Advertisement
ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳಲ್ಲಿ ಮೀಡಿಯನ್, ಬಸ್ ಬೇ ನಿರ್ಮಾಣ, ಜಂಕ್ಷನ್‌ಗಳ ಅಭಿವೃದ್ಧಿ, ಲೇನ್ ಮಾರ್ಕಿಂಗ್, ಜೀಬ್ರಾ ಕ್ರಾಸಿಂಗ್ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ 2017-18 ಮತ್ತು 2018-19ನೇ ಸಾಲಿನಲ್ಲಿ 109 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಪೈಕಿ ಶೇ. 25ರಷ್ಟು ಕಾಮಗಾರಿಗಳನ್ನು ಸಹ ನಿರ್ವಹಿಸದೆ, ಶೇ 75ರಷ್ಟು ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ದಾಖಲೆ ಸಹಿತ ಟಿಇಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಈ ಹಿಂದಿನ ಆಯುಕ್ತರು, ಮೇಯರ್‌ಗೆ ದೂರು ನೀಡಿದ್ದರು.
Related Articles
Advertisement
ಬಹುತೇಕ ರಸ್ತೆಗಳಲ್ಲಿ ಅಳವಡಿಸಿರುವ ಮೀಡಿಯನ್ ಮಾರ್ಕ್‌ಗಳು ಕಿತ್ತು ಬಂದು ಹಾಳಾಗಿವೆ. ರಸ್ತೆ ಉಬ್ಬುಗಳು, ಎಚ್‌ಆರ್‌ಪಿಸಿ, ಜೀಬ್ರಾ ಕ್ರಾಸಿಂಗ್ಸ್, ಪಾದಚಾರಿ ಪಥ, ಲೇನ್ ಮಾರ್ಕಿಂಗ್, ಮೀಡಿಯನ್, ಕಬ್ಸ್ìಗಳಿಗೆ ಬಳಿದಿರುವ ಬಣ್ಣಗಳು ನಿರ್ವಹಣಾ ಅವಧಿ ಮುಗಿಯುವ ಮುನ್ನವೇ ಅಳಿಸಿ ಹೋಗಿವೆ. ಹೆಬ್ಟಾಳ ಮೇಲ್ಸೇತುವೆ ಬಳಿ ಚೈನ್ ಲಿಂಕ್ ಬೇಲಿ ಅಳವಡಿಕೆ, ಸುಮನಹಳ್ಳಿ ಸೇತುವೆ ಬಳಿ ಹಾಕಲಾಗಿರುವ ತಂತಿ ಬೇಲಿಯಲ್ಲಿನ ಎಂ.ಎಸ್ ಪೋಲ್ ಕಾಮಗಾರಿಗಳಿಗೂ ಹಾಗೂ ಇದಕ್ಕೆ ಬಿಲ್ ಕ್ಲೈಂ ಮಾಡಿರುವುದಕ್ಕೂ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ.
ಮಾರತ್‌ಹಳ್ಳಿ ಮುಖ್ಯರಸ್ತೆಯಲ್ಲಿ 1 ಮೀಟರ್ ಎತ್ತರದ 250 ಮೀಡಿಯನ್‌ಗಳನ್ನು ನಿರ್ಮಿಸಬೇಕಿತ್ತು. ಆದರೆ, 236 ಮೀಡಿಯನ್‌ಗಳನ್ನು ನಿರ್ಮಿಸಲಾಗಿದ್ದು, 14 ಹೆಚ್ಚುವರಿ ಮೀಡಿಯನ್‌ಗಳ ಸಂಖ್ಯೆಯನ್ನು ಇ-ಅಳತೆ ಪುಸ್ತಕದಲ್ಲಿ ದಾಖಲಿಸಲಾಗಿದೆ. ಮಾರತ್‌ಹಳ್ಳಿಯ ಐಒಸಿ ಪೆಟ್ರೋಲ್ ಬಂಕ್ ಬಳಿಕ 0.60 ಮೀ. ಎತ್ತರದ ಮೀಡಿಯನ್‌ಗಳನ್ನು ಅಳವಡಿಸಿದ್ದರೂ, ಒಂದು ಮೀ ಎತ್ತರದ 30 ಮೀಡಿಯನ್‌ಗಳನ್ನು ಹಾಕಿರುವುದಾಗಿ ನಮೂದಿಸಲಾಗಿದೆ.
ಕೆ.ಜಿ.ರಸ್ತೆಯ ಎಸ್‌ಸಿ ರಸ್ತೆ ಜಂಕ್ಷನ್‌ನಿಂದ ಕಾರ್ಪೋರೇಷನ್ ಬಸ್ ನಿಲ್ದಾಣದವರೆಗೆ ಸೈಕಲ್ ಪಥವನ್ನೇ ನಿರ್ಮಿಸಿಲ್ಲ. ಅಲ್ಲದೆ ಕೆಆರ್‌ಐಡಿಎಲ್ ಸಂಸ್ಥೆಗೆ ಮುಂಗಡವಾಗಿ ಶೇ 50ರಷ್ಟು ಬಿಲ್ ಮೊತ್ತ ಪಾವತಿಸಿ, ಎಂಜಿನಿಯರ್‌ಗಳು ಕರ್ತವ್ಯಲೋಪವೆಸಗಿರುವುದು ಬಹಿರಂಗವಾಗಿತ್ತು.
ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವಾಗಲಿ: “ಟಿವಿಸಿಸಿ ತನಿಖಾ ವರದಿಯಲ್ಲಿ ಟಿಇಸಿ ವಿಭಾಗದ ಇಇ ಪ್ರವೀಣ್ ಲಿಂಗಯ್ಯ, ಎಇಇಗಳಾದ ದೇವರಾಜೇಗೌಡ, ಶ್ರೀನಿವಾಸ್, ಪ್ರಕಾಶ್ ರಾವ್, ಇಂದ್ರಾಣಿ, ಅಜರ್ ಪಾಷಾ, ಲೆಕ್ಕ ಅಧೀಕ್ಷರಾದ ಅನುಸೂಯ ಮತ್ತು ಮಾಯಣ್ಣ ಅವರು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಪಾಲಿಕೆಗೆ ಕೋಟ್ಯಂತರ ರೂ. ವಂಚಿಸಿರುವುದು ಬಯಲಾಗಿದೆ. ತನಿಖಾ ವರದಿ ಆಧರಿಸಿ, ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು’ ಎಂದು ಎನ್.ಆರ್.ರಮೇಶ್ ಅವರು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಸೋಮವಾರ ಮುಖ್ಯಮಂತ್ರಿಯವರು ಆದೇಶ ಹೊರಡಿಸಿದ್ದು, ಟ್ರಾಫಿಕ್ ಎಂಜಿನಿಯರಿಂಗ್ ಸೆಲ್ ವಿಭಾಗದ ಎರಡು ವರ್ಷಗಳ ಕಾಮಗಾರಿಗಳಲ್ಲಿನ ಅವ್ಯವಹಾರ ಆರೋಪಗಳ ಬಗ್ಗೆ ಭ್ರಷ್ಟಚಾರ ನಿಗ್ರಹ ದಳದಿಂದ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ. ಎಸಿಬಿ ತನಿಖೆಗೆ ವಹಿಸಿರುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಿಗೂ ಪತ್ರ ಬರೆದು ತಿಳಿಸಲಾಗಿದೆ.