ಹುಬ್ಬಳ್ಳಿ: ಭಾರತ ಅದ್ಭುತ ದೇಶವಾಗಿದ್ದು, ಹಿಮಾಲಯವು ಭಗವಂತನ ಸೃಷ್ಟಿಯ ಬೀಡಾಗಿದೆ. ಅಲ್ಲಿ ನಾಸ್ತಿಕರು ಆಸ್ತಿಕರಾಗುತ್ತಾರೆ. ಅಂತಹ ವಿಸ್ಮಯಕಾರಿ ವಾತಾವರಣ ಅಲ್ಲಿದೆ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಬಮ್ಮಾಪುರ ಬಣಕಾರ ಓಣಿಯಲ್ಲಿ ಶುಕ್ರವಾರ ಶ್ರೀ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ದೇವರ ಸೃಷ್ಟಿ ನೋಡಬೇಕೆಂದರೆ ಉತ್ತರ ಭಾರತಕ್ಕೆ ಹೋಗಬೇಕು. ಮನುಷ್ಯನ ಸೃಷ್ಟಿ ನೋಡಬೇಕಾದರೆ ದಕ್ಷಿಣ ಭಾರತಕ್ಕೆ ಹೋಗಬೇಕು. ಹಿಮಾಲಯದಲ್ಲಿ ಸಾವಿರಾರು ನದಿಗಳಿದ್ದು, ಅವು ವರ್ಷಪೂರ್ತಿ ತುಂಬಿ ಹರಿಯುತ್ತವೆ. ಆದರೂ ಹಿಮ ಪ್ರಮಾಣ ಮಾತ್ರ ಕಡಿಮೆಯಾಗುವುದಿಲ್ಲ. ಇನ್ನೂ ಹೆಚ್ಚಾಗುತ್ತಲೇ ಹೋಗುತ್ತದೆ. ಇದು ದೇವರ ಸೃಷ್ಟಿಯಲ್ಲದೆ ಮತ್ತೇನು ಅಲ್ಲ. ಅಲ್ಲಿ ಅಂತಹ ವಾತಾವರಣವಿದ್ದ ಕಾರಣಕ್ಕೆ ಪರದೇಶಗಳಿಂದ ಜನ ಬರುತ್ತಾರೆ. ಸಾಧು-ಸಂತರು ಅಲ್ಲಿ ನೆಲೆಯೂರಿ ತಪಸ್ಸು, ಜ್ಞಾನ ಹಾಗೂ ಮೌನ, ಯೋಗ ಮಾಡುತ್ತಾರೆ ಎಂದರು.
ದಕ್ಷಿಣ ಭಾರತದಲ್ಲಿ ಸಾವಿರಾರು ಪುರಾತನ ವಿಸ್ಮಯಕಾರಿ ದೇವಸ್ಥಾನಗಳಿವೆ. ತಂಜಾವೂರು, ರಾಮೇಶ್ವರ ಸೇರಿದಂತೆ ಇತರೆ ದೇವಸ್ಥಾನಗಳನ್ನು ಸಾವಿರಾರು ವರ್ಷಗಳ ಹಿಂದೆ ಪೂರ್ವಜರು ತಂತ್ರಜ್ಞಾನ ಬಳಸಿ ನಿರ್ಮಿಸಿದ್ದು ವಿಸ್ಮಯಕಾರಿ. ದೇಶ ಸುತ್ತಿ ನೋಡಬೇಕು. ಕೋಶ ಓದಬೇಕು. ಅಂದರೆ ನಮಗೆ ಇವೆಲ್ಲ ಸಂಗತಿ ಗೊತ್ತಾಗುತ್ತವೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಮಾತನಾಡಿ, ಇಂದಿನ ರಾಜಕಾರಣ ಹೇಸಿಗೆ ಮೂಡಿಸುತ್ತಿದೆ. ಜನ ರಾಜಕಾರಣಿಗಳಿಂದ ದೂರಾಗುತ್ತಿದ್ದಾರೆ. ಆದರೆ ಎಲ್ಲ ರಾಜಕಾರಣಿಗಳು ಹಾಗಿಲ್ಲ. ಬಡವರು, ಕಷ್ಟದಲ್ಲಿದ್ದವರಿಗೆ ಸ್ಪಂದಿಸುತ್ತಿದ್ದಾರೆ. ಸಹಾಯ ಮಾಡುತ್ತಿದ್ದಾರೆ. ಅಂತಹ ರಾಜಕಾರಣಿಗಳಿಗೆ ನಿಮ್ಮ ಆಶೀರ್ವಾದ ಬೇಕು ಎಂದರು. ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮಿಗಳು ಮಾತನಾಡಿದರು.
ಕಾರ್ಯಕ್ರಮಕ್ಕೂ ಮೊದಲು ಶ್ರೀ ವೀರಭದ್ರಸ್ವಾಮಿ ಹಾಗೂ ಬಸವಣ್ಣ ದೇವರ ಮೂರ್ತಿ ಮೆರವಣಿಗೆ ಯಲ್ಲಾಪುರ ಓಣಿಯ ಶ್ರೀಶೈಲ ಮಠದಿಂದ ಪ್ರಾರಂಭವಾಗಿ ವೀರಾಪುರ ಓಣಿ, ಬಡಿಗೇರ ಓಣಿ, ಹಿರೇಪೇಟೆ, ಬಮ್ಮಾಪುರ ಓಣಿ ಮುಖಾಂತರ ಬಣಗಾರ ಓಣಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ತಲುಪಿತು. ಪ್ರಕಾಶ ಬೆಂಡಿಗೇರಿ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಶಂಕ್ರಪ್ಪ ಗುಡ್ಡದ, ಬಸಣ್ಣ ಕಡೆಮನಿ, ಗಂಗಾಧರಯ್ಯ ಹಿರೇಮಠ, ಚನ್ನಬಸವ ಕಡೆಮನಿ, ಮಲ್ಲಿಕಾರ್ಜುನ ಶಿರಗುಪ್ಪಿ, ಮಹಾಂತೇಶ ಗಿರಿಮಠ, ಶಂಭು ಲಕ್ಷ್ಮೇಶ್ವರಮಠ ಮೊದಲಾದವರಿದ್ದರು.