ಬೆಂಗಳೂರು: ಪ್ರೀತಿಗೆ ನಿರಾಕರಿಸಿದ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣದ ಪಾಗಲ್ ಪ್ರೇಮಿ ನಾಗೇಶ್‌ನನ್ನು ಕಾಮಾಕ್ಷಿಪಾಳ್ಯ ಪೊಲೀಸರು ತಮಿಳುನಾಡಿನ ತಿರುವಣ್ಣಾಮಲೈಗೆ ಕರೆದೊಯ್ದು ಸ್ಥಳ ಮಹಜರು ಮಾಡಿಸಿದ್ದಾರೆ. ಮತ್ತೊಂದೆಡೆ ಯುವತಿಯ ಮೇಲೆ ಆ್ಯಸಿಡ್ ಎರಚಿರುವುದಕ್ಕೆ ನಾಗೇಶ್ ಪಶ್ಚಾತಾಪ ಪಟ್ಟು ಕಣ್ಣೀರು ಹಾಕುತ್ತಿದ್ದಾನೆ ಎಂದು ಹೇಳಲಾಗಿದೆ.
ಕೃತ್ಯ ಎಸಗಿದ ಬಳಿಕ ಆರೋಪಿ ನೆರೆ ರಾಜ್ಯಗಳಲ್ಲಿ ಸುತ್ತಾಡಿ ತಮಿಳುನಾಡಿನ ತಿರುವಣ್ಣಾ ಮಲೈನಲ್ಲಿರುವ ಆಶ್ರಮವೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದ. ಹೀಗಾಗಿ ಆ ಆಶ್ರಮಕ್ಕೆ ಆರೋಪಿಯನ್ನು ಕರೆದೊಯ್ದು ಮಹಜರು ಮಾಡಲಾಗಿದೆ.
ಜತೆಗೆ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿರುವ ಆರೋಪಿ, “ನಾನು ತಪ್ಪು ಮಾಡಿದ್ದೇನೆ. ಕನಸಿನಲ್ಲಿ ಯೋಚಿಸಿದ ಕೃತ್ಯ ಎಸಗಿದ್ದೇನೆ. ನಾನು ಇಂತಾ ಅನ್ಯಾಯ ಮಾಡಬಾರದಿತ್ತು. ನಾನು ಮಾಡಿರುವುದು ತಪ್ಪು. ಆದರೆ, ನನಗೆ ಸಿಗದಿದ್ದು, ಬೇರೆಯವರಿಗೆ ಸಿಗಬಾರದು ಎಂಬ ಕಾರಣಕ್ಕೆ ಆ್ಯಸಿಡ್ ಹಾಕಿದ್ದೇನೆ. ಕೃತ್ಯ ಎಸಗಿದ ಮರುಕ್ಷಣವೇ ತಪ್ಪಿನ ಅರಿವಾಯಿತು. ನನಗೆ ಇನ್ನೂ ಶಿಕ್ಷೆ ಆಗಬೇಕು. ನಮ್ಮ ಅಣ್ಣ ಯುವತಿಯ ತಂಟೆಗೆ ಹೋಗಬೇಡ ಎಂದು ಎಚ್ಚರಿಕೆ ನೀಡಿದ್ದ. ಆದರೂ ಆಕೆಗೆ ಹಿಂಸೆ ನೀಡಿದ್ದೇನೆ. ಆಕೆ ನನ್ನ ಜತೆ ಚೆನ್ನಾಗಿ ಮಾತನಾಡುವುದನ್ನು ಕಂಡು ಪ್ರೀತಿಸುತ್ತಿರಬಹುದು ಎಂದುಕೊಂಡಿದ್ದೆ. ಆದರೆ, ಆಕೆ ನನ್ನನ್ನು ಪ್ರೀತಿಸುತ್ತಿರಲಿಲ್ಲ. ಶಿಕ್ಷೆ ಅನುಭವಿಸಿಕೊಂಡು ಒಳ್ಳೆಯವನಾಗಬೇಕು. ಇನ್ನು ಮದುವೆ ಆಗದೇ ನನ್ನ ಪಾಡಿಗೆ ನಾನು ಇದ್ದುಬಿಡುತ್ತೇನೆ’ ಎಂದು ಪೊಲೀಸರ ಎದುರು ಕಣ್ಣೀರು ಸುರಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕೋಡಿಂಬಾಳ: ನೂರು ರೂ. ನೋಟಿನ ಕಲರ್ ಜೆರಾಕ್ಸ್ ಚಲಾವಣೆ