ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ ಮುಂಬಯಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಪತ್ತೆಯಾಗಿ ರನ್‌ವೇಯಿಂದ ವಾಪಸಾದ ಘಟನೆ ರವಿವಾರ ಸಂಭವಿಸಿದ್ದು, ಏರ್ ಇಂಡಿಯಾ ಸಂಸ್ಥೆಯು ಪ್ರಯಾಣಿಕರಿಗೆ ಸೋಮವಾರ ಮುಂಬಯಿಗೆ ಪಯಣಿಸುವ ವ್ಯವಸ್ಥೆ ಮಾಡಿದೆ.
ರವಿವಾರ ಮಧ್ಯಾಹ್ನ 12.20ಕ್ಕೆ ವಿಮಾನವು ಪ್ರಯಾಣಿಕರನ್ನು ಹೊತ್ತು ರನ್‌ವೇಯಲ್ಲಿ ಚಲನೆ ಆರಂಭಿಸಿತ್ತು. ಕೆಲವೇ ಮೀಟರ್‌ಗಳಷ್ಟು ದೂರ ಕ್ರಮಿಸಿದಾಗ ವಿಮಾನದ ಎಂಜಿನ್‌ನ ಸ್ಟಾರ್ಟರ್‌ನಲ್ಲಿ ಲೋಪ ಕಂಡುಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ರನ್‌ವೇಯಿಂದ ನಿಲ್ದಾಣಕ್ಕೆ ಮರಳಿದೆ.
ವಿಮಾನದಲ್ಲಿ 116 ಮಂದಿ ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದೆ. ಈ ವಿಮಾನ 180 ಆಸನ ಸಾಮರ್ಥ್ಯದ್ದಾಗಿದೆ. ರದ್ದುಗೊಂಡ ವಿಮಾನದ ಎಲ್ಲ ಪ್ರಯಾಣಿಕರಿಗೆ ನಗರದ ಹೊಟೇಲ್‌ನಲ್ಲಿ ತಂಗಲು ಏರ್ ಇಂಡಿಯಾ ಸಂಸ್ಥೆಯು ವ್ಯವಸ್ಥೆಯನ್ನು ಕಲ್ಪಿಸಿದೆ. ಈ ಪ್ರಯಾಣಿಕರಿಗೆ ಸೋಮವಾರ ಬೆಳಗ್ಗೆ 6 ಗಂಟೆಗೆ ಮುಂಬಯಿಗೆ ಪ್ರಯಾಣಿಸಲು ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನದ ಎಂಜಿನ್‌ನಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ದೋಷವನ್ನು ಸರಿಪಡಿಸಲು ಅಗತ್ಯವಾಗಿರುವ ಬಿಡಿಭಾಗ ರವಿವಾರ ರಾತ್ರಿ ಮುಂಬಯಿಯಿಂದ ಮಂಗಳೂರಿಗೆ ಬಂದ ವಿಮಾನದ ಮೂಲಕ ತರಿಸಲಾಗಿದೆ ಎನ್ನಲಾಗಿದ್ದು, ರಾತ್ರಿ ವೇಳೆ ದುರಸ್ತಿ ಕಾಮಗಾರಿ ನಡೆಸಿ ಸೋಮವಾರ ಬೆಳಗ್ಗೆ ವಿಮಾನ ಟೇಕ್ ಆಫ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬರುತ್ತಿರುವುದು ಕಳೆದ ಮೂರು ತಿಂಗಳಲ್ಲಿ ಇದು 3ನೇ ಬಾರಿ.