ಆಳಂದ: ಸರಕಾರ ಪ್ರಚಾರ ಮಾಡಿ ಸಂಕಷ್ಟದಲ್ಲಿರುವ ರೈತರು ಬೆಳೆ ವಿಮೆ ತುಂಬುವಂತೆ ಮಾಡಿರುವುದು ಒಂದೆಡೆಯಾದರೆ, ಬೆಳೆಹಾನಿಯಾದ ಮೇಲೆ ಪರಿಹಾರ ಕೊಡುವುದಿರಲಿ ಕನಿಷ್ಟ ಪಕ್ಷ ರೈತರ ದೂರು ದಾಖಲೆಗೂ ಸ್ಪಂದನೆ ನೀಡದೇ ಇರುವುದು 60 ಸಾವಿರಕ್ಕೂ ಹೆಚ್ಚು ರೈತರನ್ನು ಪರದಾಡುವಂತೆ ಮಾಡಿದೆ.
ತಾಲೂಕಿನಲ್ಲಿ ಸತತ ಒಂದೂವರೆ ತಿಂಗಳಿಂದ ಮಳೆ ಸುರಿಯುತ್ತಿದ್ದು, ಬೆಳೆ ಹಾನಿಗೊಳಗಾದ ಜಿಲ್ಲೆಯ ಸುಮಾರು 2ಲಕ್ಷ, ತಾಲೂಕಿನ 60 ಸಾವಿರಕ್ಕೂ ಅಧಿಕ ರೈತರು ಪ್ರಧಾನ ಮಂತ್ರಿ ಫಸಲು ಭಿಮಾ ಯೋಜನೆ ಅಡಿಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಆದರೆ ಸುಮಾರು 45ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು, ಬೆಳೆಗಳು ನಾಶವಾಗತೊಡಗಿದೆ.
ಅತಿ ಹೆಚ್ಚಿನ ಮಳೆಯಿಂದ ಬೆಳೆ ನಾಶವಾದರೆ ಪ್ರಧಾನ ಮಂತ್ರಿ ಫಸಲು ಭಿಮಾ ಯೋಜನೆಯ ನಿಯಮದಂತೆ 72 ಗಂಟೆಯಲ್ಲಿ ವಿಮಾ ಕಂಪನಿಗೆ ರೈತರು ದೂರು ಕೊಡಬೇಕೆಂಬ ನಿಯಮವಿದೆ. ಆದರೆ ದೂರು ಕೊಡಲು ಕಂಪನಿಯಿಂದ ನೀಡಿದ ಸಹಾಯವಾಣಿ ಸಂಖ್ಯೆ 18002005142 ಕರೆ ಮಾಡಿದಾಗ ರೈತರ ಸಂಪರ್ಕಕ್ಕೆ ಸಿಗುತ್ತಿಲ್ಲ. ಒಂದೊಮ್ಮೆ ಸಂಪರ್ಕಕ್ಕೆ ಸಿಕ್ಕರೂ ರೈತರಿಗೆ ದೂರು ನೋಂದಾಯಿಸಿಕೊಳ್ಳಲು ತಾಂತ್ರಿಕ ಅಡೆಚಣೆಗಳಿಂದ ಹಿಂದೇಟಾಗುತ್ತಿದೆ. ಹೀಗಾಗಿ ರೈತರು ತಮ್ಮ ಬೆಳೆ ಹಾನಿ ದೂರು ದಾಖಲಿಸಲು ಕೃಷಿ ಇಲಾಖೆ ಹಾಗೂ ವಿಮಾ ಕಂಪನಿಯ ಕಚೇರಿಗಳಿಗೆ ಎಡಬಿಡದೆ ಅಲೆಯುವ ದೃಶ್ಯ ಸಾಮಾನ್ಯವಾಗಿದೆ. ರೈತರ ಈ ಅಲೆದಾಟಕ್ಕೆ ಕಾರಣ ಅತಿ ಮಳೆಯಿಂದ ಬೆಳೆ ಹಾನಿಗೊಂಡ ರೈತರಿಗೆ ಪರಿಹಾರ ನೀಡುವ ಉದ್ದೇಶವನ್ನು ಕಂಪನಿಗಳು ತೋರುತ್ತಿಲ್ಲ. ಹೀಗಾಗಿ ರೈತರ ಗೋಳು ಕೇಳುವ ಪರಿಸ್ಥಿತಿಯಲ್ಲಿ ವಿಮಾ ಕಂಪನಿಯ ಅನುಸರಿಸುತ್ತಿಲ್ಲವೆಂದು ಅನೇಕ ರೈತರು ದೂರವಾಣಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.
ರೈತರು ವಿಮೆ ನೋಂದಣಿ ಮಾಡಬೇಕೆಂದು ಸರ್ಕಾರ ಸಾಕಷ್ಟು ಕಸರತ್ತು ಮಾಡಿ ಅತ್ಯಧಿಕ ರೈತರಿಂದ ಬೆಳೆ ವಿಮೆ ನೋಂದಾಯಿಸಿದೆ. ಆದರೆ ಕಷ್ಟದಲ್ಲಿ ಕೈ ಹಿಡಿಯಬೇಕಾದ ವಿಮಾ ಕಂಪನಿ ರೈತರ ದೂರು ಪಡೆಯಲು ತಾಂತ್ರಿಕ ತೊಂದರೆ ಮುಂದೆ ಮಾಡಿ ಸತಾಯಿಸುತ್ತಿದೆ. ಸಹಾಯವಾಣಿಯಲ್ಲಿ ದೂರು ದಾಖಲಾಗದಿದ್ದರೆ ಸಂಬಂಧಿತ ರೈತ ಸಂಪರ್ಕ ಕೇಂದ್ರಗಳಿಗೆ ದೂರು ಸಲ್ಲಿಸಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಪಿ.ಎಂ. ಮಲ್ಲಿಕಾರ್ಜುನ ಹೇಳುತ್ತಿದ್ದಾರೆ. ಆದರೆ ಮನೆಯಲ್ಲಿ ಕುಳಿತು ಟೋಲ್ ಫೀ ನಂಬರ್‌ನಲ್ಲಿ ಬೆಳೆ ಹಾನಿ ಕುರಿತು ದೂರು ದಾಖಲಿಸಬೇಕಿದ್ದ ರೈತರು ಒಂದು ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆದಾಡಿ ಬೆಳೆಹಾನಿ ದಾಖಲೆಗೆ ಪರದಾಡುತ್ತಿದ್ದಾರೆ. ಸರ್ಕಾರ ವಿಮಾ ಕಂಪನಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಟೋಲ್ ಫೀ ನಂಬರ್ ಮುಖಾಂತರ ರೈತರು ತಮ್ಮ ಸ್ಥಳದಿಂದಲೇ ಹಾನಿ ಕುರಿತು ದಾಖಲಿಸುವಂತೆ ಪ್ರಕ್ರಿಯೆ ಸರಳಗೊಳಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ದೂರು ನೀಡಲು 72 ಗಂಟೆ ಅವೈಜ್ಞಾನಿಕ ಬೆಳೆಹಾನಿಯಾದ 72 ಗಂಟೆಯಲ್ಲಿ ಹಾನಿಯ ವರದಿ ಯನ್ನು ವಿಮಾ ಕಂಪನಿಗಳಿಗೆ ದೂರು ನೀಡಬೇಕು ಎಂಬುದು ಅವೈಜ್ಞಾನಿಕವಾಗಿದೆ. ಇದರಿಂದ ಪ್ರಧಾನ ಮಂತ್ರಿ ಫಸಲು ಭಿಮಾ ಯೋಜನೆ ರೈತರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹಾನಿ ದೂರು ದಾಖಲೆಗೆ ಕನಿಷ್ಟವಾರವಾದರೂ ಕಾಲಾವಕಾಶ ನೀಡಬೇಕೆಂದು ರೈತರು ಕೇಳತೊಡಗಿದ್ದಾರೆ. ಆದರೆ ಕಂಪನಿ ಮಾತ್ರ ಇದಕ್ಕೆ ಸ್ಪಂದಿಸಿಲ್ಲ. ಈಗಲೂ ಕಾಲಮಿಂಚಿಲ್ಲ. ಸಂಬಂಧಿತ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಫಸಲು ಭಿಮಾ ಅಡಿಯಲ್ಲಿ ನೋಂದಾಯಿಸಲು ಮುಂದೆ ಬರಲ್ಲ ಎಂದು ರೈತ ಸಮುದಾಯ ಎಚ್ಚರಿಸಿದೆ.
-ಮಹಾದೇವ ವಡಗಾಂವ