Advertisement

ಸುದಿನ ಫಾಲೋಆಪ್‌: ತಾಂತ್ರಿಕ ಸಮಸ್ಯೆ: ಕದ್ರಿ ಮಾರುಕಟ್ಟೆ ಸಂಕೀರ್ಣ ಕಾಮಗಾರಿ ಸ್ಥಗಿತ

09:26 PM Sep 07, 2020 | mahesh |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕದ್ರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣದ ಕಾಮಗಾರಿ ಕೊರೊನಾ ಹಾಗೂ ತಾಂತ್ರಿಕ ಸಮಸ್ಯೆಗಳಿಂದ 4 ತಿಂಗಳು ಗಳಿಂದ ಸ್ಥಗಿತಗೊಂಡಿದೆ.

Advertisement

ಎರಡು ನೆಲ ಅಂತಸುಗಳು ಸಹಿತ 5 ಅಂತಸ್ತುಗಳ ಕದ್ರಿ ಮಾರುಕಟ್ಟೆ ಸಂಕೀರ್ಣಕ್ಕೆ 2018ರ ಮಾರ್ಚ್‌ 26ರಂದು ಶಂಕುಸ್ಥಾಪನೆ ನೆರವೇರಿತ್ತು. ಈಗಾಗಲೇ ನೆಲ ಅಂತಸ್ತುಗಳ ಕಾಮಗಾರಿ ನಡೆದಿದೆ. ಈ ವರ್ಷದ ಮಾರ್ಚ್‌ನಲ್ಲಿ ದಿಢೀರ್‌ ಆಗಿ ಕಾಣಿಸಿಕೊಂಡ ಕೊರೊನಾ, ಮಳೆಗಾಲ ಹಾಗೂ ಕೆಲವು ತಾಂತ್ರಿಕ ಸಮಸ್ಯೆಗಳು ಕಾಮಗಾರಿಯ ಮೇಲೆ ಪರಿಣಾಮ ಬೀರಿದ್ದು, ಇದೀಗ ಕಾಮಗಾರಿ ಬಹುತೇಕ ಸ್ಥಗಿತಗೊಂಡಿದೆ. ನಗರದ ಪ್ರಮುಖ ಮಾರುಕಟ್ಟೆಗಳ ಪೈಕಿ ಕದ್ರಿ ಮಾರುಕಟ್ಟೆ ಒಂದಾಗಿದೆ. ಶಿಥಿಲಾವಸ್ಥೆಗೆ ತಲುಪಿದ್ದ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ, ಗ್ರಾಹಕರಿಗೆ ಹಾಗೂ ಮಾರಾಟಗಾರರಿಗೆ ವ್ಯವಸ್ಥಿತವಾದ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸುಸಜ್ಜಿತವಾದ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಿಸಲು ಮುಂದಾಗಿದೆ.

2 ಅಂತಸ್ತುಗಳ ಕಾಮಗಾರಿ ಪೂರ್ಣ
ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಯುಐಡಿಎಫ್‌ಸಿ) ಹಾಗೂ ಉಳಿದ ಮೊತ್ತವನ್ನು ಮಹಾನಗರ ಪಾಲಿಕೆ ಮತ್ತು ಬ್ಯಾಂಕ್‌ಗಳ ಮೂಲಕ ಪಡೆದು ಹಣಕಾಸು ಸೌಲಭ್ಯ ಹೊಂದಿಸಿಕೊಳ್ಳಲು ನಿರ್ಧರಿಸಿ ಯೋಜನೆಯನ್ನು ಕೈಗೆತ್ತಿಗೊಳ್ಳಲಾಗಿತ್ತು. ಟೆಂಡರ್‌ ಪ್ರಕ್ರಿಯೆ ನಡೆದು ಕಾಮಗಾರಿ ಪ್ರಾರಂಭವಾಗಿ ಪ್ರಸ್ತುತ ಕೆಳಗಿನ ಎರಡು ಅಂತಸ್ತುಗಳ ಕಾಮಗಾರಿ ಮುಗಿದಿದೆ. ಈ ಹಂತದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ಹಾಗೂ ಮಳೆಗಾಲ ಪ್ರಾರಂಭ ವಾದ ಹಿನ್ನೆಲೆ ಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಇದೇವೇಳೆ ಆರ್ಥಿಕ ನೆರವು ಸ್ವರೂಪದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದು, ಇದು ಕೂಡ ಕಾಮಗಾರಿಯ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

ವ್ಯಾಪಾರಸ್ಥರಿಗೆ ತಾತ್ಕಾಲಿಕ ಮಳಿಗೆ
ಕದ್ರಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಸುಮಾರು 40 ವರ್ಷಗಳ ಹಳೆಯ ಮಾರುಕಟ್ಟೆ ಕಟ್ಟಡವನ್ನು ಕೆಡವಿ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಹಿಂದಿನ ಮಾರುಕಟ್ಟೆ ಕಟ್ಟಡದ ಭಾಗದಲ್ಲಿ 25 ಸೆಂಟ್ಸ್‌ ಹಾಗೂ ಪಕ್ಕದಲ್ಲಿ ಲಭ್ಯವಿರುವ ಪಾಲಿಕೆಯ 45 ಸೆಂಟ್ಸ್‌ ಜಾಗವನ್ನು ಉಪಯೋಗಿಸಿ 12.30 ಕೋ. ರೂ. ವೆಚ್ಚದಲ್ಲಿ ಒಟ್ಟು 6,920 ಚದರ ಮೀಟರ್‌ ವಿಸ್ತೀರ್ಣದಲ್ಲಿ ಕಾರು ಪಾರ್ಕಿಂಗ್‌, ಕಚೇರಿ, ವಾಣಿಜ್ಯ ಮಳಿಗೆಗಳನ್ನು ಒಳಗೊಂಡ ಸುಸಜ್ಜಿತ ಸಂಕೀರ್ಣ ನಿರ್ಮಾಣವಾಗಲಿದೆ. ಹಳೆಯ ಕದ್ರಿ ಮಾರುಕಟ್ಟೆಯಲ್ಲಿರುವ ಒಟ್ಟು 45 ಮಳಿಗೆಗಳ ವ್ಯಾಪಾರಸ್ಥರಿಗೆ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಾಣ ಮಾಡಿ ನೀಡಲಾಗಿದೆ.

ಕ್ರಮ ವಹಿಸಲಾಗುವುದು
ಕೊರೊನಾ ಲಾಕ್‌ಡೌನ್‌ ಮಳೆಗಾಲದಿಂದಾಗಿ ಕಾರ್ಮಿಕರ ಅಭಾವ ಹಾಗೂ ಇನ್ನಿತರ ಕಾರಣಗಳಿಂದಾಗಿ ಕದ್ರಿ ನೂತನ ಮಾರುಕಟ್ಟೆ ಸಂಕೀರ್ಣ ಕಾಮಗಾರಿ ಕುಂಠಿತವಾಗಿದೆ. ಸಣ್ಣ ಮಟ್ಟಿನ ತಾಂತ್ರಿಕ ಕಾರಣಗಳು ಕೂಡಾ ಇರಬಹುದು. ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಅವುಗಳನ್ನು ಪರಿಹರಿಸಿಕೊಂಡು ಕಾಮಗಾರಿಗೆ ವೇಗವನ್ನು ನೀಡಿ ಸುವ್ಯವಸ್ಥಿತವಾಗಿ ನಡೆಯುವಂತೆ ಕ್ರಮ ವಹಿಸಲಾಗುವುದು.
-ವೇದವ್ಯಾಸ ಕಾಮತ್‌, ಶಾಸಕರು

Advertisement

6920 ಚದರ ಮೀಟರ್‌ ವಿಸ್ತೀರ್ಣ
40 ವರ್ಷಗಳ ಹಳೆಯ  ಕಟ್ಟಡ ತೆರವು

Advertisement

Udayavani is now on Telegram. Click here to join our channel and stay updated with the latest news.

Next