Advertisement

ಸಿಂಗಟಾಲೂರು ಯೋಜನೆಗೆ ತಾಂತ್ರಿಕ ತೊಡಕು?

03:36 PM Oct 14, 2022 | Team Udayavani |

ಕೊಪ್ಪಳ: ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಕೊಪ್ಪಳ ಭಾಗದ ಜಮೀನಿಗೆ ಮಧ್ಯಪ್ರದೇಶದ ಛೇಂಬರ್‌ ಮಾದರಿ ನೀರಾವರಿ ಕಲ್ಪಿಸುವ ಕುರಿತು ರಾಜ್ಯ ಸರ್ಕಾರವೇ ಘೋಷಣೆ ಮಾಡಿತ್ತು. ಆದರೆ ತಜ್ಞರ ಸಮಿತಿ ಮುಂಡರಗಿ, ಕೊಪ್ಪಳ ಭಾಗದಲ್ಲಿ ಈಚೆಗೆ ಪರಿಶೀಲನೆ ನಡೆಸಿದ್ದು, ಸಾಧ್ಯ ಸಾಧ್ಯತೆ ಬಗ್ಗೆ ಸ್ಪಷ್ಟವಾದ ನಿರ್ಧಾರ ವ್ಯಕ್ತಪಡಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

Advertisement

ಸಿಂಗಟಾಲೂರು ಏತ ನೀರಾವರಿ ಯೋಜನೆ ಜಿಲ್ಲೆಯ ಬಹು ವರ್ಷಗಳ ಬೇಡಿಕೆಯಾಗಿದೆ. ಈ ಮೊದಲು ಕಾಲುವೆ ನೀರಾವರಿ ಇದ್ದ ಯೋಜನೆಯನ್ನು ಸರ್ಕಾರ ಮಾರ್ಪಾಡು ಮಾಡಿದೆ. ಹೆಚ್ಚಿನ ರೈತರ ಜಮೀನಿಗೆ ನೀರು ಕೊಡುವ ಚಿಂತನೆ ಮಾಡಿ, ಕಾಲುವೆ ನೀರಾವರಿ ಇದ್ದದ್ದನ್ನು ಹನಿ ನೀರಾವರಿ ಮಾಡಿ ಹೆಚ್ಚು ಪ್ರದೇಶವನ್ನು ಈ ಯೋಜನೆಗೆ ಸೇರ್ಪಡೆ ಮಾಡಿದೆ. ಹನಿ ನೀರಾವರಿಯಡಿ ಡ್ರಿಪ್‌ ಪೈಪ್‌ಗಳು ರೈತರ ಜಮೀನಿನಲ್ಲಿ ಉಳಿಯಲ್ಲ ಎನ್ನುವ ಆಪಾದನೆಗಳೂ ಕೇಳಿ ಬಂದವು.

ಈಚೆಗಷ್ಟೇ ಸರ್ಕಾರ ಹನಿ ನೀರಾವರಿ ಬದಲಿಗೆ ಮಧ್ಯಪ್ರದೇಶ ರಾಜ್ಯದ ಛೇಂಬರ್‌ ಮಾದರಿಯಲ್ಲಿ ನೀರಾವರಿ ಮಾಡುವ ನಿರ್ಧಾರಕ್ಕೆ ಬಂದಿತ್ತು. ಸಂಸದ ಸಂಗಣ್ಣ ಕರಡಿ ಅವರ ಪ್ರಯತ್ನವೂ ಇದರಲ್ಲಿ ಹೆಚ್ಚಿತ್ತು. ಆದರೆ ನೀರಾವರಿ ತಾಂತ್ರಿಕ ತಂಡ ಛೇಂಬರ್‌ ಮಾದರಿ ನೀರಾವರಿ ಕಲ್ಪಿಸುವುದು ಕಷ್ಟಸಾಧ್ಯ ಎನ್ನುವ ಮಾತನ್ನು ಈಚೆಗೆ ನಡೆದ ಸಭೆಯಲ್ಲಿ ಪ್ರಸ್ತಾಪಿಸಿದೆ ಎನ್ನುವ ಮಾತುಗಳು ನೀರಾವರಿ ಇಲಾಖೆ ಅಧಿ ಕಾರಿಗಳಿಂದ ತಿಳಿದು ಬಂದಿದೆ. ಕೊಪ್ಪಳ ಹಾಗೂ ಮುಂಡರಗಿ ಭಾಗದಲ್ಲಿ ಪರಿಶೀಲನೆ ನಡೆಸಿರುವ ನೀರಾವರಿ ತಜ್ಞರ ತಾಂತ್ರಿಕ ತಂಡವು ಸ್ಥಳ ಪರಿಶೀಲನೆ ನಡೆಸಿದೆ. ಇಲ್ಲಿನ ಭೂ ಮಟ್ಟ ಸೇರಿದಂತೆ ನೀರಾವರಿ ಪ್ರದೇಶದ ಹಲವು ಭಾಗಗಳನ್ನು ವೀಕ್ಷಣೆ ಮಾಡಿ ತಾಂತ್ರಿಕತೆ ಕುರಿತು ಅವಲೋಕಿಸಿದೆ. ಛೇಂಬರ್‌ ಮಾದರಿಯಲ್ಲಿ ನೀರಾವರಿ ಮಾಡುವುದಾದರೆ, ಪಂಪ್‌ಹೌಸ್‌ ವರೆಗೆ ನೀರು ತರಲಾಗುತ್ತದೆ. ಅಲ್ಲಿಂದ ರೈತರ ಜಮೀನಿಗೆ ನೀರನ್ನು ಹೇಗೆ ತೆಗೆದುಕೊಂಡು ಹೋಗಬೇಕು ಅಥವಾ ನೀರನ್ನು ಹರಿಸಬೇಕು ಎನ್ನುವ ವಿಚಾರ ಪ್ರಸ್ತಾಪಕ್ಕೆ ಬಂದಿದೆ.

ಸ್ಥಿತಿವಂತ ರೈತರು ತಮ್ಮ ಶಕ್ತಿಯನುಸಾರ ಪೈಪ್‌ಲೈನ್‌ ಮೂಲಕ ನೀರನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಬಡ ರೈತರು, ಸಣ್ಣ, ಮಧ್ಯಮ ರೈತರಿಗೆ ಇದು ಕಷ್ಟದ ಕೆಲಸ. ರೈತರಿಗೆ ಇಲ್ಲಿ ಹೊರೆಯಾಗಲಿದೆ ಎನ್ನುವ ಮಾತುಗಳು ತಾಂತ್ರಿಕತೆ ತಂಡದ ಮುಂದೆ ಪ್ರಸ್ತಾಪಕ್ಕೆ ಬಂದಿವೆ ಎನ್ನುವ ಮಾತು ತಿಳಿದು ಬಂದಿದೆ.

ಮತ್ತೂಮ್ಮೆ ಚರ್ಚೆ: ಇನ್ನು ಕೆಲವೇ ದಿನಗಳಲ್ಲಿ ಮತ್ತೂಮ್ಮೆ ನೀರಾವರಿ ತಜ್ಞರ ಸಭೆ ನಡೆಸಲಿದೆ. ಈಗಿನ ಮಾಹಿತಿ ಪ್ರಕಾರ, ಈಗಾಗಲೇ ಕೊಪ್ಪಳ, ಮುಂಡರಗಿ ಭಾಗದಲ್ಲಿ ಮಾಡಲಾಗಿರುವ ಕಾಲುವೆಗಳಿಂದ ನೀರನ್ನು ಚಾಕ್‌ವೆಲ್‌ಗ‌ಳ ಮೂಲಕ ಲಿಫ್ಟ್‌ ಮಾಡಿ ಒಂಬಂತ್ತು ಪಂಪ್‌ಹೌಸ್‌ ನಿರ್ಮಿಸಿ ಪ್ರತಿ ರೈತನ ಜಮೀನಿಗೂ ಒಂದು ಪೈಪ್‌ನ ಸಂಪರ್ಕ ಕೊಡುವ ಚರ್ಚೆಯೂ ನಡೆದಿವೆ. ಅಂದರೆ ಕೊಪ್ಪಳ ಜಿಲ್ಲೆಯಲ್ಲಿ 47 ಸಾವಿರ ಹೆಕ್ಟೇರ್‌ ಪ್ರದೇಶ ಸಿಂಗಟಾಲೂರು ಏತ ನೀರಾವರಿ ವ್ಯಾಪ್ತಿಯಿದೆ. ಇಲ್ಲಿ ಪ್ರತಿ ರೈತರಿಗೂ ಈ ರೀತಿಯ ಪೈಪ್‌ ಕೊಡುವುದು ತಾಂತ್ರಿಕತೆಯ ಸಾಧ್ಯತೆ ಗಳ ಕುರಿತಂತೆಯೂ ಅವಲೋಕನ ನಡೆಸಲಾಗಿದೆ.

Advertisement

ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಛೇಂಬರ್‌ ಮಾದರಿ ನೀರಾವರಿ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಅದಕ್ಕೆ ಈಗಾಗಲೇ ನಿವೃತ್ತ ಎಂಜನಿ ಯರ್‌ ಒಳಗೊಂಡ ಸಮಿತಿ ರಚಿಸಿದ್ದು, ಸಮಿತಿಯ ಮುಂದೆ ಮೂರು ವಿಧಾನದಲ್ಲಿ ನೀರಾವರಿ ಕಲ್ಪಿಸುವ ಆಯ್ಕೆಗಳಿವೆ. ಇನ್ನೂ ಯಾವುದನ್ನು ನಿರ್ಧಾರ ಮಾಡಿಲ್ಲ. ಪ್ರತಿ ರೈತರ ಜಮೀನಿಗೂ ಪೈಪ್‌ ಕಲ್ಪಿಸುವ ಅವಕಾಶವೂ ಇದೆ. ಈ ಕುರಿತು ಅಧಿ ಕಾರಿಗಳೊಂದಿಗೆ ಚರ್ಚೆ ಮಾಡಿ ಮಾತನಾಡುವೆ. ಸಂಗಣ್ಣ ಕರಡಿ, ಕೊಪ್ಪಳ ಸಂಸದ

ಸಿಂಗಟಾಲೂರು ಏತ ನೀರಾವರಿಗೆ ತಾಂತ್ರಿಕ ಸಮಿತಿ ಏನೇ ಹೇಳುತ್ತಿರಬಹುದು. ಇದರಲ್ಲಿ ಎಲ್ಲರೂ ಕಮಿಟ್‌ಮೆಂಟ್‌ ಆಗಿದ್ದಾರೆ. ರಾಮತಾಳ ಹನಿ ನೀರಾವರಿ ವಿಫಲವಾಗಿದೆ. ಸರ್ಕಾರ ಇದೆಲ್ಲವನ್ನು ನೋಡಿ ಛೇಂಬರ್‌ ಮಾದರಿಯಲ್ಲೇ ರೈತರ ಜಮೀನಿಗೆ ಕಾಲುವೆ ನೀರಾವರಿ ಕಲ್ಪಿಸಬೇಕು. ಸುಮ್ಮನೆ ನೂರೆಂಟು ಕಾರಣ ಹೇಳಿಕೊಂಡು ವಿಳಂಬ ಮಾಡುವುದು ಸರಿಯಲ್ಲ. ಹನಿ ನೀರಾವರಿ ಬದಲಿಗೆ ಹರಿ ನೀರಾವರಿ ಜಾರಿಯಾಗಲಿ. ವೈ.ಎನ್‌. ಗೌಡರ್‌, ನೀರಾವರಿ ಹೋರಾಟಗಾರ

ತಾಂತ್ರಿಕ ತಂಡವು ಈಚೆಗೆ ಮುಂಡರಗಿ, ಕೊಪ್ಪಳ ಭಾಗದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಛೇಂಬರ್‌ ಮಾದರಿ ನೀರಾವರಿಯ ಕುರಿತು ಚರ್ಚೆ ನಡೆಸಿದೆ. ತಾಂತ್ರಿಕ ತಂಡದ ಮುಂದೆ ಹಲವು ವಿಚಾರಗಳು ಚರ್ಚೆಗೆ ಬಂದಿವೆ. ಮತ್ತೂಮ್ಮೆ ಸಭೆ ನಡೆಸಿ ರೈತರ ಜಮೀನಿಗೆ ನೀರಾವರಿ ಕಲ್ಪಿಸುವ ಕುರಿತಂತೆ ನಿರ್ಧಾರಕ್ಕೆ ಬರಲಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

„ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next