂಡು ನಡೆಸಿದ ಅಕ್ರಮಕ್ಕಂತೂ ಲೆಕ್ಕವೇ ಇಲ್ಲ. ಒಂದು ಫೋನ್ ನಂಬರ್ ಸಿಕ್ಕರೆ ಸಾಕು. ಯಾವ ಬ್ಯಾಂಕ್‌ನಲ್ಲಿ ಖಾತೆ ಇದೆ ಎಂದು ತಿಳಿದುಕೊಂಡು ಅವರಿಗೆ ಫೋನ್ ಮಾಡಿ ನಿಮ್ಮ ಕಾರ್ಡ್ ವಿಳಾಸ ಕೊಡಿ. ನಿಮಗೆ ರಿವಾರ್ಡ್ಸ್ ಕೊಡುತ್ತೇವೆ. ನಿಮ್ಮ ರಿವಾರ್ಡ್ಸ್‌ಗಳು ನಿಮ್ಮ ಖಾತೆಗೆ ಬರುವಂತೆ ಮಾಡಿಕೊಡುತ್ತೇವೆ, ನಿಮ್ಮ ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚು ಮಾಡುತ್ತೇವೆ ಎಂದೆಲ್ಲ ಬೊಗಳೆ ಬಿಡುತ್ತಾರೆ. ನಾವು ನಂಬುತ್ತೇವೆ. ಆತ ಮೊದಲು ಕಾರ್ಡ್ ನಂಬರ್ ಕೇಳುತ್ತಾನೆ. ನಾವು ಎಲ್ಲ ನಂಬರನ್ನೂ ಕೊಡುತ್ತೇವೆ. ಆಮೇಲೆ ಎಕ್ಸ್‌ಪೈರಿ ಡೇಟ್, ಸಿವಿವಿ ಎಲ್ಲವನ್ನೂ ಕೇಳುತ್ತಾನೆ. ಇಲ್ಲಿಯವರೆಗೆ ಎಲ್ಲವೂ ಸರಿ. ನಂತರ ಒಂದು ಒಟಿಪಿ ಮೊಬೈಲ್ಗೆ ಬರುತ್ತದೆ. ಅದನ್ನು ಓದಿ ಹೇಳಿ ಸರ್ ಎಂದು ಹೇಳುತ್ತಾನೆ. 10 ಸೆಕೆಂಡ್ ಮಾತ್ರ ಬಾಕಿ ಇದೆ. ಈಗಲೇ ಹೇಳಿ ಎನ್ನುತ್ತಾನೆ. ಒಮ್ಮೆ ನೀವು ಒಟಿಪಿ ಹೇಳಿದಿರೋ ಆಗ ಫೋನ್ ಕಾಲ್ ಕಟ್ ಆಗುತ್ತದೆ. ನಮ್ಮ ಖಾತೆಯಲ್ಲಿನ ಹಣವೂ ಕಟ್ ಆಗಿರುತ್ತದೆ!
ಇಲ್ಲಿ ಹೀಗೆ ನಮ್ಮ ಖಾತೆಗೆ ಕತ್ತರಿ ಬಿದ್ದ ಹಣ ನೇರವಾಗಿ ಪೇಟಿಎಂ ವಾಲೆಟ್‌ಗೆ ಹೋಗಿರುತ್ತದೆ. ಅಲ್ಲಿಂದ ಒಂದು ನಾಲ್ಕಾರು ವಾಲೆಟ್‌ಗೆ ವರ್ಗಾವಣೆಯಾಗುತ್ತದೆ. ಯಾಕೆಂದರೆ ಇದನ್ನು ಟ್ರೇಸ್ ಮಾಡುವುದು ಪೊಲೀಸರಿಗೆ ಸುಲಭವಾಗಬಾರದು ಎಂಬುದು ಮೋಸಗಾರರ ಉದ್ದೇಶ. ಆದರೆ ಡಿಜಿಟಲ್ ರೂಪದ ಹಣದ ಜಾಡನ್ನು ಸುಲಭದಲ್ಲಿ ತಪ್ಪಿಸಲಾಗದು. ನಗದು ವಹಿವಾಟಿನಲ್ಲಿ ವರ್ಗಾವಣೆಯಾದ ಹಣವನ್ನು ಮೂರನೆಯವರು ಕಂಡುಕೊಳ್ಳುವುದು ಕಷ್ಟ. ಆದರೆ ಒಟಿಪಿ ಬಳಸಿಕೊಂಡು ಮಾಡಿದ ಹಲವು ಅಕ್ರಮಗಳನ್ನು ಪೊಲೀಸರು ಬೇಧಿಸಿದ್ದಾರೆ.
ಹೀಗಾಗಿ, ಒಟಿಪಿ ಎಂಬುದು ನಮ್ಮ ಬ್ಯಾಂಕ್ ಲಾಕರ್‌ನ ಕೀ ಇದ್ದ ಹಾಗೆ. ಅದು ಕೇವಲ ನಾಲ್ಕು ಅಂಕಿ! ಆದರೆ ನಮ್ಮ ಬ್ಯಾಂಕ್‌ನಲ್ಲಿರುವ ಎಷ್ಟು ಅಂಕಿಯನ್ನು ಬೇಕಾದರೂ ನುಂಗುವ ಸಾಮರ್ಥ್ಯ ಅದಕ್ಕಿದೆ.
-ಕೃಷ್ಣ ಭಟ್