Advertisement

Technology Assistance: ಮರುಸಿಂಚನ, ಗಣಿತ ಗಣಕಕ್ಕೆ ಎಐ ನೆರವು: ಸಚಿವ ಮಧು

01:34 AM Oct 10, 2024 | Team Udayavani |

ಬೆಂಗಳೂರು: ಸರಕಾರ ಜಾರಿಗೊಳಿಸಲು ಮುಂದಾಗಿರುವ “ಮರುಸಿಂಚನ’ ಹಾಗೂ “ಗಣಿತ ಕಣಕ’ ಕಾರ್ಯಕ್ರಮಗಳಿಗೆ ಜೆ-ಪಾಲ್‌ ಸೌತ್‌ ಏಷಿಯಾ ಸಂಸ್ಥೆ ಅಭಿವೃದ್ಧಿಪಡಿಸುವ ಕೃತಕ ಬುದ್ಧಿಮತ್ತೆ ಸಹಿತ ಎಲ್ಲ ರೀತಿಯ ತಂತ್ರಜ್ಞಾನದ ನೆರವನ್ನೂ ಪಡೆದುಕೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಶಾಲಾ ಶಿಕ್ಷಣದಲ್ಲಿ ಗುಣಮಟ್ಟದ ಬದಲಾವಣೆಗಾಗಿ “ಮರುಸಿಂಚನ’ ಹಾಗೂ “ಗಣಿತ ಗಣಕ’ ಕಾರ್ಯಕ್ರಮಗಳಿಗೆ ಸಂಬಂಧಿಸಿ ಜೆ-ಪಾಲ್‌ ಸೌತ್‌ ಏಷಿಯಾ ಸಂಸ್ಥೆಯೊಂದಿಗೆ ಬುಧವಾರ ವಿಧಾನಸೌಧದಲ್ಲಿ ಒಡಂಬಡಿಕೆ ಮಾಡಿಕೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 6-10ನೇ ತರಗತಿ ವಿದ್ಯಾರ್ಥಿಗಳಿಗೆ ಪುನರ್ಮನನ ತರಗತಿ ಗಳ ಮೂಲಕ ಅವರ ಬುದ್ಧಿಮತ್ತೆಯನ್ನು ಹೆಚ್ಚಿಸುವುದು ಇದರ ಭಾಗವಾಗಿರಲಿದ್ದು, ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ಸಿಗುವ ಮೊಬೈಲ್‌ನ ದುರುಪಯೋಗ ಆಗುವ ಬದಲು ಅದನ್ನೇ ಬಳಸಿಕೊಂಡು ಮರುಸಿಂಚನ ಕಾರ್ಯಕ್ರಮ ಮಾಡುವುದು ಇದರ ಉದ್ದೇಶ.

ವಿದ್ಯಾರ್ಥಿ ತಾನಿರುವ ತರಗತಿಯ ವಿಷಯ ಅಥವಾ ಪಾಠಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂದರೆ, ಹಿಂದಿನ ತರಗತಿಯಲ್ಲಿ ತಪ್ಪಿದ ಕಲಿಕೆಯನ್ನು ಆ ಮಗುವಿಗೆ ತಿಳಿಸಲಾಗುತ್ತದೆ. ಇದರಿಂದ ಮಕ್ಕಳಲ್ಲಿರುವ ಗೊಂದಲ ಬಗೆಹರಿಸಿ ಮುಂದುವರಿಯಲು ಅನುಕೂಲ ಆಗಲಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ. 9 ಸಾವಿರ ಶಾಲೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.

ಸೊರಬ, ರಾಯಚೂರಲ್ಲಿ ಪ್ರಾಯೋಗಿಕ ಅನುಷ್ಠಾನ
ಗಣಿತ ಗಣಕ ಕಾರ್ಯಕ್ರಮವು ಸೊರಬ ಮತ್ತು ರಾಯ ಚೂರಿನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳು ತ್ತಿದ್ದು, ಶಾಲಾ ಶಿಕ್ಷಕರು 3-5ನೇ ತರಗತಿ ಮಕ್ಕಳ ಪೋಷಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಗಣಿತ ಪಾಠ ಮಾಡಲಿ ದ್ದಾರೆ. ಅವರೊಂದಿಗೆ ಹೇಗೆ ಮಾತನಾಡಬೇಕು? ಪೋಷಕರನ್ನು ಕಲಿಕೆಯಲ್ಲಿ ಒಳಗೊಳ್ಳುವುದು ಹೇಗೆ ಎಂಬಿತ್ಯಾದಿ ತರಬೇತಿಯನ್ನು ಶಿಕ್ಷಕರಿಗೆ ಈ ಸಂಸ್ಥೆ ನೀಡಲಿದೆ ಎಂದು ಮಾಹಿತಿ ನೀಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ ಕುಮಾರ್‌ ಸಿಂಗ್‌, ಸಮಗ್ರ ಶಿಕ್ಷಣ ಯೋಜನಾ ನಿರ್ದೇಶಕ ಕೆ.ಎನ್‌.ರಮೇಶ್‌, ಜೆ-ಪಾಲ್‌ ಸೌತ್‌ ಏಷಿಯಾ ಸಂಸ್ಥೆಯ ಸಿಇಒ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next