Advertisement

ಬೆಂಗಳೂರಿನ ಸ್ಪೆಕ್ಯುಲರ್‌ನಿಂದ ವಿಶ್ವ ಕ್ರಿಕೆಟಿಗೆ ತಾಂತ್ರಿಕ ಸ್ಪರ್ಶ

03:28 PM Jun 08, 2017 | Team Udayavani |

ಬೆಂಗಳೂರು: ಕ್ರಿಕೆಟ್‌ ಲೋಕದ ಆಧುನಿಕ ಆವಿಷ್ಕಾರವೊಂದಕ್ಕೆ ಹೊಸ ಸೇರ್ಪಡೆಯಾಗಿದೆ. ಬೆಂಗಳೂರು ಮೂಲದ ಸಂಸ್ಥೆ ಇದನ್ನು ಸಿದ್ಧಪಡಿಸಿದ್ದು ಇದು ವಿಶ್ವ ಮಟ್ಟದಲ್ಲಿ ಭಾರೀ ಸುದ್ದಿಯಾಗಲು ಕಾರಣವಾಗಿದೆ.

Advertisement

ಕ್ರಿಕೆಟ್‌ ಸ್ನೇಹಿ ಸಾಧನಾ (ಡಿವೈಸ್‌) ಹಾಗೂ ಆ್ಯಪ್‌ ಅನ್ನು ಉದ್ಯಾನನಗರಿಯ ಜಯನಗರದಲ್ಲಿರುವ ಸ್ಪೆಕ್ಯುಲರ್‌ ಸಂಸ್ಥೆಯೊಂದು ಕಂಪ್ಯೂಟರ್‌ ಲೋಕದ ಅಗ್ರಗಣ್ಯ ಸಾಧಕ ಇಂಟಲ್‌ ಇನ್‌ಸೈಡ್‌ ಜತೆಗೂಡಿ ಅಭಿವೃದ್ಧಿಪಡಿಸಿದೆ. ಇದು ಫೀಲ್ಡ್‌ನಲ್ಲಿ ಕ್ರಿಕೆಟಿಗನಿಗೆ ಗುರುವಿನಂತೆ ಕೆಲಸ ಮಾಡಲಿದೆ. ಪ್ರಯೋಗಾರ್ಥವಾಗಿ ಪ್ರಸ್ತುತ ಸಾಗುತ್ತಿರುವ “ಚಾಂಪಿಯನ್ಸ್‌ ಟ್ರೋಫಿ’ಯಲ್ಲಿ ಐಸಿಸಿ ಅಳವಡಿಸಿಕೊಂಡಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಮುಂದಿನ ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿ ವಿಶ್ವದಾದ್ಯಂತ ಏಕಕಾಲದಲ್ಲಿ ಮಾರುಕಟ್ಟೆಗೆ ಡಿವೈಸ್‌ ಅನ್ನು ಬಿಡುಗಡೆ ಮಾಡಲಾಗು ವುದು. ಅಗ್ಗದ ದರದಲ್ಲಿ ಇದನ್ನು ಆಟಗಾರರ ಕೈಸೇರು ವಂತೆ ಮಾಡಲಾಗುವುದು ಎಂದು ಸ್ಪೆಕ್ಯುಲರ್‌ ತಿಳಿಸಿದೆ.

ಈ ಕುರಿತಂತೆ ಸ್ಪೆಕ್ಯುಲರ್‌ನ ಮುಖ್ಯ ತಾಂತ್ರಿಕ ಅಧಿಕಾರಿ, ಕನ್ನಡಿಗ ಶ್ರೀಹರ್ಷ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಡಿವೈಸ್‌ ಹಾಗೂ ಆ್ಯಪ್‌ನ ಕಾರ್ಯವೈಖರಿ, ಪ್ರಯೋಜನ ಸೇರಿದಂತೆ ಹಲವು ಕೌತುಕ ಮಾಹಿತಿಗಳನ್ನು ನೀಡಿದ್ದಾರೆ.

ಏನಿದು ಸಾಧನಾ, ಆ್ಯಪ್‌ ?
ಸಾಧನಾ ಮತ್ತು ಆ್ಯಪ್‌ ಕುರಿತಂತೆ ಹರ್ಷ ಹೇಳಿದ್ದು ಹೀಗೆ… ಇದೊಂದು ವೈಜ್ಞಾನಿಕ ತಳಹದಿಯಿಂದ ರಚಿಸ
ಲ್ಪಟ್ಟಿರುವ ತಂತ್ರಜ್ಞಾನ. ಮೆಷಿನ್‌ ಲರ್ನಿಂಗ್‌ ಎನ್ನ ಬಹುದು. ಬ್ಯಾಟ್‌ಸೆನ್ಸ್‌ ಎಂದೂ ಕರೆಯಬಹುದು. ಇಲ್ಲಿ ಸಾಧನಾ ಹಾಗೂ ಆ್ಯಪ್‌ ಮುಖ್ಯವಾಗಿ ಕೆಲಸ ಮಾಡುವ ಸಾಧನಗಳು. ಡಿವೈಸ್‌ ಒಳಗಡೆ ಎಕ್ಸಲರೋ ಮೀಟರ್‌, ಗೈರೋ ಮೀಟರ್‌, ಮ್ಯಾಗ್ನೆಟೋ ಮೀಟರ್‌ ಉಪಕರಣಗಳು ಇರುತ್ತವೆ. ಈ ಡಿವೈಸ್‌ ಅನ್ನು ಬ್ಯಾಟ್‌ ಹಿಡಿಯ ಒಳಗೆ ವ್ಯವಸ್ಥಿತವಾಗಿ ಕೂರಿಸ ಲಾಗುತ್ತದೆ. ಇದಕ್ಕಾಗಿ ಒಂದು ಪ್ರತ್ಯೇಕ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ವೀಡಿಯೋ, ಅಕ್ಷರ ರೂಪ ದಲ್ಲಿ ಡಿವೈಸ್‌ನಿಂದ ಮಾಹಿತಿ ಲಭ್ಯವಾಗುತ್ತದೆ. ಡಿವೈಸ್‌ನಿಂದ ಪಡೆದ ಮಾಹಿತಿ ಮೊಬೈಲ್‌ನಲ್ಲಿ ಆ್ಯಪ್‌ ಮೂಲಕ ಆಟಗಾರ, ಕೋಚ್‌ ಅಥವಾ ಪೋಷಕರಿಗೆ ಕೈಗೆ ತಲುಪಲಿದೆ. ಆಟಗಾರನಿಗೆ ತನ್ನ ತಪ್ಪುಗಳನ್ನು ತಿದ್ದಿ ಕೊಳ್ಳಲು, ಕೋಚ್‌ಗೆ ಶಿಷ್ಯನ ಆಟವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಏನೆಲ್ಲ  ಮಾಹಿತಿ ಸಿಗುತ್ತದೆ?
ಕ್ರಿಕೆಟಿಗರಿಗೆ ಇದರಿಂದ ಹಲವು ಪ್ರಯೋಜನವಿದೆ ಎನ್ನುವುದು ಹರ್ಷ ಅವರ ಮಾತು. ಯಾವ ಎಸೆತಕ್ಕೆ ಹೇಗೆ ಹೊಡೆದೆ? ಯಾರ್ಕರ್‌ ಎದುರಿಸಿದ್ದು ಹೇಗೆ? 360 ಡಿಗ್ರಿ ಶಾಟ್‌ಗಳನ್ನು ನಿಭಾಯಿಸುವುದು ಹೇಗೆ? ಬ್ಯಾಟಿಂಗ್‌ನಲ್ಲಿ ಎಡವಿದ್ದು ಎಲ್ಲಿ? ಸೇರಿದಂತೆ ಹಲವಾರು ಮಾಹಿತಿಗಳು ಪಡೆಯಬಹುದು ಎಂದರು.

Advertisement

ಸ್ಪೆಕ್ಯುಲರ್‌ ಬ್ಯಾಟ್‌ಸೆನ್ಸ್‌ ಕಾರ್ಯವೈಖರಿ ಹೇಗೆ?
ಸ್ಪೆಕ್ಯುಲರ್‌ ಬ್ಯಾಟ್‌ಸೆನ್ಸ್‌ ಕಾರ್ಯವೈಖರಿ ಬಗ್ಗೆ ಹರ್ಷ ವಿವರಿಸಿದರು. ಇದಕ್ಕಾಗಿ ಅವರು ಉದಾಹರಣೆ ಯೊಂದನ್ನು ನೀಡಿದರು. ಕ್ರಿಕೆಟ್‌ ಅಭ್ಯಾಸಕ್ಕೆ ಬಂದ ಒಬ್ಬ ಆಟಗಾರನಿಗೆ ಮನೆಗೆ ತೆರಳಿದ ಮೇಲೆ ಹೋಮ್‌ವರ್ಕ್‌ ಎನ್ನುವುದು ಇರುವುದಿಲ್ಲ. ಈಗ ಡಿವೈಸ್‌ ಮತ್ತು ಆ್ಯಪ್‌ ಬಂದ ಬಳಿಕ ಆಟಗಾರ ಮನೆಗೆ ತೆರಳಿದ ಮೇಲೂ ಹೋಮ್‌ವರ್ಕ್‌ ಮಾಡಬಹುದು. ಕೋಚ್‌ ಅಥವಾ ಪೋಷಕರಿಗೆ ಕ್ರಿಕೆಟಿಗನ ಬಗೆಗಿನ ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಿದರು.

ಕುಳಿತಲ್ಲೇ ಮಾಹಿತಿ ಅಪ್‌ಲೋಡ್‌
ಪೇಸ್‌ಬುಕ್‌, ಟ್ವೀಟರ್‌, ಇನ್‌ಸ್ಟಾಗ್ರಾಮ್‌ನಲ್ಲಿ ನಿಮ್ಮ ಕ್ರಿಕೆಟ್‌ ಮಾಹಿತಿಗಳನ್ನು ನೀವೇ ಅಪ್‌ಲೋಡ್‌ ಮಾಡಬಹುದು ಎಂದು ಹರ್ಷ ತಿಳಿಸಿದರು.  ಡಿವೈಸ್‌ನಿಂದ ಪಡೆದ ದತ್ತಾಂಶಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಬಹುದು. ನಿಮ್ಮ ಆಟ ಹೇಗೆ? ಬಲ, ದೌರ್ಬಲ್ಯ ಏನು? ಫೀಲ್ಡ್‌ನಲ್ಲಿ ಎಷ್ಟು ಚುರುಕಿನಿಂದ ಆಡುತ್ತೀರಿ? ದಾಖಲೆಗಳು ಏನು?  ಎನ್ನುವುದು ತಿಳಿಯುತ್ತದೆ. ಇದನ್ನು ನೀವು ಮತ್ತೂಬ್ಬ ಆಟಗಾರ ಅಥವಾ ಕೆಎಸ್‌ಸಿಎ, ಬಿಸಿಸಿಐನಂತಹ ಸಂಸ್ಥೆಗಳ ಜತೆ ಹಂಚಿಕೊಳ್ಳಬಹುದು. ಇದು ನಿಮ್ಮ ಆಯ್ಕೆ ಪ್ರಕ್ರಿಯೆಗೂ ಸಹಾಯಕಾರಿಯಾಗಿದೆ ಎಂದರು.

3 ಮಂದಿಯ ಸಾಹಸ
ಸ್ಪೆಕ್ಯುಲರ್‌ ನಿರ್ವಾಹಕ ನಿರ್ದೇಶಕ ಅತುಲ್‌ ಶ್ರೀವತ್ಸ, ಮುಖ್ಯ ತಾಂತ್ರಿಕ ಅಧಿಕಾರಿ ಶ್ರೀಹರ್ಷ ಹಾಗೂ ರಾಘವೇಂದ್ರ ಪಟ್ನಾಯಕ್‌  ತಂಡದ ಸಾಹಸದಿಂದ ಇಂಥದೊಂದು ಅದ್ಭುತ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ಮುಂದೆ ಐಸಿಸಿ ಜತೆಗೆ ಇನ್ನಷ್ಟು ತಾಂತ್ರಿಕ ಕಾರ್ಯಗಳನ್ನು ನಡೆಸಲು ಸ್ಪೆಕ್ಯುಲರ್‌ ಚಿಂತನೆ ನಡೆಸಿದೆ.

ವಿಶ್ವ ಮಟ್ಟದಲ್ಲಿ ಕಳೆದ 12 ವರ್ಷಗಳಿಂದ ನಮ್ಮ ಸಂಸ್ಥೆ ಕ್ರಿಕೆಟ್‌ ಜತೆಗೆ ಕಾರ್ಯ ನಿರ್ವಹಿಸುತ್ತಿದೆ. ತಾಂತ್ರಿಕ ಅಭಿವೃದ್ಧಿಯಲ್ಲಿ ಇದು ನಮ್ಮ ಮೊದಲ ಹೆಜ್ಜೆ. ಹೊಸ ಆವಿಷ್ಕಾರ ವಿಶ್ವ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸುವ ವಿಶ್ವಾಸವಿದೆ.
-ಶ್ರೀಹರ್ಷ , ಮುಖ್ಯ ತಾಂತ್ರಿಕ ಅಧಿಕಾರಿ

– ಹೇಮಂತ್‌  ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next