Advertisement

ಮಡಿವಾಳರನ್ನು ಎಸ್ಸಿ ಪಟ್ಟಿಗೆ ಸೇರಿಸಲು ತಾಂತ್ರಿಕ ತೊಡಕು: ಎಚ್‌ಡಿಡಿ

09:31 AM Jan 07, 2019 | Team Udayavani |

ಚಿತ್ರದುರ್ಗ: ಮಡಿವಾಳ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಲು ಕೆಲವು ತಾಂತ್ರಿಕ ಸಮಸ್ಯೆ ಇದೆ. ಮೀಸಲು ಹೆಚ್ಚಿಸಿದರೆ ಮಾತ್ರ ಸಮುದಾಯವನ್ನು ಎಸ್ಸಿ ಪಟ್ಟಿಗೆ ಸೇರಿಸಬಹುದಾಗಿದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ ಹೇಳಿದರು.

Advertisement

ನಗರ ಹೊರ ವಲಯದ ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ ಹಾಗೂ ಮಡಿವಾಳ ಸಮುದಾಯದ ರಾಜ್ಯಮಟ್ಟದ ಜಾಗೃತಿ ಮಹಾ ಸಮ್ಮೇಳನದಲ್ಲಿ ಅವರು ಮಾತನಾಡಿದರು. ರಾಜಕೀಯವಾಗಿ ಮಡಿವಾಳ ಸಮುದಾಯಕ್ಕೆ ಸ್ಥಾನಮಾನ ನೀಡಲು ಚರ್ಚೆ ನಡೆಯಬೇಕಿದೆ. ಎಲ್ಲರೂ ಈ ಬಗ್ಗೆ ಮುತುವರ್ಜಿ ವಹಿಸಿ ಕಾರ್ಯ ಮಾಡಬೇಕಿದೆ ಎಂದರು.

ಗ್ರಾಪಂ ಮಟ್ಟದಿಂದ ರಾಜಕೀಯ ಮಾಡುತ್ತಾ ಮೇಲೇರಿದ್ದೇನೆ. ರಾಜಕೀಯ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದೇನೆ. ನನ್ನ ಸುದೀರ್ಘ‌ ರಾಜಕೀಯ ಜೀವನದಲ್ಲಿ ಕೇವಲ ಐದೂವರೆ ವರ್ಷ ಮಾತ್ರ ಅಧಿಕಾರ ಅನುಭವಿಸಿದ್ದೇನೆ. ಅದಕ್ಕಾಗಿ ನಾನು ಯಾರನ್ನೂ ದೂಷಿಸುವುದಿಲ್ಲ ಎಂದರು.

ಅಂದು ಬೇರೆಯವರನ್ನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಆ ಜಾಗದಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ವಿಧಾನಸಭೆಗೆ ಆಯ್ಕೆ ಮಾಡಲಾಗಿತ್ತು. ಅವರು ಮುಖ್ಯಮಂತ್ರಿ ಆದ ಮೇಲೆ ಜಾರಿಗೆ ತಂದ ಪಂಚಾಯತ್‌ ರಾಜ್‌ ಕಾಯ್ದೆ ಇಂದಿಗೂ ಉಳಿದಿದೆ. ಮಾಜಿ ಪ್ರಧಾನಮಂತ್ರಿ ಚಂದ್ರಶೇಖರ್‌ ಅವರು ಕೇಂದ್ರದಲ್ಲಿ ಆಡಳಿತ ಮಾಡುವ ಸಂದರ್ಭದಲ್ಲಿ ನನ್ನನ್ನು ಮಂತ್ರಿ ಮಾಡುತ್ತೇನೆ ಅಂದಾಗ ಅದನ್ನು ನಿರಾಕರಿಸಿದೆ. ಮಂತ್ರಿ ಸ್ಥಾನ ಬದಲಿಗೆ ಕರ್ನಾಟಕ ರಾಜ್ಯದಲ್ಲಿನ ಬುಡಕಟ್ಟು ನಾಯಕ ಸಮಾಜವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಗೆ ಸೇರಿಸಿದೆ ಎಂದು ಹೇಳಿದರು.

ನನ್ನ ರಾಜಕೀಯ ಜೀವನದಲ್ಲಿ ಒಂದೂವರೆ ವರ್ಷ ಮಾತ್ರ ಮುಖ್ಯಮಂತ್ರಿಯಾಗಿದ್ದೆ. 11 ತಿಂಗಳು ಮಾತ್ರ ಪ್ರಧಾನಿ ಹುದ್ದೆಯಲ್ಲಿದ್ದೆ. ಆಗ ಎಲ್ಲ ಸಮುದಾಯಗಳಿಗೆ ಮಂತ್ರಿ ಸ್ಥಾನ ನೀಡಿದ್ದೆ. ಇಂದು ನಮ್ಮ ಪಕ್ಷಕ್ಕೆ ರಾಜಕಾರಣದಲ್ಲಿ ಶಕ್ತಿ ಇಲ್ಲ. ಕೇವಲ 37ಸ್ಥಾನ ಗೆದ್ದಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 40 ಸ್ಥಾನ ಗೆದ್ದಿದ್ದೇವು. ಇಷ್ಟು ಕಡಿಮೆ ಸೀಟುಗಳನ್ನಿಟ್ಟುಕೊಂಡು ಎಷ್ಟು ಜಾತಿ ಜನರಿಗೆ ಸ್ಥಾನಮಾನ ಕೊಡಲು ಸಾಧ್ಯ? ಇರುವುದರಲ್ಲಿ ಎಲ್ಲ ಸಮುದಾಯಕ್ಕೂ ಸ್ಥಾನಮಾನ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.

Advertisement

ರಾಜ್ಯ ಸಮ್ಮಿಶ್ರ ಸರ್ಕಾರ ಮಡಿವಾಳ ಮಾಚಿದೇವ ಗುರುಪೀಠಕ್ಕೆ ಒಂದು ಕೋಟಿ ರೂ. ಬಿಡುಗಡೆ ಮಾಡಿದೆ. ಸದ್ಯದಲ್ಲಿ ಇನ್ನೂ ಒಂದು ಕೋಟಿ ರೂ. ಬಿಡುಗಡೆ ಮಾಡಲಾಗುವುದು. ನಾವು ಚುನಾವಣೆ ಸಂದರ್ಭದಲ್ಲಿ ಅನೇಕ ಯೋಜನೆಗಳನ್ನು ನೀಡುವುದಾಗಿ ಹೇಳಿದ್ದೆವು. ಆದರೆ, ನಮ್ಮವರು ಕೇವಲ 37 ಶಾಸಕರು ಆಯ್ಕೆಯಾದರು. ಇಂತಹ ಪರಿಸ್ಥಿತಿಯಲ್ಲೇ ಸರ್ಕಾರ 46 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ಸಿದ್ದರಾಮಯ್ಯನವರು ಸಹಕಾರ ಕೊಟ್ಟಿದ್ದಾರೆ. ಅದರಂತೆ ಸರ್ಕಾರ ಜನೋಪಯೋಗಿ ಯೋಜನೆಗಳನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೊಡುಗೆಗಳನ್ನು ಮುಖ್ಯಮಂತ್ರಿಗಳು ನೀಡುವ ವಿಶ್ವಾಸವಿದೆ ಎಂದರು.

ರಾಜ್ಯದಲ್ಲಿನ ಒಕ್ಕಲಿಗರು, ಲಿಂಗಾಯತರಿಗೆ ಮಾತ್ರವಲ್ಲ, ಸಣ್ಣ ಸಣ್ಣ ಸಮಾಜಗಳಿಗೂ ಸ್ಥಾನಮಾನ ಕೊಡುವ ಪ್ರಯತ್ನ ಮಾಡಲಾಗುವುದು. ಸಂಸತ್ತಿನಲ್ಲಿ ಸಂಖ್ಯಾಬಲದ ಆಧಾರದ ಮೇಲೆ ಮಾತನಾಡಲು ಅವಕಾಶ ನೀಡಲಾಗುತ್ತದೆ. ಇಷ್ಟು ಅನುಭವ ಇರುವ ನನಗೆ ಕೇವಲ ಮೂರು ನಿಮಿಷ ಮಾತ್ರ ಮಾತನಾಡಲು ಅವಕಾಶ ಕೊಡುತ್ತಾರೆ. ಮೂರು ನಿಮಿಷದಲ್ಲಿ ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡಲು ಹೇಗೆ ಸಾಧ್ಯ. ಹೆಚ್ಚು ಮಾತನಾಡುತ್ತೇನೆ ಅಂತ ಅವಕಾಶ ಕೊಡುತ್ತಿಲ್ಲ ಎಂದರು.

 ನಿಮ್ಮ ಬೇಡಿಕೆಯಂತೆ ಅಮರನಾಥ್‌ ಅವರನ್ನು ರಾಜಕೀಯವಾಗಿ ಗುರುತಿಸುತ್ತೇನೆ. ಶ್ರೀಮಠದಿಂದ ಸ್ಥಾಪಿಸಲು ಉದ್ದೇಶಿಸಿರುವ ಹಾಸ್ಟೆಲ್‌ ಮತ್ತು ಶಾಲೆಗೆ ಮುಂದೆ ಹೆಚ್ಚಿನ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next