ನವದೆಹಲಿ:ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸಚಿನ್ ಪೈಲಟ್ ಹಾಗೂ ಇತರ 18 ಮಂದಿ ಬಂಡಾಯ ಶಾಸಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ರಾಜಸ್ಥಾನ ಹೈಕೋರ್ಟ್ ನೀಡಿರುವ ನಿರ್ದೇಶನ ಪ್ರಶ್ನಿಸಿ ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ(ಸ್ಪೆಷಲ್ ಲೀವ್ ಪಿಟಿಷನ್) ಸಲ್ಲಿಸಿದ್ದಾರೆ.
ಪೈಲಟ್ ಹಾಗೂ ಇತರ 18 ಶಾಸಕರ ವಿರುದ್ಧ ಶುಕ್ರವಾರದವರೆಗೂ ಅನರ್ಹತೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ನೀಡಿರುವ ತೀರ್ಪನ್ನೇ ಸ್ಪೀಕರ್ ಸುಪ್ರೀಂನಲ್ಲಿ ಪ್ರಶ್ನಿಸಿದ್ದಾರೆ.
ಸ್ಪೀಕರ್ ಸುಪ್ರೀಂಗೆ ನೀಡಿರುವ ದೂರಿನಲ್ಲಿ, ಹೈಕೋರ್ಟ್ ಆದೇಶ ಸ್ಪೀಕರ್ ಅವರ ಅಧಿಕಾರವನ್ನು ಅಪಮಾನಿಸುವ ಹಾಗೂ ಕಾನೂನುಬಾಹಿರವಾಗಿದೆ ಎಂದು ತಿಳಿಸಿದ್ದಾರೆ.
ಶಾಸಕಾಂಗ ಸಭೆಗೆ ಗೈರುಹಾಜರಾದ ಶಾಸಕರ ವಿರುದ್ಧ 10ನೇ ಪರಿಚ್ಛೇದದ ಅಡಿಯಲ್ಲಿ ಪ್ರಕ್ರಿಯೆ ನಡೆಸುವ ಮೊದಲೇ ಗೌರವಾನ್ವಿತ ನ್ಯಾಯಾಲಯ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಬಾರದು ಎಂದು ಸ್ಪೀಕರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶಾಸಕರ ಅನರ್ಹತೆ ವಿಧಾನಸಭಾ ಕಲಾಪದ ಅಂಗವಾಗಿದೆ. ಈ ನಿಟ್ಟಿನಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ವಿರೋಧಿಯಲ್ಲದೇ, ಸ್ಪೀಕರ್ ಅವರ ಅಧಿಕಾರ ಮೊಟಕುಗೊಳಿಸಿದಂತೆ ಎಂದು ವಾದಿಸಿದ್ದಾರೆ.